ADVERTISEMENT

ಹುಬ್ಬಳ್ಳಿ: ರಾಷ್ಟ್ರಧ್ವಜ ತಯಾರಕರ ಜೊತೆ ಒಂದು ದಿನ...

ಬೆಂಗೇರಿ, ಗರಗ ಗ್ರಾಮದಲ್ಲಿ ಖಾದಿಯೇ ಬದುಕು, ಅದುವೇ ಜೀವಾಳ

ರಾಹುಲ ಬೆಳಗಲಿ
Published 11 ಆಗಸ್ಟ್ 2025, 2:56 IST
Last Updated 11 ಆಗಸ್ಟ್ 2025, 2:56 IST
<div class="paragraphs"><p>ಗರಗ ಕ್ಷೇತ್ರೀಯ ಸೇವಾ ಸಂಘದಲ್ಲಿ ನೂಲುವ ಕ್ರಿಯೆಯಲ್ಲಿ ತೊಡಗಿರುವ ಮಹಿಳೆ ಪ್ರಜಾವಾಣಿ ಚಿತ್ರಗಳು: ಗೋವಿಂದರಾಜ ಜವಳಿ</p></div>

ಗರಗ ಕ್ಷೇತ್ರೀಯ ಸೇವಾ ಸಂಘದಲ್ಲಿ ನೂಲುವ ಕ್ರಿಯೆಯಲ್ಲಿ ತೊಡಗಿರುವ ಮಹಿಳೆ ಪ್ರಜಾವಾಣಿ ಚಿತ್ರಗಳು: ಗೋವಿಂದರಾಜ ಜವಳಿ

   

ಹುಬ್ಬಳ್ಳಿ: ದೂರದಿಂದಲೇ ಕೇಳಿ ಬರುವ ನೇಯ್ಗೆ ಶಬ್ದ, ಅಲ್ಲೇ ಸಮೀಪದಲ್ಲೇ ಚರಕದ ಸದ್ದು. ಮುಂದೆ ಹೆಜ್ಜೆ ಹಾಕಿದಂತೆ ಅಚ್ಚು ಒತ್ತುವ ಸಪ್ಪಳ, ಅದರ ಪಕ್ಕದಲ್ಲೇ ಹೊಲಿಗೆ ಯಂತ್ರದ ಟಿಕ್‌ಟಿಕ್. ನಂತರ ಬೃಹದಾಕಾರದ ಧ್ವಜಗಳನ್ನು ಆಪ್ತವಾಗಿ ಮಡಚಿ, ಜೋಪಾನವಾಗಿ ಇಡುವ ದೃಶ್ಯ…

ಧಾರವಾಡ ಜಿಲ್ಲೆಯ ಗರಗ ಮತ್ತು ಬೆಂಗೇರಿಯಲ್ಲಿ ಇರುವ ಖಾದಿ ಗ್ರಾಮೋದ್ಯೋಗ ಕೇಂದ್ರಗಳಿಗೆ ಭೇಟಿ ನೀಡಿದರೆ, ಇಂಥ ಅನುಭೂತಿ ನಿಶ್ಚಿತ. ವರ್ಷ 2025ರಲ್ಲಿ ನಾವಿದ್ದರೂ 1960–70ರ ದಿನಗಳನ್ನು ಅವು ನೆನಪಿಸುತ್ತವೆ. ಅಲ್ಲಿನ ಕಾರ್ಯವೈಖರಿ, ಜೀವನಶೈಲಿಯೇ ಅಂಥದ್ದು.

ADVERTISEMENT

ದೇಶಕ್ಕೆ ರಾಷ್ಟ್ರಧ್ವಜಗಳನ್ನು ಸಿದ್ಧಪಡಿಸಿಕೊಡುವ ಮಹತ್ವದ ಜವಾಬ್ದಾರಿ ಹೊತ್ತಿರುವ ಗರಗ ಕ್ಷೇತ್ರೀಯ ಸೇವಾ ಸಂಘ ಮತ್ತು ಬೆಂಗೇರಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ಆವರಣಕ್ಕೆ ಭೇಟಿ ನೀಡಿದರೆ, ಖಾದಿಯ ಮಹತ್ವ ಅರಿವಿಗೆ ಬರುತ್ತದೆ.

ಬ್ರಿಟಿಷರ ದಬ್ಬಾಳಿಕೆಯಿಂದ ಮುಕ್ತಿ ಪಡೆದು, ದೇಶವು ಸ್ವಾತಂತ್ರಗೊಂಡು ಹಲವು ದಶಕಗಳೇ ಕಳೆದಿವೆ. ಆದರೆ, ಗರಗ ಮತ್ತು ಬೆಂಗೇರಿಯ ಎರಡೂ ಖಾದಿ ಕೇಂದ್ರಗಳು ತಮ್ಮನ್ನು ತಾವು ಬದಲಿಸಿಕೊಳ್ಳಲು ಬಯಸಿಲ್ಲ. ಎಷ್ಟು ಸರಳ, ಸಹಜ ಸಾಧ್ಯವೋ, ಅಷ್ಟನ್ನು ಶ್ರದ್ಧಯಿಂದ ರೂಢಿಸಿಕೊಂಡಿದ್ದಾರೆ.

‘ಖಾದಿ ಬರೀ ಬಟ್ಟೆಯಲ್ಲ, ಅದು ಸ್ವಾವಲಂಬನೆ ಮತ್ತು ಸ್ವಾಭಿಮಾನದ ಪ್ರತೀಕ’ ಎಂದು ಮಹಾತ್ಮ ಗಾಂಧೀಜಿ ಅವರ ಹೇಳಿದ ಮಾತನ್ನು ತಪ್ಪದೇ ಪಾಲನೆಯಾಗುತ್ತಿದೆ ಎಂಬುದಕ್ಕೆ ಅಲ್ಲಿನ ಕೆಲಸಗಾರರೇ ಸಾಕ್ಷಿ. ‘ದುಡಿದಷ್ಟು ಕೂಲಿ’ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಅವರು ಅದಕ್ಕೆ ಬದ್ಧರಾಗಿದ್ದಾರೆ.

ಗರಗ ಕ್ಷೇತ್ರೀಯ ಸೇವಾ ಸಂಘ

ಧಾರವಾಡದಿಂದ 17 ಕಿ.ಮೀ. ದೂರದಲ್ಲಿರುವ ಗರಗ ಗ್ರಾಮದಲ್ಲಿನ ಗರಗ ಕ್ಷೇತ್ರೀಯ ಸೇವಾ ಸಂಘದ ಇತಿಹಾಸವೇ ಬೆರಗು ಮೂಡಿಸುತ್ತದೆ. ದಶಕಗಳೇ ಕಳೆದರೂ ಅದು ಆಧುನಿಕತೆ ಶೈಲಿ ಮತ್ತು ಅದರ ಹೊಳಪಿಗೆ ಮಾರು ಹೋಗಿಲ್ಲ. ಕಟ್ಟಡ, ಕೆಲಸ, ಬದುಕು ಎಲ್ಲವೂ ಮೊದಲಿನಂತಿದೆ.

ಗ್ರಾಮದಲ್ಲಿ ಇರುವ ಸೇವಾ ಸಂಘದ ಮುಖ್ಯ ಕಚೇರಿಯಲ್ಲಿ ಈಗಲೂ ಮೇಜು, ಕುರ್ಚಿಯಿಲ್ಲ. ನೆಲದ ಮೇಲೆ ಹಾಸಲಾದ ಗಾದಿ, ಹೊದಿಕೆ ಮೇಲೆ ಕೂತು ಸಭೆ ನಡೆಸುತ್ತಾರೆ. ಮಧ್ಯವಯಸ್ಕರು, ವೃದ್ಧರೇ ಹೆಚ್ಚಿರುವ ಈ ಸಂಘದಲ್ಲಿ 30ಕ್ಕೂ ಹೆಚ್ಚು ವರ್ಷಗಳಿಂದ ದುಡಿಯುತ್ತಿರುವವರು ಹಲವರು ಇದ್ದಾರೆ.

‘ರಾಷ್ಟ್ರಧ್ವಜಕ್ಕೆ ಬೇಕಾದ ಬಟ್ಟೆಗಳನ್ನು ಉತ್ಪಾದಿಸುವಲ್ಲಿ ನಾವು ಮೇಲುಗೈ ಸಾಧಿಸಿದ್ದೇವೆ. ಗುಣಮಟ್ಟದ ವಿಷಯದಲ್ಲಿ ಯಾವತ್ತಿಗೂ ರಾಜಿ ಮಾಡಿಕೊಂಡಿಲ್ಲ. ಬೇಡಿಕೆ ಅನುಸಾರ ಖಾದಿ ವಸ್ತ್ರವನ್ನು ಉತ್ಪಾದಿಸಿ ಕೊಡುತ್ತಿದ್ದ ನಾವೇ ಈಗ ರಾಷ್ಟ್ರಧ್ವಜ ಸಿದ್ಧಪಡಿಸುತ್ತಿದ್ದೇವೆ. ಕಳೆದ ವರ್ಷ ಉತ್ತಮ ಸ್ಪಂದನೆ ಸಿಕ್ಕಿತು’ ಎಂದು ಗರಗ ಕ್ಷೇತ್ರೀಯ ಸೇವಾ ಸಂಘದ ಅಧ್ಯಕ್ಷ ಈಶ್ವರಪ್ಪ ಇಟಗಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಡಿಮೆ ಕೂಲಿಗೆ ಕೆಲಸ ಮಾಡಲು ಬಯಸುವವರಿಗೆ ನಾವು ಉದ್ಯೋಗ ನೀಡುತ್ತೇವೆ. ದೂರದ ಊರುಗಳಿಗೆ ವಲಸೆ ಹೋಗುವ ಬದಲು ಯುವಜನರು ಇಲ್ಲಿಯೇ ಖಾದಿ ಕೇಂದ್ರದಲ್ಲಿ ಕೆಲಸ ಮಾಡಿದರೆ, ನಿರುದ್ಯೋಗ ಸಮಸ್ಯೆ ಇರಲ್ಲ. ಊರಿನ ಜೊತೆಗೆ ಅವರು ಏಳ್ಗೆಯಾಗುತ್ತಾರೆ’ ಎಂಬ ಕಳಕಳಿ ಅವರದ್ದು.

ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ

ರಾಷ್ಟ್ರಧ್ವಜ ತಯಾರಿಕೆಗಷ್ಟೇ ಸೀಮಿತವಾಗದೇ ವಿವಿಧ ಖಾದಿ ಉತ್ಪನ್ನಗಳನ್ನು ಸಿದ್ಧಪಡಿಸುವಲ್ಲಿ ಪರಿಣತಿ ಗಳಿಸಿರುವ ಹುಬ್ಬಳ್ಳಿಯ ಬೆಂಗೇರಿಯಲ್ಲಿನ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘವು ವಿಶಾಲ ಆವರಣ ಹೊಂದಿದೆ. ಪ್ರತ್ಯೇಕ ಗೋದಾಮು ಮತ್ತು ಗೋದಾಮು ಸೌಲಭ್ಯವನ್ನೂ ಹೊಂದಿದೆ.

20ಕ್ಕೂ ಹೆಚ್ಚು ವರ್ಷಗಳಿಂದ ರಾಷ್ಟ್ರಧ್ವಜ ತಯಾರಿಕೆಗೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿರುವ ಹಲವು ಮಹಿಳೆಯರು ಬೇರೆ ಕೆಲಸ ಅಥವಾ ಸಂಸ್ಥೆಗಳಿಗೆ ಹೋಗುವತ್ತ ಇಚ್ಛೆ ತೋರಿಲ್ಲ. ‘ಖಾದಿ ತಯಾರಿಕೆ ಎಂಬುದು ದೇಶದ ಕೆಲಸ. ಸಿಗುವ ಕೂಲಿ ಹಣ ಕಡಿಮೆಯಿದ್ದರೂ ಇದಕ್ಕಿಂತ ದೊಡ್ಡ ಕೆಲಸ ಇನ್ನೊಂದಿಲ್ಲ’ ಎಂದು ನಂಬಿದವರು ಅವರು.

‘ಮೂರು ವರ್ಷಗಳಿಂದ ಖಾದಿಯ ರಾಷ್ಟ್ರಧ್ವಜಕ್ಕೆ ಬೇಡಿಕೆ ಕುಸಿದಿದೆ. ಆದರೆ, ರಾಷ್ಟ್ರಧ್ವಜ ತಯಾರಿಕೆ ಕೆಲಸ ನಿಂತಿಲ್ಲ. ಯಾವಾಗ ಬೇಕಾದರೂ ಬೇಡಿಕೆ ಬರಬಹುದು ಎಂಬ ನಿರೀಕ್ಷೆಯಲ್ಲಿ ರಾಷ್ಟ್ರಧ್ವಜಗಳನ್ನು ತಯಾರಿಸುತ್ತಿದ್ದೇವೆ. ಖಾದಿ ಧ್ವಜ ಖರೀದಿಸುವವರು ಕಡಿಮೆಯಾಗಿದ್ದಾರೆ ಎಂಬ ಬೇಸರ ಇದೆ. ಆದರೆ, ಆಶಾಭಾವನೆ ಕಳೆದುಕೊಂಡಿಲ್ಲ’ ಎಂದು ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ವ್ಯವಸ್ಥಾಪಕಿ ಅನ್ನಪೂರ್ಣ ದೊಡ್ಡಮನಿ ತಿಳಿಸಿದರು.

‘ಬದುಕಿನಲ್ಲಿ ಏಳುಬೀಳು ಕಂಡಿದ್ದೇವೆ. ನಿರಾಸೆಗೊಂಡಿದ್ದೇವೆ. ಆದರೆ, ಖಾದಿ ಗ್ರಾಮೋದ್ಯೋಗದಲ್ಲಿ ಕೆಲಸವಿಲ್ಲ ಎಂಬ ಮಾತನ್ನು ಈವರೆಗೆ ಕೇಳಿಬಂದಿಲ್ಲ. ಬಂದವರಿಗೆ ಕೆಲಸ ಕೊಡುತ್ತೇವೆ. ಸದ್ಯಕ್ಕೆ ಕೈಚೀಲ ತಯಾರಿಸುತ್ತಿದ್ದೇವೆ. ಮುಂದೆ ಬೇರೆ ಉತ್ಪನ್ನಗಳನ್ನೂ ತಯಾರಿಸುತ್ತೇವೆ’ ಎಂದು ಅವರು ವಿವರಿಸಿದರು.

ಖಾದಿ ಕೆಲಸ ಬಿಟ್ಟು ಬೇರೆಯದ್ದು ನಮಗೆ ಗೊತ್ತಿಲ್ಲ. ಇಲ್ಲಿ ಕೆಲಸ ಮಾಡಿದಷ್ಟು ಸಂತೃಪ್ತಿ ಬೇರೆಯದ್ದರಲ್ಲಿ ಇಲ್ಲ. ದೇಶದ ಪರಂಪರೆ ಕಾಯ್ದುಕೊಳ್ಳುವ ಜವಾಬ್ದಾರಿಯೂ ಇದೆ
ಪ್ರೇಮಾ ಎಸ್.ಪೂಜಾರಿ, ಉದ್ಯೋಗಿ, ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ, ಬೆಂಗೇರಿ
ಖಾದಿ ಉದ್ಯಮವನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಹೆಚ್ಚಿನ ಆಸಕ್ತಿ ತೋರಿಸಬೇಕು. ಖಾದಿಯ ಘನತೆ ಎತ್ತಿ ಹಿಡಿಯಬೇಕು
ನಿರ್ಮಲಾ ಇಳಕಲ್,ಉದ್ಯೋಗಿ, ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ, ಬೆಂಗೇರಿ
ನಮ್ಮ ತಾಯಿಯವರು ಇದೇ ಸೇವಾ ಸಂಘದಲ್ಲಿ ಕೆಲಸ ಮಾಡುತ್ತಿದ್ದರು. ಇಲ್ಲಿಯೇ ತೊಟ್ಟಿಲು ಕಟ್ಟಿ, ಅದರಲ್ಲಿ ನನ್ನನ್ನು ಮಲಗಿಸುತ್ತಿದ್ದರು. ಈಗ ಇಲ್ಲಿ ನಾನು ಕೆಲಸ ಮಾಡುತ್ತಿರುವೆ
ದಿಲಶಾದ್, ಗರಗ ಕ್ಷೇತ್ರೀಯ ಸೇವಾ ಸಂಘ, ಗರಗ
ಇಲ್ಲಿನ ಸೇವಾ ಸಂಘದಲ್ಲಿಯೇ 20ಕ್ಕೂ ಹೆಚ್ಚು ವರ್ಷಗಳಿಂದ ಕೆಲಸ ಮಾಡುತ್ತಿರುವೆ. ಕೂಲಿ ಕಡಿಮೆಯಾದರೂ ಖಾದಿ ಕೆಲಸ ಮಾಡುವುದರಲ್ಲಿ ಖುಷಿ ಇದೆ
ಜನ್ನತ್‌ ಭೀ, ಗರಗ ಕ್ಷೇತ್ರೀಯ ಸೇವಾ ಸಂಘ, ಗರಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.