ಧಾರವಾಡ: ಈರುಳ್ಳಿ ಧಾರಣೆ ತೀವ್ರ ಕುಸಿದಿದೆ. ಈರುಳ್ಳಿಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲು ಮನಸ್ಸಿಲ್ಲದೆ, ಶೇಖರಿಸಿಡಲೂ ಆಗದೆ ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ.
ಮಾರುಕಟ್ಟೆಯಲ್ಲಿ ಸ್ಥಳೀಯ ಈರುಳ್ಳಿ ಕ್ವಿಂಟಲ್‌ಗೆ ₹ 200 ರಿಂದ ₹ 400ರ ವರೆಗೆ ದರ ಇದೆ. ಉತ್ತಮ ಗುಣಮಟ್ಟದ್ದು (ದೊಡ್ಡದು, ತೇವಾಂಶ ಕಡಿಮೆ) ಕ್ವಿಟಲ್‌ಗೆ ₹ 600ರಿಂದ ₹800ರ ವರೆಗೆ ದರ ಇದೆ.
ಈ ಧಾರಣೆಗೆ ಮಾರಾಟ ಮಾಡಿದರೆ ನಷ್ಟವಾಗುತ್ತದೆ. ಬೆಳೆ ಬೆಳೆಯಲು ತಗುಲಿದ ವೆಚ್ಚವೂ ಸಿಗಲ್ಲ ಎಂಬುದು ರೈತರ ಲೆಕ್ಕಾಚಾರ. ಆದರೆ, ಸ್ಥಳೀಯ ಈರುಳ್ಳಿ ಜಾಸ್ತಿ ಹಸಿ ಇರುವುದರಿಂದ ಶೇಖರಿಸಿಡುವುದು ಕಷ್ಟ. ಹೀಗಾಗಿ, ಸಿಕ್ಕಷ್ಟು ಬೆಲೆಗೆ ಮಾರಾಟ ಮಾಡಬೇಕಾದ ಅನಿವಾರ್ಯ ಇದೆ.
‘ಎಕರೆಗೆ 50ರಿಂದ 60 ಕ್ವಿಂಟಲ್ ಇಳುವರಿ ಬಂದಿದೆ. ಬೆಳೆ ಬೆಳೆಯಲು (ಬಿತ್ತನೆ ಬೀಜ, ಗೊಬ್ಬರ, ಕೂಲಿ...) ಎಕರೆಗೆ ₹ 80 ಸಾವಿರ ವರೆಗೆ ಖರ್ಚಾಗಿದೆ. ಎರಡೂವರೆ ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದೇನೆ. ಈರುಳ್ಳಿ ಬೆಲೆ ಕುಸಿದಿರುವುದರಿಂದ ಬೆಳೆಗಾರರಿಗೆ ಬಹಳ ನಷ್ಟವಾಗಿದೆ’ ಎಂದು ಹೆಬ್ಬಳ್ಳಿ ಗ್ರಾಮದ ರೈತ ರಮೇಶ ಹಂಚಿನಮನಿ ಸಂಕಷ್ಟ ತೋಡಿಕೊಂಡರು.
ಜಿಲ್ಲೆಯಲ್ಲಿ 5,358 ಹೆಕ್ಟೇರ್ ಈರುಳ್ಳಿ ಬಿತ್ತನೆ ಮಾಡಲಾಗಿತ್ತು. ತಾಲ್ಲೂಕುವಾರು ನವಲಗುಂದ 2,348, ಧಾರವಾಡ 1,382, ಅಣ್ಣಿಗೇರಿ 1,127, ಹುಬ್ಬಳ್ಳಿ 484 ಹಾಗೂ ಕುಂದಗೋಳ 16 ಹೆಕ್ಟೇರ್‌ನಲ್ಲಿ ಬಿತ್ತೆನಯಾಗಿತ್ತು. ಈ ಪೈಕಿ ಆಗಸ್ಟ್‌ನಲ್ಲಿ ಸತತ ಮಳೆಯಿಂದಾಗಿ ಸುಮಾರು 3 ಸಾವಿರ ಹೆಕ್ಟೇರ್ ಈರುಳ್ಳಿ ಬೆಳೆ ಹಾನಿಯಾಗಿತ್ತು.
‘ಸ್ಥಳೀಯ ಈರುಳ್ಳಿ ತೇವಾಂಶ (ಹಸಿ) ಜಾಸ್ತಿ ಇರುತ್ತದೆ. ಈ ಗಡ್ಡೆ ಶೇಖರಿಸಿಡಲಾಗದು. ಸಿಪ್ಪೆ ಬಿಡುತ್ತದೆ. ಸ್ಥಳೀಯ ಈರುಳ್ಳಿ ದರ ಕ್ವಿಂಟಲ್‌ಗೆ ₹ 200 ರಿಂದ ₹ 1500ರ ವರೆಗೆ (ತುಂಬಾ ಉತ್ತಮವಾದದ್ದು) ಇದೆ. ಕಳೆದ ವರ್ಷ ಕ್ವಿಂಟಲ್‌ಗೆ ₹ 2,500 ವರೆಗೆ ಧಾರಣೆ ಇತ್ತು’ ಎಂದು ಎಪಿಎಂಸಿ ಅಧಿಕಾರಿ ವಿರೂಪಾಕ್ಷ ಲಮಾಣಿ ತಿಳಿಸಿದರು.
ಕೃಷಿ ಬೆಳೆಗಳನ್ನು ಬೆಂಬಲ ಬೆಲೆಯಲ್ಲಿ (ಎಂಎಸ್‌ಪಿ) ಖರೀದಿಸುವಂತೆ ತೋಟಗಾರಿಕೆ ಬೆಳೆ ಈರುಳ್ಳಿ ಬೆಳೆಯನ್ನೂ ಬೆಂಬಲ ಬೆಲೆಯಲ್ಲಿ ಖರೀದಿಸಬೇಕು. ಸರ್ಕಾರ ರೈತರ ಕೈಹಿಡಿಯಬೇಕು.-ಗಂಗಪ್ಪ ಈರಣ್ಣವರ ಬೆಳೆಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.