ADVERTISEMENT

ಬರೀ ತೋಳು ಏರಿಸಿದರೆ ಏನೂ ತಿಳಿಯದು

ಓದು– ಬರಹ ಮಾಡಿದರೆ ಕ್ಷೇತ್ರಕ್ಕೆ ನಾನು ಮಾಡಿದ ಕೆಲಸವೇನೆಂದು ಗೊತ್ತಾಗುತ್ತದೆ: ಸಂಸದ ಜೋಶಿ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2019, 17:38 IST
Last Updated 11 ಏಪ್ರಿಲ್ 2019, 17:38 IST
ಹುಬ್ಬಳ್ಳಿಯ ಗಾಮನಗಟ್ಟಿ ಗ್ರಾಮದಲ್ಲಿ ಗುರುವಾರ ನಡೆದ ಬಿಜೆಪಿ ಪ್ರಚಾರ ಸಭೆಯನ್ನು ಸಂಸದ ಪ್ರಹ್ಲಾದ ಜೋಶಿ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಿದರು– ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯ ಗಾಮನಗಟ್ಟಿ ಗ್ರಾಮದಲ್ಲಿ ಗುರುವಾರ ನಡೆದ ಬಿಜೆಪಿ ಪ್ರಚಾರ ಸಭೆಯನ್ನು ಸಂಸದ ಪ್ರಹ್ಲಾದ ಜೋಶಿ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಿದರು– ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ‘ಕ್ಷೇತ್ರದ ಅಭಿವೃದ್ಧಿಗೆ ಪ್ರಹ್ಲಾದ ಜೋಶಿ ಏನು ಮಾಡಿದ್ದಾರೆ ಅನ್ನೋರು, ಸ್ವಲ್ಪ ಓದು–ಬರಹ ಮಾಡಿದರೆ ಒಳ್ಳೆಯದು. ಬರೀ ತೋಳು ಏರಿಸಿದರೆ ಏನೂ ಗೊತ್ತಾವುದಿಲ್ಲ’ ಎಂದು ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಕುರಿತು ಸಂಸದ ಪ್ರಹ್ಲಾದ ಜೋಶಿ ವ್ಯಂಗ್ಯವಾಡಿದರು.

ಹುಬ್ಬಳ್ಳಿಯ ಗಾಮನಗಟ್ಟಿ ಗ್ರಾಮದಲ್ಲಿ ಗುರುವಾರ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ನ್ಯಾಯಾಲಯದ ಆದೇಶದಂತೆ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆದರೆ ನಾನೇ ಮಾಡಿಸಿದ್ದೇನೆ ಎಂಬಂತೆ ನನ್ನ ಧ್ಯಾನ ಮಾಡುತ್ತಿದ್ದಾರೆ. ಅವರ ಮನೆಯಲ್ಲಿ ಯಾರಾದರೂ ಕೆಮ್ಮಿದರೂ ಜೋಶಿ ಹೇಳಿದ್ದಾನ ಎಂದು ಕೇಳುತ್ತಾರೆ. ನನ್ನ ಹೆಸರಿನ ಬದಲು ದೇವರ ಧ್ಯಾನ ಮಾಡಿದ್ದರೆ ಸ್ವಲ್ಪ ಸುಧಾರಿಸುತ್ತಿದ್ದರು’ ಎಂದು ಮಾತಿನಲ್ಲೇ ತಿವಿದರು.

‘ಐಐಟಿಗೆ ಜಾಗ ಕೊಟ್ಟಿದ್ದು ಕಾಂಗ್ರೆಸ್ ಸರ್ಕಾರ ಎಂದು ಹೇಳುತ್ತಾರೆ. ಕಾಂಗ್ರೆಸ್ ಹಳಿ ಇಲ್ಲದ ರೈಲು ಬಿಡುತ್ತದೆ. ಆದರೆ ಬಿಜೆಪಿ ಅಭಿವೃದ್ಧಿ ಮಾಡಿದೆ. ಸಿಆರ್‌ಎಫ್ ನಿಧಿ ಬಿಜೆಪಿ ನೀಡಿಲ್ಲ, ಡೀಸೆಲ್ ಮೇಲಿನ ಸೆಸ್‌ನಿಂದ ರಾಜ್ಯದಲ್ಲಿ ಸಂಗ್ರಹವಾಗುವ ಹಣವನ್ನು ಮತ್ತೆ ರಾಜ್ಯಕ್ಕೇ ನೀಡುತ್ತಾರೆ ಎಂದು ಹೇಳಿದ್ದಾರೆ. ಮನಮೋಹನ್ ಸಿಂಗ್ ಸರ್ಕಾರ ಇದ್ದಾಗ ಸೆಸ್ ಸಂಗ್ರಹವಾಗಿರಲಿಲ್ಲವೇ? ಆಗಿದ್ದರೆ ಏಕೆ ನೀಡಲಿಲ್ಲ’ ಎಂದು ಪ್ರಶ್ನಿಸಿದರು.

ADVERTISEMENT

‘ರಾಜಕಾರಣಕ್ಕಾಗಿ ಕೆಲವರು ವೀರಶೈವ– ಲಿಂಗಾಯತ ಎಂದು ಮಾತನಾಡುತ್ತಾರೆ. ಸಮಾಜದ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮೇಲ್ವರ್ಗದವರಿಗೆ ಶೇ10ರಷ್ಟು ಮೀಸಲಾತಿ ನೀಡಿದ್ದಾರೆ. ಆದರೆ ರಾಜ್ಯ ಸರ್ಕಾರ ಆದೇಶ ಮಾಡದ ಕಾರಣ ಮೀಸಲಾತಿ ಇಲ್ಲಿ ಜಾರಿಗೆ ಬಂದಿಲ್ಲ. ಬರೀ ಕಣ್ಣೀರು ಹಾಕುವ ಬದಲು ಆದೇಶ ಹೊರಡಿಸುವಂತೆ ಒತ್ತಡ ಹೇರಲಿ’ ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದರು. ಶಾಸಕ ಅರವಿಂದ ಬೆಲ್ಲದ, ಮುಖಂಡರಾದ ನಾಗೇಶ ಕಲಬುರ್ಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.