ಹುಬ್ಬಳ್ಳಿ: 'ಕಾಶ್ಮೀರದ ಎಲ್ಲ ಸಮಸ್ಯೆಗಳಿಗೆ ಮೂಲ ಕಾರಣವೇ ಕಾಂಗ್ರೆಸ್ ಎನ್ನುವುದನ್ನು ಅರ್ಥಮಾಡಿಕೊಳ್ಳದ ಸಚಿವ ಸಂತೋಷ ಲಾಡ್, ಪಹಲ್ಗಾಮ್ ದಾಳಿ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ರಾಜೀನಾಮೆ ಕೇಳುತ್ತಿರುವುದು ಹಾಸ್ಯಾಸ್ಪದ' ಎಂದು ಶಾಸಕ ಮಹೇಶ ಟೆಂಗಿನಕಾಯಿ ವ್ಯಂಗ್ಯವಾಡಿದರು.
'ದಾಳಿ ನಡೆದ ತಕ್ಷಣವೇ ವಿದೇಶ ಪ್ರವಾಸದಲ್ಲಿದ್ದ ನರೇಂದ್ರ ಮೋದಿ ಅವರು ದೇಶಕ್ಕೆ ವಾಪಸ್ಸಾಗಿ, ತುರ್ತು ಸಭೆ ನಡೆಸಿ ಪಾಕಿಸ್ತಾನದ ವಿರುದ್ಧ ಕೈಗೊಳ್ಳಬೇಕಾದ ಗಟ್ಟಿ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ. ಇದಕ್ಕೆ ವಿರೋಧ ಪಕ್ಷದ ನಾಯಕರು ಸಹ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ ಕಾಂಗ್ರೆಸ್ ಮುಖಂಡರು ಅಸಂಬದ್ಧ ಹೇಳಿಕೆ ನೀಡುತ್ತಿರುವುದು ಸರಿಯಲ್ಲ' ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.
'ಕಾಂಗ್ರೆಸ್ ವಕ್ತಾರ ಲಕ್ಷ್ಮಣ ಅವರು, ಈ ಹಿಂದೆ ಭಾರತ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಅಸಂಬದ್ಧ ಹೇಳಿಕೆ ನೀಡಿ, ಸೈನಿಕರ ಕರ್ತವ್ಯದ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಸಚಿವ ಲಾಡ್ ಅವರು ಕೇಂದ್ರ ಸರ್ಕಾರ ಭಯೋತ್ಪಾದನೆ ನಿಯಂತ್ರಿಸಿರುವ ಕುರಿತು ಅಂಕಿ-ಅಂಶ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ್ದಾರೆ. 2004 ರಿಂದ 2014ರವರೆಗಿನ ಕಾಂಗ್ರೆಸ್ ಆಡಳಿತದಲ್ಲಿ ದೆಹಲಿ, ಮುಂಬೈ, ವಾರಾಣಸಿ, ಜೈಪುರ, ಅಹಮದಾಬಾದ್, ಪುಣೆ, ಹೈದರಾಬಾದ್ ಸೇರಿದಂತೆ ವಿವಿಧೆಡೆ ಬಾಂಬ್ ಸ್ಫೋಟ ನಡೆದು ನೂರಾರು ಮಂದಿ ಮೃತಪಟ್ಟು, ಸಾವಿರಾರು ಮಂದಿ ಗಾಯಗೊಂಡಿದ್ದರು. ಇದಕ್ಕೆ ಹೋಲಿಸಿದರೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಅವಧಿಯಲ್ಲಿ ಶೇ 70ರಷ್ಟು ಬಾಂಬ್ ದಾಳಿ, ಕಲ್ಲು ಎಸೆತ, ನಾಗರಿಕ ಹತ್ಯೆ ಪ್ರಕರಣಗಳನ್ನು ನಿಯಂತ್ರಿಸಲಾಗಿದೆ. ಇದಕ್ಕೆ ಸಂಬಂಧಿಸಿ ಸಚಿವ ಲಾಡ್ ಅವರು ದಾಖಲೆ ಬಿಡುಗಡೆ ಮಾಡಲಿ ನೋಡೋಣ ಎಂದು' ಎಂದು ಅಂಕಿ-ಅಂಶಗಳ ಪಟ್ಟಿ ಬಿಡುಗಡೆ ಮಾಡಿ, ಪ್ರತಿಸವಾಲು ಹಾಕಿದರು.
'ಕಾಶ್ಮೀರ ಈಗ ಪ್ರವಾಸೋದ್ಯಮ ಸ್ಥಳವಾಗಿ ಮಾರ್ಪಟ್ಟಿದ್ದು, ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಅಲ್ಲಿ ನಡೆಯುತ್ತಿವೆ. ಕಲ್ಲು ಎಸೆಯುವವರ, ಗನ್ ಹಿಡಿಯುವವರ ಕೈಗಳಿಗೆ ಪುಸ್ತಕ, ಲೇಖನಿ ನೀಡಿದ್ದೇವೆ. ಇದನ್ನು ಸಹಿಸದ ವಿದ್ರೋಹಿಗಳು ದುಷ್ಕೃತ್ಯಕ್ಕೆ ಮುಂದಾಗುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಇಡೀ ದೇಶವೇ ಒಗ್ಗಟ್ಟಿನಿಂದ ಹೋರಾಡಬೇಕು. ಆದರೆ, ಕಾಂಗ್ರೆಸ್ ತುಷ್ಟೀಕರಣ ನೀತಿ ಅನುಸರಿಸುತ್ತ, ಮುಸ್ಲಿಮರನ್ನು ಓಲೈಸಲು ಮುಂದಾಗುತ್ತಿದೆ' ಎಂದು ಶಾಸಕ ಟೆಂಗಿನಕಾಯಿ ಆರೋಪಿಸಿದರು.
'ಪಹಲ್ಗಾಮ್ ದಾಳಿ ಸಂಬಂಧಿಸಿ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಗಳಿಗೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸಂಪೂರ್ಣ ಬೆಂಬಲವಿರುವುದಾಗಿ ಹೇಳಿದ್ದಾರೆ. ಆದರೆ, ಇದು ಸಚಿವ ಸಂತೋಷ ಲಾಡ್ ಅವರಿಗೆ ಸಮಾಧಾನ ನೀಡಿದಂತಿಲ್ಲ. ದೇಶಮಟ್ಟದಲ್ಲಿ ತಮ್ಮ ಜಾಣ್ಮೆ ಪ್ರದರ್ಶಿಸಲು ಲಾಡ್ ಅವರೇ ವಿರೋಧ ಪಕ್ಷದ ನಾಯಕರಾಗಲಿ' ಎಂದು ವ್ಯಂಗ್ಯವಾಡಿದರು.
ಬಿಜೆಪಿ ಶಿಸ್ತು ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಲಿಂಗರಾಜ ಪಾಟೀಲ ಹಾಗೂ ಮುಖಂಡರಾದ ರವಿ ನಾಯ್ಕ, ರಾಜು ಕಾಳೆ, ಮಂಜುನಾಥ ಕಾಟ್ಕರ ಇದ್ದರು.
'ಹಳೇಹುಬ್ಬಳ್ಳಿ, ಡಿಜೆ ಹಳ್ಳಿ-ಕೆಜೆ ಹಳ್ಳಿ, ಮೈಸೂರಿನ ಉದಯಗಿರಿಯಲ್ಲಿ ಗಲಭೆ ಮಾಡಿದವರು ಯಾರು? ಅವರು ನಿರ್ದೋಷಿಗಳೆಂದು ಬಿಡಿಸಲು ಹೋದವರು ಯಾರು? ಇದು ಅಲ್ಪಸಂಖ್ಯಾತರ ತುಷ್ಟೀಕರಣ ಅಲ್ಲವೇ? ಕಾಂಗ್ರೆಸ್ ಓಲೈಕೆ ರಾಜಕಾರಣ ಮಾಡುತ್ತಿದೆ. ದೇಶದ ಭದ್ರತೆ ವಿಷಯ ಬಂದಾಗ ಸೈನ್ಯಕ್ಕೆ ಅಗೌರವ ತೋರುವ ವರ್ತನೆ ಸರಿಯಲ್ಲ' ಎಂದು ಶಾಸಕ ಮಹೇಶ ಟೆಂಗಿನಕಾಯಿ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.