ಹುಬ್ಬಳ್ಳಿ: ಗುರಿ ಸಾಧಿಸುವ ಛಲದೊಂದಿಗೆ ಅಂಗವೈಕಲ್ಯವನ್ನು ಮೆಟ್ಟಿನಿಂತ ಸಾಧಕರು ಹಲವರಿದ್ದಾರೆ. ಇಲ್ಲಿನ ಹುಬ್ಬಳ್ಳಿ ಸ್ಪೋರ್ಟ್ಸ್ ಶೂಟರ್ಸ್ ಅಕಾಡೆಮಿಯಲ್ಲಿ ತರಬೇತಿ ಪಡೆದ ಪ್ಯಾರಾ ಶೂಟರ್‌ಗಳು ರಾಷ್ಟ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ಮಾದರಿಯಾಗಿದ್ದಾರೆ.
ಶ್ರೀಹರ್ಷ ದೇವರೆಡ್ಡಿ, ರಾಕೇಶ್ ನಿಡಗುಂದಿ, ಶಂಕರಲಿಂಗ ತವಳಿ ಹಾಗೂ ಜ್ಯೋತಿ ಸಣ್ಣಕ್ಕಿ ಸದ್ಯ ಪ್ಯಾರಾ ಶೂಟಿಂಗ್ ಕ್ಷೇತ್ರದಲ್ಲಿ ಗಮನ ಸೆಳೆದ ಪ್ರತಿಭೆಗಳು. ಶ್ರೀಹರ್ಷ ದೇವರೆಡ್ಡಿ ಅವರು ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಭಾಗಿಯಾಗಿದ್ದು, ಪ್ರಸ್ತುತ ರಾಷ್ಟ್ರಮಟ್ಟದಲ್ಲಿ ಉತ್ತಮ ಸ್ಥಾನದೊಂದಿಗೆ ಗುರುತಿಸಿಕೊಂಡಿದ್ದಾರೆ.
ಗುರಿ ಬದಲಿಸಿದ ರಾಕೇಶ್: ಲಲಿತಕಲೆಯಲ್ಲಿ ಪದವಿ ಪಡೆದಿದ್ದ ರಾಕೇಶ್ ನಿಡಗುಂದಿ, ನಂತರ ಗ್ರಾಫಿಕ್ ಡಿಸೈನಿಂಗ್, ಆ್ಯನಿಮೇಶನ್ ಸಂಬಂಧಿಸಿದ ತಮ್ಮದೇ ಸಂಸ್ಥೆ ನಿರ್ಮಿಸಿ ನಡೆಸಿಕೊಂಡು ಬರುತ್ತಿದ್ದರು. 12 ಮಂದಿಗೆ ಉದ್ಯೋಗವನ್ನೂ ನೀಡಿದ್ದರು. ಆದರೆ 2019ರಲ್ಲಿ ವಕ್ಕರಿಸಿದ ಕೊರೊನಾ ಮಹಾಮಾರಿ ರಾಕೇಶ್ ಅವರ ಸಂಸ್ಥೆಯ ಮೇಲೆ ತೀವ್ರ ಆರ್ಥಿಕ ಹೊಡೆತ ನೀಡಿತು. ಸಂಸ್ಥೆ ಮುನ್ನಡೆಸಲು ಸಾಧ್ಯವಿಲ್ಲ ಎಂದರಿತಾಗ ಪ್ಯಾರಾ ಶೂಟಿಂಗ್ ಕಡೆ ಗುರಿ ಇಟ್ಟರು.
‘ಶೂಟಿಂಗ್ ಕ್ಷೇತ್ರಕ್ಕೆ ಅನಿರೀಕ್ಷಿತವಾಗಿ ಬಂದೆ. ನಿರಂತರ ತರಬೇತಿ ಪಡೆದು ಈ ಹಂತಕ್ಕೆ ಬಂದಿದ್ದೇನೆ. ಹಲವು ಪದಕ ಗೆದ್ದರೂ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿ ಚಿನ್ನದ ಪದಕ ಗೆಲ್ಲುವುದೇ ನನ್ನ ಗುರಿ’ ಎಂದು ಛಲದಿಂದ ನುಡಿಯುತ್ತಾರೆ ರಾಕೇಶ್.
‘ಭಾರತದಲ್ಲಿ ಕ್ರಿಕೆಟ್ ನಂತರ ಹೆಚ್ಚು ಖರ್ಚು ಬೇಡುವ ಕ್ರೀಡೆ ಶೂಟಿಂಗ್. ಗಾಲಿಕುರ್ಚಿ, ರೈಫಲ್, ಜಾಕೆಟ್‌ಗಳಿಗ ಲಕ್ಷ ಲಕ್ಷ ಹಣ ಬೇಕಾಗುತ್ತದೆ. ಪದಕ ಪಡೆದು ಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾದರೆ, ನನಗೆ ಬೇಕಾದಷ್ಟು ದುಡ್ಡು ಸಿಕ್ಕಿರುತ್ತದೆ ಎಂದು ಹಲವರು ಭಾವಿಸುತ್ತಾರೆ. ಅದು ಅವರ ತಪ್ಪುಕಲ್ಪನೆ. ಕೆಲವೊಮ್ಮೆ ಸ್ಪರ್ಧೆಯ ಪ್ರವೇಶ ಶುಲ್ಕ ಕಟ್ಟಲೂ ಹಣ ಇರುವುದಿಲ್ಲ’ ಎಂದು ಬೇಸರಿಸುತ್ತಾರೆ ಅವರು.
ಪುಣೆಯಲ್ಲಿ ಈಚೆಗೆ ನಡೆದ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿರುವ ರಾಕೇಶ್, ತಂದೆ, ತಾಯಿ ಇಬ್ಬರೂ ಅಗಲಿದ್ದು, ಸಹೋದರನ ಸಹಕಾರದೊಂದಿಗೆ ಸಾಧನೆಯತ್ತ ರಾಕೇಶ್ ಹೆಜ್ಜೆ ಇಟ್ಟಿದ್ದಾರೆ.
ಹಾದಿ ತೆರೆದುಕೊಟ್ಟ ಹವ್ಯಾಸ: ಬಿಡುವಿನ ವೇಳೆಯಲ್ಲಿ ಮನೆಯಲ್ಲಿ ಖಾಲಿ ಕೂರುತ್ತಿದ್ದೆ. ಸಮಯ ಕಳೆಯುವ ಉದ್ದೇಶದಿಂದ ಶೂಟಿಂಗ್ ಅಕಾಡೆಮಿಗೆ ಸೇರಿಕೊಂಡೆ. ಅದು ಇಲ್ಲಿಯವರೆಗೂ ತಲುಪಿಸುತ್ತದೆ ಎಂದು ಭಾವಿಸಿರಲಿಲ್ಲ ಎನ್ನುತ್ತಾರೆ ರಾಜ್ಯದ ಮೊದಲ ಮಹಿಳಾ ಪ್ಯಾರಾಶೂಟರ್ ಜ್ಯೋತಿ ಸಣ್ಣಕ್ಕಿ.
‘ಶೂಟಿಂಗ್ ಕ್ಷೇತ್ರಕ್ಕೆ ಯಾರು ಬೇಕಾದರೂ ಬರಬಹುದು. ಏಕಾಗ್ರತೆ, ಮಾನಸಿಕ, ದೈಹಿಕ ದೃಢತೆ ನೀಡಬಲ್ಲ ಅತ್ಯುತ್ತಮ ಕ್ರೀಡೆ ಇದು. ಕ್ರೀಡಾ ಕೋಟಾದ ಮೂಲಕ ಉದ್ಯೋಗಾವಕಾಶಗಳೂ ಸಿಗುತ್ತವೆ’ ಎನ್ನುತ್ತಾರೆ ಅವರು.
ರಾಕೇಶ್ ನಿಡಗುಂದಿ ಹಾಗೂ ಜ್ಯೋತಿ ಸಣ್ಣಕ್ಕಿ ಅವರು ಪ್ರಸ್ತುತ ದೆಹಲಿಯ ಡಾ.ಕರಣಿ ಸಿಂಗ್ ಶೂಟಿಂಗ್ ರೇಂಜ್‌ಗೆ ಆಯ್ಕೆಯಾಗಿ ತರಬೇತಿ ಪಡೆಯುತ್ತಿದ್ದಾರೆ.
‘ನಾವು ಅಕಾಡೆಮಿ ಆರಂಭಿಸುವವರೆಗೆ ರಾಜ್ಯದಲ್ಲಿ ಎಲ್ಲಿಯೂ ಪ್ಯಾರಾಶೂಟರ್‌ಗಳಿಗೆ ತರಬೇತಿಗೆ ವ್ಯವಸ್ಥೆ ಇರಲಿಲ್ಲ. ಮೊದಲ ಬಾರಿಗೆ ನಾವು ಅವಕಾಶ ನೀಡಿದೆವು. ಅವರು ಸಾಧಿಸಿದರು. ಈಗ ಪ್ಯಾರಾ ಶೂಟಿಂಗ್ ಎಂದಾಗ ಹಲವರು ನಮ್ಮ ಸಂಸ್ಥೆಯನ್ನೇ ಸಂಪರ್ಕಿಸುತ್ತಾರೆ’ ಎಂದು ನುಡಿಯುತ್ತಾರೆ ಹುಬ್ಬಳ್ಳಿ ಸ್ಪೋರ್ಟ್ಸ್ ಶೂಟರ್ಸ್ ಅಕಾಡೆಮಿಯ ತರಬೇತುದಾರ ರವಿಚಂದ್ರ ಬಾಲೆಹೊಸೂರು.
ಪ್ಯಾರಾ ಶೂಟರ್ಸ್‌ಗೆ ತರಬೇತಿ ನೀಡುವುದು ಸವಾಲಿನ ಕೆಲಸ. ಅವರಿಗೆ ಯಾವುದೇ ರೀತಿಯಲ್ಲಿ ಕೊರತೆ ಆಗದಂತೆ ಎಲ್ಲ ವ್ಯವಸ್ಥೆಗಳನ್ನು ಮಾಡಿ ತರಬೇತಿ ನೀಡಲಾಗುತ್ತದೆರವಿಚಂದ್ರ ಬಾಲೆಹೊಸೂರ ತರಬೇತುದಾರ ಹುಬ್ಬಳ್ಳಿ ಸ್ಪೋರ್ಟ್ಸ್ ಶೂಟರ್ಸ್ ಅಕಾಡೆಮಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.