ADVERTISEMENT

ಹುಬ್ಬಳ್ಳಿ: ಬದುಕಿಗೆ ವರವಾದ ಹಂದಿ ಸಾಕಣೆ

ವರ್ಷಕ್ಕೆ ಲಕ್ಷಾಂತರ ರೂಪಾಯಿ ಆದಾಯ ಗಳಿಸುವ ವೆಂಕಟೇಶ ಚಂದ್ರೊಳ್ಳಿ

ಗೋವರ್ಧನ ಎಸ್‌.ಎನ್‌.
Published 22 ಆಗಸ್ಟ್ 2025, 4:30 IST
Last Updated 22 ಆಗಸ್ಟ್ 2025, 4:30 IST
ಹುಬ್ಬಳ್ಳಿ ತಾಲ್ಲೂಕಿನ ಚನ್ನಾಪುರದಲ್ಲಿರುವ ವೆಂಕಟೇಶ ಚಂದ್ರೊಳ್ಳಿ ಅವರ ಹಂದಿ ಸಾಕಣೆ ಕೇಂದ್ರಕ್ಕೆ ಅಧಿಕಾರಿಗಳು ಈಚೆಗೆ ಭೇಟಿ ನೀಡಿ ಪರಿಶೀಲಿಸಿದರು
ಹುಬ್ಬಳ್ಳಿ ತಾಲ್ಲೂಕಿನ ಚನ್ನಾಪುರದಲ್ಲಿರುವ ವೆಂಕಟೇಶ ಚಂದ್ರೊಳ್ಳಿ ಅವರ ಹಂದಿ ಸಾಕಣೆ ಕೇಂದ್ರಕ್ಕೆ ಅಧಿಕಾರಿಗಳು ಈಚೆಗೆ ಭೇಟಿ ನೀಡಿ ಪರಿಶೀಲಿಸಿದರು   

ಹುಬ್ಬಳ್ಳಿ: ಮಿಶ್ರಕೃಷಿ ಪದ್ಧತಿ ಅನುಸರಿಸಿ, ಹಂದಿ ಸಾಕಣೆಯಲ್ಲಿ ಯಶಸ್ಸು ಕಂಡಿರುವ ಇಲ್ಲಿನ ಕೇಶ್ವಾಪುರದ ನಿವಾಸಿ ವೆಂಕಟೇಶ ಚಂದ್ರೊಳ್ಳಿ ಅವರು ವರ್ಷಕ್ಕೆ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.

ವೆಂಕಟೇಶ ಅವರು, ನಗರದಿಂದ 10 ಕಿ.ಮೀ. ದೂರದಲ್ಲಿರುವ ಚನ್ನಾಪುರದಲ್ಲಿ ಒಂದೂ ಕಾಲು ಎಕರೆಯಲ್ಲಿ ಸುಸಜ್ಜಿತ ಶೆಡ್‌ ನಿರ್ಮಿಸಿ, 10 ವರ್ಷಗಳಿಂದ ವಿದೇಶಿ ತಳಿಯ ಹಂದಿಗಳನ್ನು ಸಾಕಣೆ ಮಾಡುತ್ತಿದ್ದಾರೆ. ‌ತಳಿ ಸಂವರ್ಧನೆಯನ್ನೂ ಮಾಡಿ, ಇತರೆ ಸಾಕಣೆದಾರರಿಗೂ ನೆರವಾಗಿದ್ದಾರೆ.

‘8 ಎಕರೆ ಕೃಷಿ ಭೂಮಿಯಲ್ಲಿ ಸಪೋಟ ಬೆಳೆದಿರುವೆ. ಕೃಷಿಗಿಂತ ಹಂದಿ ಸಾಕಣೆಯಲ್ಲೇ ಹೆಚ್ಚು ಆದಾಯವಿದೆ. ಸದ್ಯಕ್ಕೆ 100 ದೊಡ್ಡ ಹಂದಿಗಳು ಹಾಗೂ 300 ಮರಿ ಹಂದಿಗಳಿವೆ. ಮಿಶ್ರಕೃಷಿ ಮೂಲಕ ವರ್ಷಕ್ಕೆ ಸುಮಾರು ₹35 ಲಕ್ಷ ಆದಾಯ ಗಳಿಸುತ್ತಿರುವೆ. ಎಂಟು ಜನರಿಗೆ ಕೆಲಸವನ್ನೂ ಕೊಟ್ಟಿರುವೆ’ ಎನ್ನುತ್ತಾರೆ ವೆಂಕಟೇಶ.

ADVERTISEMENT

‘ಈ ಮೊದಲು ಬೀಡಾಡಿ ಹಂದಿಗಳನ್ನು ಸಾಕುತ್ತಿದ್ದೆ. ಪಶು ಇಲಾಖೆಯಿಂದ ಬೆಂಗಳೂರಿನಲ್ಲಿ ನಡೆದ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರಿಂದ ವಿದೇಶಿ ತಳಿಯ ಹಂದಿ ಸಾಕಣೆಗೆ ಪ್ರೇರಣೆ ದೊರೆಯಿತು. ಇಲಾಖೆಯ ನೆರವು ಪಡೆದು ಡ್ಯುರಾಕ್‌, ಯಾರ್ಕ್‌ಶೇರ್‌, ಲ್ಯಾಂಡ್ರೆಸ್‌ ತಳಿಯ ಹಂದಿಗಳನ್ನು ಸಾಕುತ್ತಿರುವೆ’ ಎಂದರು.

‘ಪಶು ಸಂಗೋಪನಾ ಇಲಾಖೆಯ ರಾಷ್ಟ್ರೀಯ ಜಾನುವಾರು ಮಿಷನ್‌ನಡಿ ₹30 ಲಕ್ಷ ಸಹಾಯಧನ ಸೇರಿ ಒಟ್ಟು ₹60 ಲಕ್ಷದ ನೆರವು ಪಡೆದು ಹಂದಿ ಸಾಕಣೆಗೆ ಸಕಲ ವ್ಯವಸ್ಥೆ ಮಾಡಿಕೊಂಡಿರುವೆ. ನೀರಿನ ವ್ಯವಸ್ಥೆಗೆ ಬೋರ್‌ವೆಲ್‌ ಇದೆ. ಹೋಟೆಲ್‌ ತ್ಯಾಜ್ಯವನ್ನು ಆಹಾರವಾಗಿ ನೀಡುತ್ತೇನೆ. ಹಂದಿ ಕ್ವಿಂಟಲ್‌ಗೆ ₹15 ಸಾವಿರದಿಂದ ₹18 ಸಾವಿರವರೆಗೆ ದರವಿದೆ. ಗೋವಾ ಬೆಂಗಳೂರು, ಮಂಗಳೂರಿನ ದಲ್ಲಾಳಿಗಳು ಹಂದಿಗಳನ್ನು ಖರೀದಿಸುತ್ತಾರೆ’ ಎಂದು ವಿವರಿಸಿದರು.  

ಡ್ಯುರಾಕ್‌, ಯಾರ್ಕ್‌ಶೇರ್‌, ಲ್ಯಾಂಡ್ರೆಸ್‌ ತಳಿ ಸಾಕಣೆ ಕೇಂದ್ರದಲ್ಲಿ ಒಟ್ಟು 400 ಹಂದಿಗಳು | ಕ್ವಿಂಟಲ್‌ಗೆ ₹18,000ವರೆಗೆ ದರ
ಜಾನುವಾರು ಸಾಕಣೆಗೆ ಇಲಾಖೆ ಎಲ್ಲ ರೀತಿಯ ನೆರವು ನೀಡುತ್ತದೆ. ಹಂದಿ ಸಾಕಣೆಯಿಂದ ಉತ್ತಮ ಆದಾಯ ಗಳಿಸಬಹುದು
ಡಾ. ಸದಾಶಿವ ಉಪ್ಪಾರ್‌ ಪಶುಪಾಲನಾ ಇಲಾಖೆ ಉಪನಿರ್ದೇಶಕ

‘ನಷ್ಟದ ಪ್ರಮಾಣ ಕಡಿಮೆ’

‘ಹಂದಿಗಳಿಗೆ ಕಾಲ ಕಾಲಕ್ಕೆ ಔಷಧ ಲಸಿಕೆ ಕೊಡಿಸುವುದರಿಂದ ಆರೋಗ್ಯವಾಗಿರುತ್ತವೆ. ಹೀಗಾಗಿ ನಷ್ಟದ ಪ್ರಮಾಣ ತೀರಾ ಕಡಿಮೆ. ಪಶು ಇಲಾಖೆ ವೈದ್ಯರು ತಿಂಗಳಿಗೊಮ್ಮೆ ಫಾರಂಗೆ ಭೇಟಿ ನೀಡಿ ಹಂದಿಗಳ ತಪಾಸಣೆಯೊಂದಿಗೆ ಸೂಕ್ತ ಸಲಹೆ ನೀಡುತ್ತಾರೆ’ ಎಂದು ವೆಂಕಟೇಶ ಚಂದ್ರೊಳ್ಳಿ ಹೇಳಿದರು.  ‘ಎಸ್‌ಎಸ್‌ಎಲ್‌ಸಿವರೆಗೆ ಮಾತ್ರ ಶಿಕ್ಷಣ ಪಡೆದಿದ್ದರೂ ಉತ್ತಮ ರೀತಿಯಲ್ಲಿ ಜೀವನ ನಡೆಸಲು ಹಂದಿ ಸಾಕಣೆ ನೆರವಾಗಿದೆ. ಇತರೆ ಪ್ರಾಣಿಗಳ ಸಾಕಣೆಯಂತೆ ಹಂದಿ ಸಾಕಣೆಯನ್ನೂ ಮಾಡಬಹುದು. ಅದರ ಮಾಂಸ ಆರೋಗ್ಯಕ್ಕೆ ಉತ್ತಮವಾಗಿರುವುದರಿಂದ ಬೇಡಿಕೆ ಹೆಚ್ಚಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.