ADVERTISEMENT

ಹುಬ್ಬಳ್ಳಿ: ಪ್ಲಾಸ್ಮಾ ಚಿಕಿತ್ಸೆ ಯಶಸ್ವಿ, ಗುಣಮುಖ ವ್ಯಕ್ತಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2020, 7:59 IST
Last Updated 17 ಜೂನ್ 2020, 7:59 IST
ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಪ್ರಯೋಗಾಲಯ ಉದ್ಘಾಟಿಸಿದರು.
ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಪ್ರಯೋಗಾಲಯ ಉದ್ಘಾಟಿಸಿದರು.   

ಹುಬ್ಬಳ್ಳಿ: ಕೋವಿಡ್‌–19 ದೃಢಪಟ್ಟಿದ್ದ ಮಹಾರಾಷ್ಟ್ರದಿಂದ ಮರಳಿದ ವ್ಯಕ್ತಿಗೆ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಕಿಮ್ಸ್‌) ವೈದ್ಯರು ಆರಂಭಿಸಿದ್ದ ಪ್ಲಾಸ್ಮಾ ಚಿಕಿತ್ಸೆ ಯಶಸ್ವಿಯಾಗಿದ್ದು, ಬುಧವಾರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.

(ಪಿ–2710) ವ್ಯಕ್ತಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಲು ಮೇ ಮೊದಲ ವಾರದಲ್ಲಿ ಚೇತರಿಸಿಕೊಂಡಿದ್ದ ಹುಬ್ಬಳ್ಳಿಯ 64 ವರ್ಷದ ಖಬರಸ್ತಾನದ ಕಾವಲುಗಾರನ (ಪಿ–363) ದೇಹದಿಂದ ಪ್ಲಾಸ್ಮಾ ಪಡೆದುಕೊಳ್ಳಲಾಗಿತ್ತು. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು, ಈಗ ಸಂಪೂರ್ಣ ಗುಣಮುಖರಾಗಿದ್ದಾರೆ

ಇದಕ್ಕೂ ಮುನ್ನ ಕಿಮ್ಸ್‌ನಲ್ಲಿ ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರು ಕೋವಿಡ್‌–19 ಪರೀಕ್ಷೆಯ ಪ್ರಯೋಗಾಲಯ ಉದ್ಘಾಟಿಸಿದರು.

ADVERTISEMENT

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಿಮ್ಸ್‌ನಲ್ಲಿ ಇದು ಎರಡನೇ ಪ್ರಯೋಗಾಲಯವಾಗಿದೆ. ಧಾರವಾಡದ ನಿಮ್ಹಾನ್ಸ್‌ನಲ್ಲಿ ಹಾಗೂ ಎನ್‌ಎಂಆರ್ ಸೇರಿ ಅವಳಿ ನಗರದಲ್ಲಿ ನಾಲ್ಕು ಪ್ರಯೋಗಾಲಯ ಆರಂಭಿಸಲಾಗಿದೆ. ದಿನಕ್ಕೆ ಸಾವಿರ ಪರೀಕ್ಷೆ ಮಾಡಬಹುದಾಗಿದೆ. 24 ಗಂಟೆಗಳಲ್ಲಿಯೇ ಫಲಿತಾಂಶ ಬರಲಿದೆ ಎಂದರು.

ಉತ್ತರ ಕರ್ನಾಟಕದಲ್ಲಿ ದೊಡ್ಡ ನಗರ. ಪಕ್ಕದ ಜಿಲ್ಲೆಗಳಿಂದ ಪರೀಕ್ಷೆಗೆ ಇಲ್ಲಿ ಕಳುಹಿಸಿರುವುದರಿಂದ ಒತ್ತರ ಕಡಿಮೆ ಮಾಡಲು ಮತ್ತೊಂದು ಪ್ರಯೋಗಾಲಯ ಆರಂಭಿಸಲಾಗಿದೆ. ಪರೀಕ್ಷೆ ಮಾಡುವುದನ್ನು ಕಡಿಮೆ ಮಾಡಿಲ್ಲ. ಮಾರ್ಗಸೂಚಿ ಅನುಸಾರ ಅವಶ್ಯಕತೆ ಇದ್ದವರಿಗೆ ಪರೀಕ್ಷೆ ಮಾಡಲಾಗುವುದು ಎಂದು ಹೇಳಿದರು.

ಹೊರ ರಾಜ್ಯದಿಂದ ಬಂದವರಿಂದಲೇ ಕೋವಿಡ್‌-19 ಹೆಚ್ಚಾಗಿದೆ. ಸ್ಥಳೀಯರಿಂದ ಹೆಚ್ಚಿನ ಸಮಸ್ಯೆ ಇಲ್ಲ. ಹೊರ ರಾಜ್ಯದಿಂದ ಬಂದವರನ್ನು ಕ್ವಾರಂಟೈನ್‌ ಮಾಡುವ ಮೂಲಕ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಸಮುದಾಯದಲ್ಲಿ ಹರಡಿಲ್ಲ. ಹಳ್ಳಿಗಳವರು ಸ್ವಯಂ ನಿಯಂತ್ರಣ ಹಾಕಿಕೊಳ್ಳುತ್ತಿದ್ದಾರೆ. ಜನರಲ್ಲಿ ಜಾಗೃತಿ ಮೂಡಿದೆ. ಇನ್ನಷ್ಟು ಜಾಗೃತಿ ಮೂಡಿಸುವ ಕಾರ್ಯಕ್ರಮ ಮಾಡಲಾಗುವುದು ಎಂದು ಹೇಳಿದರು.

ಜಿಲ್ಲಾಧಿಕಾರಿ ದೀಪಾ ಚೋಳನ್‌, ಜಿ.ಪಂ. ಸಿಇಒ ಬಿ.ಸಿ. ಸತೀಶ, ಕಿಮ್ಸ್‌ ನಿರ್ದೇಶಕ ರಾಮಲಿಂಗಪ್ಪ ಅಂಟರತಾನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.