ADVERTISEMENT

ಧಾರವಾಡ: ಗಾಯಕ ರಾಮಕುಮಾರ ಶಿಂಧೆ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 14:37 IST
Last Updated 30 ಡಿಸೆಂಬರ್ 2025, 14:37 IST
   

ಧಾರವಾಡ: ಹುಬ್ಬಳ್ಳಿಯ ಗಾಯಕ ರಾಮಕುಮಾರ ಶಿಂಧೆ (83) ಬೆಂಗಳೂರಿನಲ್ಲಿ ಹೃದಯ ಸ್ತಂಭನದಿಂದ ಮಂಗಳವಾರ ನಿಧನರಾದರು.

ರಾಮಕುಮಾರ ಶಿಂಧೆ ಅವರು ಅಳ್ನಾವರ ಗ್ರಾಮದವರು. ಶಾಹು ಶಿಂಧೆ ಮತ್ತು ರಾಜಾಜಿ ಬಾಯಿ ದಂಪತಿಯ ಕಿರಿಯ ಪುತ್ರ. ಕೆಇಬಿಯಲ್ಲಿ ಲೆಕ್ಕಾಧಿಕಾರಿಯಾಗಿ ನಿವೃತ್ತರಾಗಿದ್ದರು. ಹುಬ್ಬಳ್ಳಿಯ ಹೆಗ್ಗೇರಿ ಬಡಾವಣೆಯಲ್ಲಿ (ಆಯುರ್ವೇದಿಕ್‌ ಕಾಲೇಜ ಬಳಿ, ಹಳೇ ಹುಬ್ಬಳ್ಳಿ) ನೆಲೆಸಿದ್ದರು. ಅವರಿಗೆ ಪತ್ನಿ ಗಂಗಾಬಾಯಿ, ಪುತ್ರರಾದ ವಿನಯ ಶಿಂಧೆ, ದರ್ಶನ್‌ ಶಿಂಧೆ, ಪುತ್ರಿಯರಾದ ದಯಾ ದಾಬೋಲ್ಕರ್‌, ಗೀತಾ ಬೆಣಗಿ ಇದ್ದಾರೆ.

ರಾಮಕುಮಾರ ಶಿಂಧೆ ಅವರು ಸಂಗೀತ, ಗಾಯನದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಕನ್ನಡ, ಹಿಂದಿ ಮತ್ತು ಮರಾಠಿಯಲ್ಲಿ ಹಾಡಿದ್ದರು. ಬಸವಣ್ಣನವರ ವಚನಗಳನ್ನು ಹಿಂದಿಗೆ ಅನುವಾದಿಸಿ ಹೊರ ರಾಜ್ಯ, ವಿದೇಶಗಳಲ್ಲಿ ಪರಿಚಯಿಸಿದ್ದರು. ದಾಸರು, ಅಕ್ಕಮಹಾದೇವಿ, ಶಿಶುನಾಳ ಷರೀಫರ ಗೀತೆಗಳ ಸಂಗೀತ ಕಾರ್ಯಕ್ರಮಗಳನ್ನು ಪ್ರಸುತಪಡಿಸಿದ್ದರು. 15ಕ್ಕೂ ಹೆಚ್ಚು ದೇಶಗಳಲ್ಲಿ ವಚನ, ಜನಪದ, ಕಾರ್ಯಕ್ರಮಗಳನ್ನು ನೀಡಿದ್ದರು.

ADVERTISEMENT

‘ಅಂಬೇಡ್ಕರ್‌ ಪ್ರಶಸ್ತಿ’, ‘ಬಸವ ಪುರಸ್ಕಾರ’, ‘ದೆಹಲಿಯ ಕರ್ನಾಟಕ ಸಂಘದ ಪುರಸ್ಕಾರ’, ‘ಹುಬ್ಭಳ್ಳಿ–ಧಾರವಾಡ ಮಹಾನಗರ ರಾಜ್ಯೋತ್ಸವ ಪ್ರಶಸ್ತಿ’ ಸಹಿತ ಹಲವು ಪುರಸ್ಕಾರಗಳು ಅವರಿಗೆ ಸಂದಿವೆ.

ಬುಧವಾರ ಬೆಳಿಗ್ಗೆ 11 ಗಂಟೆಗೆ ಹುಬ್ಬಳ್ಳಿಯ ಹೆಗ್ಗೇರಿ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮಾಹಿತಿಗಾಗಿ ಮೊಬೈಲ್‌: 9845091409 ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.