
ನವಲಗುಂದ: ‘ಮಹಾದಾಯಿ, ಕಳಸಾ ಬಂಡೂರಿ ಯೋಜನೆ ಕುರಿತಾಗಿ ಕೇಂದ್ರ ಅರಣ್ಯ ಹಾಗೂ ಪರಿಸರ ಇಲಾಖೆಯು ಕೆಲವೊಂದು ಸ್ಪಷ್ಟನೆ ಕೋರಿ ರಾಜ್ಯ ಸರಕಾರಕ್ಕೆ ಪತ್ರ ಬರೆದಿದ್ದು, ರಾಜ್ಯ ಸರಕಾರದಿಂದ ಉತ್ತರ ಬಂದ ನಂತರ ಪರಿಸರ ಇಲಾಖೆಯು ಪರಿಶೀಲಿಸಿ ಕೂಡಲೇ ಮಹಾದಾಯಿ ಯೋಜನೆ ಅನುಷ್ಠಾನಕ್ಕೆ ಪರವಾಣಿಗೆ ಕೊಡಿಸಲು ನಿರಂತರ ಪ್ರಯತ್ನ ನಡೆಸಲಾಗುತ್ತಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಪಟ್ಟಣದ ರೈತ ಭವನದಲ್ಲಿ ರೈತರು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ರೈತರೊಂದಿಗೆ ಮಾತನಾಡಿದರು.
ಯೋಜನೆ ಅನುಷ್ಠಾನ ಕುರಿತಾಗಿ ಯಾವುದೇ ರಾಜಕೀಯ ದುರುದ್ಧೇಶವಿಲ್ಲ ಈ ಭಾಗದ ರೈತರು ನಿರಂತರ ಹೋರಾಟ ನಡೆಸುತ್ತಿದ್ದು, ಪರಿಸರ ಇಲಾಖೆಯಿಂದ ಅನುಮತಿ ದೊರೆತ ತಕ್ಷಣವೆ ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಲಿದೆ ಎಂದರು.
ರೈತ ಮುಖಂಡ ಸುಭಾಸಚಂದ್ರಗೌಡ ಪಾಟೀಲ್ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಕಟಬಾಕಿದಾರರಾದ ರೈತರು ಸಾಲ ಮರುಪಾವತಿ ಮಾಡಿದ ನಂತರ ಬ್ಯಾಂಕ್‍ಗಳು ಹೊಸದಾಗಿ ಸಾಲ ನೀಡಲು ನಿರಾಕರಿಸುತ್ತಿದ್ದು ಇದರಿಂದಾಗಿ ರೈತರಿಗೆ ಅನ್ಯಾಯವಾಗುತ್ತಿದೆ. ಕೂಡಲೇ ಈ ಎಲ್ಲ ರೈತರಿಗೆ ಹೊಸದಾಗಿ ಸಾಲನೀಡುವಂತೆ ಸೂಚಿಸಬೇಕು. ಕೇಂದ್ರ ಸರ್ಕಾರ ಇದುವರೆಗೆ ಶೇ 4ರ ಬಡ್ಡಿ ದರದಲ್ಲಿ ರೈತರಿಗೆ ₹3 ಲಕ್ಷ ಸಾಲವನ್ನು ನೀಡುತ್ತಿದ್ದು, ನಂತರ ಕಳೆದ ಬಜೆಟ್‍ನಲ್ಲಿ ₹3 ಲಕ್ಷದಿಂದ ₹5 ಲಕ್ಷಕ್ಕೆ ಸಾಲದ ಮಿತಿಯನ್ನು ಹೆಚ್ಚಿಸಿ ಕೇಂದ್ರ ಸರ್ಕಾರ ನಿರ್ಧಾರಿಸಿದ್ದರೂ ಇದುವರೆಗೆ ಬ್ಯಾಂಕ್‍ಗಳಿಗೆ ₹5 ಲಕ್ಷ ಸಾಲ ನೀಡುವಂತೆ ಆದೇಶವನ್ನು ಹೊರಡಿಸಿಲ್ಲ. ಹೀಗಾಗಿ ಸಚಿವರು ಮಧ್ಯಸ್ಥಿಕೆ ವಹಿಸಿ ಸಾಲ ದೊರಕುವಂತೆ ಕ್ರಮ ಜರುಗಿಸಬೇಕು ಎಂದು ಸಚಿವರನ್ನು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಸಚಿವ ಪ್ರಲ್ಹಾದ ಜೋಶಿ, ಸಾಲ ಮರುಪಾವತಿ ಮಾಡಿದ ರೈತರಿಗೆ ಹೊಸ ಸಾಲ ನೀಡುವಂತೆ ಸಂಬಂಧಿಸಿದ ಲೀಡ್ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಯಾವುದಾದರೂ ಬ್ಯಾಂಕ್‍ಗಳು ರೈತರಿಗೆ ಸಾಲ ನೀಡಲು ನಿರಾಕರಿಸಿದಲ್ಲಿ ತಮ್ಮ ಗಮನಕ್ಕೆ ತಂದಲ್ಲಿ ಅಂತಹ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ತಹಶೀಲ್ದಾರ್ ಸುಧೀರ ಸಾಹುಕಾರ, ಮಹದಾಯಿ ಹೋರಾಟ ಸಮಿತಿ ಅಧ್ಯಕ್ಷ ಯಲ್ಲಪ್ಪ ದಾಡಿಭಾಯಿ, ಸುಭಾಸಚಂದ್ರಗೌಡ ಪಾಟೀಲ, ರವಿ ತೋಟದ, ಶಿವಣ್ಣ ಹುಬ್ಬಳ್ಳಿ, ಭಗವಂತಪ್ಪ ಪುಟ್ಟಣ್ಣನ್ನವರ, ಉಳಿಯಪ್ಪ ಇಬ್ರಾಹಿಂಪುರ, ಬಸಪ್ಪ ಮುಪ್ಪಯ್ಯನವರ, ಬಿಜೆಪಿ ಮಂಡಲ ಅಧ್ಯಕ್ಷ ಗಂಗಪ್ಪ ಮನಮಿ, ನಿಂಗಪ್ಪ ಸುತಗಟ್ಟಿ, ದೇವರಾಜ ದಾಡಿಭಾವಿ, ಶಂಕ್ರು ತೋಟದ, ಷಣ್ಮುಖ ಗುರಿಕಾರ,ಗಂಗಪ್ಪ ಸಂಗಟಿ, ಬಾಳಪ್ಪ ಗಡ್ಡಿ, ಸಂಗಪ್ಪ ನೀಡವಣಿ, ಮುರಿಗೇಪ್ಪ ಪಲ್ಲೇದ, ಗೋವಿಂದರಡ್ಡಿ ಮೊರಬದ, ಸಿದ್ದಲಿಂಗಪ್ಪ ಹಳ್ಳದ, ಕರಿಯಪ್ಪ ತಳವಾರ ನೂರಾರು ರೈತ ಹೋರಾಟಗಾರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.