ADVERTISEMENT

ಹಿಂದೂಗಳ ರಕ್ಷಣೆಗೆ ಆಗ್ರಹಿಸಿ ಆ. 5ಕ್ಕೆ ಪ್ರತಿಭಟನೆ: ಪ್ರಮೋದ ಮುತಾಲಿಕ್

​ಪ್ರಜಾವಾಣಿ ವಾರ್ತೆ
Published 29 ಜುಲೈ 2022, 4:28 IST
Last Updated 29 ಜುಲೈ 2022, 4:28 IST
ಪ್ರಮೋದ್ ಮುತಾಲಿಕ್
ಪ್ರಮೋದ್ ಮುತಾಲಿಕ್   

ಹುಬ್ಬಳ್ಳಿ: ‘ಹಿಂದೂ ಕಾರ್ಯಕರ್ತರನ್ನು ರಕ್ಷಿಸುವುದು, ಪಿಎಫ್‌ಐ ಸಂಘಟನೆ ಮತ್ತು ಎಸ್‌ಡಿಪಿಐ ಪಕ್ಷವನ್ನು ನಿಷೇಧಿಸುವಂತೆ ಆಗ್ರಹಿಸಿ, ಆಗಸ್ಟ್‌ 5ರಂದು ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುವುದು. ಅಂದು, ಎಲ್ಲಾ ಹಿಂದೂ ಸಂಘಟನೆಗಳು ಸರ್ಕಾರಕ್ಕೆ ಮನವಿ ಸಲ್ಲಿಸಲಿವೆ’ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್‌ ಮುತಾಲಿಕ್ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿಂದೂ ಸಂಘಟನೆಗಳಿಂದ ಅಧಿಕಾರ ಪಡೆದ ಬಿಜೆಪಿ ಸರ್ಕಾರ, ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ಮುಂದಾಗುತ್ತಿಲ್ಲ ಎಂಬುದು ದಕ್ಷಿಣ ಕನ್ನಡದ ಪ್ರವೀಣ್ ನೆಟ್ಟಾರು‌ ಅವರ ಹತ್ಯೆಯಿಂದ ಗೊತ್ತಾಗಿದೆ’ ಎಂದು ಆರೋಪಿಸಿದರು.

‘ಬೆಂಗಳೂರಿನ ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ ಹಾಗೂ ಹುಬ್ಬಳ್ಳಿಯಲ್ಲಿ ನಡೆದ ಗಲಭೆ ವೇಳೆ ಲಾಠಿ ಚಾರ್ಜ್ ಮಾಡಲಿಲ್ಲ. ಆದರೆ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನಕುಮಾರ ಕಟೀಲ್ ಅವರ ಕಾರನ್ನು ದೂಡಿದ್ದಕ್ಕೆ ಲಾಠಿ ಚಾರ್ಜ್‌ ಮಾಡಿಸಲಾಗಿದೆ. ನೊಂದ ಕಾರ್ಯಕರ್ತರು ಅವರ ಕಾರಿಗೇನು ಪೂಜೆ ಮಾಡಬೇಕಿತ್ತೇ? ತಮ್ಮ ಸ್ಥಾನಕ್ಕೆ ನಾಲಾಯಕ್ ಆಗಿರುವ ಕಟೀಲ್‌ ರಾಜೀನಾಮೆ ನೀಡಲಿ’ ಎಂದು ಆಗ್ರಹಿಸಿದರು.

ADVERTISEMENT

‘ಹಿಂದುತ್ವದ ಬಗ್ಗೆ ಸಂಸದ ಅನಂತಕುಮಾರ ಹೆಗಡೆ ಉಗ್ರ ಭಾಷಣ ಮಾಡುತ್ತಾರೆ. ಆದರೆ, ಅವರ ಕ್ಷೇತ್ರದಲ್ಲಿ ಹತ್ಯೆಯಾದ ಪರೇಶ್‌ ಮೇಸ್ತ ಮನೆಯ ಪರಿಸ್ಥಿತಿ ಗಮನಿಸಿದ್ದೀರಾ? ಶರತ್‌ ಮಡಿವಾಳ ಹತ್ಯೆ ಮಾಡಿದವನು ಮದುವೆ ಮಾಡಿಕೊಂಡು ಆರಾಮಾಗಿದ್ದಾನೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಹಿಂದೂಗಳ ಹತ್ಯೆ ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ತಂಡಕ್ಕೆ ವಹಿಸುವಂತೆ ಕೇಂದ್ರಕ್ಕೆ ಪತ್ರ ಬರೆಯುತ್ತಲೇ ಇದ್ದಾರೆ. ಈ ಹಿಂದಿನ ಆರು ಹತ್ಯೆ ಪ್ರಕರಣಗಳ ತನಿಖೆ ಏನಾಯ್ತು’ ಎಂದು ಪ್ರಶ್ನಿಸಿದರು.

ಗಂಗಾಧರ ಕುಲಕರ್ಣಿ ಮಾತನಾಡಿ, ‘ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಪ್ರಮೋದ ಮುತಾಲಿಕ್‌ ಅವರ ಭದ್ರತೆ ಇಬ್ಬರು ಗನ್‌ಮ್ಯಾನ್‌ಗಳಿದ್ದರು. ಬಿಜೆಪಿ ಸರ್ಕಾರ ಬಂದ ಮೇಲೆ ಒಬ್ಬರನ್ನಷ್ಟೇ ನಿಯೋಜಿಸಿದೆ. ಚುನಾವಣೆ ಸಂದರ್ಭದಲ್ಲಿ ಹಿಂಪಡೆದ ಮುತಾಲಿಕ್‌ ಅವರ ಗನ್ ಅನ್ನು ವಾಪಸ್‌ ನೀಡುತ್ತಿಲ್ಲ. ಹಿಂದೂಗಳ ಹೆಣ ಬಿದ್ದರೆ, ಅದರ ಮೇಲೆ ರಾಜಕೀಯ ನಡೆಸುವ ಹುನ್ನಾರ ಬಿಜೆಪಿ ಸರ್ಕಾರದ್ದು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.