ಧಾರವಾಡ: ‘ಹುಬ್ಬಳ್ಳಿಯಲ್ಲಿ ಸರ್ಕಾರಿ ಕಾರ್ಯಕ್ರಮದಲ್ಲಿ ಕುರಾನ್ ಪಠಿಸಲಾಗಿದೆ ಎಂದು ಆರೋಪಿಸಿ ಬಿಜೆಪಿಯವರು ಹೋಮ, ಹವನ ನೆರವೇರಿಸಿದ್ದು, ಪ್ರತಿಭಟನೆ ನಡೆಸಿದ್ದು ಖಂಡನೀಯ. ಇದೊಂದು ಕರಾಳ ದಿನ’ ಎಂದು ಅಂಜುಮನ್ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಟೀಕಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಜಿಲ್ಲಾಧಿಕಾರಿ ಕಚೇರಿ ಮುಂದೆ ಮುಲ್ಲಾ ಮೋಕ್ಷ ಹೋಮ ನೆರವೇರಿಸಿದ್ದಾರೆ. ಮುಲ್ಲಾ ಮೋಕ್ಷ ಹೋಮ ಎಂದರೆ ಏನು? ಎಂದು ಪ್ರಶ್ನಿಸಿದರು.
‘ಸರ್ಕಾರಿ ಕಾರ್ಯಕ್ರಮದಲ್ಲಿ ಕುರಾನ್ ಪಠಿಸಲಾಗಿದೆ ಎಂದು ಬಿಜೆಪಿಯವರು ಆರೋಪಿಸಿದ್ದಾರೆ. ಆ ಕಾರ್ಯಕ್ರಮದಲ್ಲಿ ಶ್ಲೋಕವನ್ನೂ ಪಠಿಸಲಾಗಿತ್ತು. ಕಾರ್ಯಕ್ರಮ ನಡೆದಿದ್ದು ಹುಬ್ಬಳ್ಳಿಯ ಸಿದ್ದಾರೂಢ ಮಠದಲ್ಲಿ ಅಲ್ಲ, ವಿಶಾಲನಗರದಲ್ಲಿ. ಅರವಿಂದ ಬೆಲ್ಲದ ಅವರು ತಪ್ಪು ಮಾಹಿತಿ ನೀಡಿದ್ದಾರೆ. ರಾಜಕೀಯವಾಗಿ ಮಾತನಾಡಲು ಈಗ ಬಿಜೆಪಿಯವರಿಗೆ ಏನು ವಿಷಯ ಇಲ್ಲ, ಹೀಗಾಗಿ ಇಂಥ ಪ್ರತಿಭಟನೆ ಮಾಡಿದ್ದಾರೆ. ಇಂಥ ಪ್ರತಿಭಟನೆ ಮಾಡುವವರಿಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ ಎಂದು ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸುತ್ತೇವೆ’ ಎಂದರು.
‘2019ರಲ್ಲಿ ಮುಸ್ಲಿಂ ಓಣಿಯಲ್ಲಿ ಕಾಮಗಾರಿ ಭೂಮಿಪೂಜೆ ನಡೆದಿತ್ತು. ಆ ಸರ್ಕಾರಿ ಕಾರ್ಯಕ್ರಮದಲ್ಲಿ ಕುರಾನ್ ಪಠಣ ಮಾಡಲಾಗಿತ್ತು. ಆ ಕಾರ್ಯಕ್ರಮದಲ್ಲಿ ಅರವಿಂದ ಬೆಲ್ಲದ ಪಾಲ್ಗೊಂಡಿದ್ದರು. ರಾಜಕೀಯಕ್ಕಾಗಿ ಅವರು ಈಗ ವಿರೋಧ ಮಾಡುತ್ತಿದ್ದಾರೆ. ಬೆಲ್ಲದ ಅವರು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಇದ್ದಾರೆ. ಸರ್ಕಾರಿ ಕಾರ್ಯಕ್ರಮಗಳಲ್ಲಿ ರಾಷ್ಟ್ರಗೀತೆ, ನಾಡಗೀತೆ ಮಾತ್ರ ಹಾಡಬೇಕು ಎಂದು ಸರ್ಕಾರದಿಂದ ನಿರ್ಣಯ ಮಾಡಿಸಿದರೆ ಎಲ್ಲರೂ ಪಾಲಿಸುತ್ತಾರೆ’ ಎಂದು ಹೇಳಿದರು.
‘ಆಜಾನ್ ಕೂಗು ಕೇಳಿ ಸಚಿವ ಸಂತೋಷ್ ಲಾಡ್ ಅವರು ಭಾಷಣ ನಿಲ್ಲಿಸಿ ಅದು ಮುಗಿದ ನಂತರ ಮುಂದುವರಿಸಿದ್ಧಾರೆ ಎಂದು ಬಿಜೆಪಿಯ ಕೆಲವರು ಆರೋಪಿಸಿದ್ಧಾರೆ. ಆಜಾನ್ ಕೂಗಿನ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಭಾಷಣ ನಿಲ್ಲಿಸಿದ್ದ ವಿಡಿಯೊ ಇದೆ. ಎಲ್ಲದಕ್ಕೂ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ’ ಎಂದರು.
ಬಶೀರ್ ಅಹಮದ್, ಗುಲಾಂಯಾಸೀನ್ ಹಾವೇರಿಪೇಟ್, ಎನ್.ಎಂ.ಮಕಾನ್‌ದಾರ್, ರಿಯಾಜ್ ಅಹಮದ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.