
ಹುಬ್ಬಳ್ಳಿಯ ಚನ್ನಮ್ಮ ವೃತ್ತದ ಬಳಿ, ಚನ್ನಮ್ಮ ಮೂರ್ತಿಯ ಸುತ್ತ ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆ ಕಾಮಗಾರಿ
ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಹುಬ್ಬಳ್ಳಿ: ನಗರದಲ್ಲಿ ಕಿತ್ತೂರು ರಾಣಿ ಚನ್ನಮ್ಮ ವೃತ್ತವನ್ನು ಕೇಂದ್ರವಾಗಿ ಇಟ್ಟುಕೊಂಡು ₹349 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ, ಹುಬ್ಬಳ್ಳಿಯ ಐಕಾನ್ ಆದ ‘ರಾಣಿ ಚನ್ನಮ್ಮ ಮೂರ್ತಿ’ಯನ್ನು ಮೇಲಕ್ಕೆ ಎತ್ತರಿಸಬೇಕೆ? ಯಥಾಸ್ಥಿತಿ ಇರಬೇಕೆ ಅಥವಾ ಸ್ಥಳಾಂತರಿಸಬೇಕೆ ಎಂಬ ಬಗ್ಗೆ ಈವರೆಗೂ ಚರ್ಚೆ ನಡೆದಿಲ್ಲ.
ಚನ್ನಮ್ಮ ಮೂರ್ತಿಯ ಎತ್ತರಕ್ಕಿಂತ ಹೆಚ್ಚುವರಿ ಐದು–ಆರು ಅಡಿ ಎತ್ತರವಷ್ಟೇ ಸೇತುವೆ ನಿರ್ಮಾಣ ಆಗುವುದರಿಂದ, ಈಗಿರುವ ಹಾಗೆ ಮೂರ್ತಿ ಇಟ್ಟರೆ ಅದರ ಅಸ್ತಿತ್ವ ಕಳೆಗುಂದಲಿದೆ. ಮೂರ್ತಿಯನ್ನು ಎತ್ತರಕ್ಕೆ ಏರಿಸಿದರೆ, ಸೇತುವೆ ಮೇಲೆ ವಾಹನಗಳ ಸಂಚಾರಕ್ಕೆ ತೊಡಕಾಗುತ್ತದೆ. ಇದಕ್ಕೆ ಸುಲಭ ಪರಿಹಾರ ಕಾಣಸಿಗದ ಕಾರಣ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಟಸ್ಥರಾಗಿದ್ದಾರೆ.
ಸಾರ್ವಜನಿಕ ಚರ್ಚೆ: ‘ಹುಬ್ಬಳ್ಳಿಯನ್ನು ಪ್ರತಿನಿಧಿಸುವ, ಹೆಮ್ಮೆಯ ಹೆಗ್ಗುರುತಾದ ಚನ್ನಮ್ಮ ಮೂರ್ತಿಯನ್ನು ಕಾಮಗಾರಿ ನೆಪದಲ್ಲಿ ನಿರ್ಲಕ್ಷಿಸಿದ್ದು ಅಕ್ಷಮ್ಯ. ಈಗಾಗಲೇ ಮೂರ್ತಿ ಸಂಪೂರ್ಣ ದೂಳುಮಯವಾಗಿದ್ದು, ನೈಜ್ಯತೆ ಕಳೆದುಕೊಂಡಿದೆ. ಅದರ ಸುತ್ತ ಬೃಹತ್ ಫಿಲ್ಲರ್‌ಗಳು ನಿರ್ಮಾಣವಾಗಿ, ಮೂರ್ತಿಯೇ ಕಾಣದಂತಾಗಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ ಚನ್ನಮ್ಮ ಮೂರ್ತಿ ಮರೆಯಾಗಿ, ಎಲ್ಲಿದೆ ಎಂದು ಹುಡುಕುವ ಸ್ಥಿತಿ ನಿರ್ಮಾಣವಾಗಲಿದೆ’ ಎಂಬ ಆತಂಕ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.
‘ಮೇಲ್ಸೇತುವೆ ಕಾಮಗಾರಿ ಮುಕ್ತಾಯದ ಹಂತಕ್ಕೆ ತಲುಪುತ್ತಿದ್ದರೂ, ಚನ್ನಮ್ಮ ಮೂರ್ತಿಯ ಬಗ್ಗೆ ಯಾವ ನಿರ್ಧಾರವೂ ಆಗಿಲ್ಲ. ಯೋಜನೆಯಲ್ಲೂ ಮೂರ್ತಿ ಕುರಿತು ಯಾವ ಮಾಹಿತಿಯೂ ಇಲ್ಲ. ಈಗಿರುವ ಯಥಾಸ್ಥಿತಿಯಲ್ಲಿಯೇ ಮೂರ್ತಿಯಿಟ್ಟರೆ, ಮೇಲ್ಸೇತುವೆ ಪೂರ್ಣಗೊಂಡ ನಂತರ ಇಕ್ಕಟ್ಟಾದ ಸ್ಥಳದಲ್ಲಿ ಅದರ ಇರುವಿಕೆಯೇ ಇಲ್ಲದಂತಾಗುತ್ತದೆ. ಮೇಲಕ್ಕೆತ್ತರಿಸಿದರೆ ಮೇಲ್ಸೇತುವೆ ಮೇಲೆ ಸಂಚರಿಸುವವರಿಗಷ್ಟೇ ಅದು ಕಾಣಲಿದೆ. ಯೋಜನೆ ವಿನ್ಯಾಸದ ವೇಳೆಯೇ ಅದಕ್ಕೊಂದು ಸೂಕ್ತ ಪರಿಹಾರ ಕಂಡುಕೊಳ್ಳಬೇಕಿತ್ತು’ ಎಂದು ಪಾಲಿಕೆಯ ಮಾಜಿ ಮೇಯರ್ ಡಾ. ಪಾಂಡುರಂಗ ಪಾಟೀಲ ಅಭಿಪ್ರಾಯಪಡುತ್ತಾರೆ.
‘ಹುಬ್ಬಳ್ಳಿ ಎಂದಾಗ ತಕ್ಷಣ ನೆನಪಾಗುವುದೇ ಚನ್ನಮ್ಮ ಮೂರ್ತಿ. ಮೇಲ್ಸೇತುವೆ ಕಾಮಗಾರಿಯಿಂದ ಮೂರ್ತಿ ಅಸ್ತಿತ್ವ ಕಳೆದುಕೊಳ್ಳುತ್ತಿದ್ದು, ಅದರ ಸುತ್ತಲಿನ ತಳಪಾಯದ ಕಟ್ಟೆಯನ್ನು ತೆಗೆದು ರಕ್ಷಣೆ ಇಲ್ಲದಂತೆ ಮಾಡಲಾಗಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಲಿಂಗರಾಜ ಧಾರವಾಡಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದರು.
‘ಮೂರ್ತಿಗೆ ದೂಳು ಆವರಿಸಿದ್ದು, ನಿರ್ವಹಣೆ ಸಹ ಇಲ್ಲದಾಗಿದೆ. ಕಾಮಗಾರಿ ಮುಕ್ತಾಯದ ನಂತರ ಯಥಾಸ್ಥಿತಿಯಲ್ಲಿ ಮೂರ್ತಿಯನ್ನು ಇಟ್ಟರೆ, ಸೇತುವೆ ಮೇಲೆ ಸಂಚರಿಸುವ ಸವಾರರು, ಗುಟಕಾ ಹಾಕಿಕೊಂಡು ಕೆಳಗೆ ಉಗುಳಿದರೆ ಚನ್ನಮ್ಮಗೆ ಅವಮಾನ ಮಾಡಿದಂತೆ. ಮೂರ್ತಿ ಸ್ಥಳಾಂತರಿಸುವ, ಮೇಲಕ್ಕೆತ್ತರಿಸುವ ಅಥವಾ ಅಲ್ಲಿಯೇ ಇಡುತ್ತೇವೆ ಎನ್ನುವ ಮಾತು ಸಹ ಈವರೆಗೆ ಯಾರಿಂದಲೂ ಬಂದಿಲ್ಲ. ಈ ಕುರಿತು ಅಧಿಕಾರಿಗಳು, ಜನಪ್ರತಿನಿಧಿಗಳು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು’ ಎಂದು ಆಗ್ರಹಿಸಿದರು.
ಚನ್ನಮ್ಮ ಮೂರ್ತಿ ಸ್ಥಳಾಂತರಿಸಬೇಕೆ ಅಥವಾ ಪರ್ಯಾಯ ಕ್ರಮ ಕೈಗೊಳ್ಳಬಹುದೆ ಎಂಬ ಬಗ್ಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜೊತೆ ಚರ್ಚಿಸಿ ನಿರ್ಧರಿಸಲಾಗುವುದುಭುವನೇಶ ಪಾಟೀಲ ಸಿಇಒ ಜಿಲ್ಲಾ ಪಂಚಾಯಿತಿ ಧಾರವಾಡ
ಕಿತ್ತೂರು ರಾಣಿ ಚನ್ನಮ್ಮ ಮೂರ್ತಿ ಪ್ರತಿಸ್ಠಾಪನೆಗೂ ಮುನ್ನ ಆ ವೃತ್ತಕ್ಕೆ ರಾಣಿ ಚನ್ನಮ್ಮ ವೃತ್ತ ಎಂದು ಕರೆಯುತ್ತಿದ್ದರು. ಮೂರ್ತಿ ಪ್ರತಿಷ್ಠಾಪನೆಗೂ ಮುನ್ನ ದೊಡ್ಡ ಹೋರಾಟವೇ ನಡೆದಿತ್ತುಡಾ. ಪಾಂಡುರಂಗ ಪಾಟೀಲ ಮಾಜಿ ಮೇಯರ್
‘ವೃತ್ತದ ಪಕ್ಕದಲ್ಲಿಯೇ ಮರು ಪ್ರತಿಷ್ಠಾಪಿಸಬಹುದು’
‘ಚನ್ನಮ್ಮ ವೃತ್ತದಷ್ಟು ವಿಶಾಲವಾದ ವೃತ್ತ ನಗರದಲ್ಲಿ ಮತ್ತೊಂದು ಇಲ್ಲ. ಹೀಗಾಗಿ 15 ಅಡಿ ಎತ್ತರದ ಅಶ್ವಾರೂಢ ಚನ್ನಮ್ಮ ಮೂರ್ತಿಯನ್ನು ಬೇರೆಡೆ ಸ್ಥಳಾಂತರಿಸುವುದು ಅವೈಜ್ಞಾನಿಕ. ವೃತ್ತಕ್ಕೆ ಹೊಂದಿಕೊಂಡಿರುವ ಮೇಲ್ಸೇತುವೆ ಫಿಲ್ಲರ್ ಗರ್ಡರ್‌ಗಳು ಬರದ ಜಾಗದಲ್ಲಿ ಮೂರ್ತಿಯನ್ನು ಚಿಕ್ಕದಾಗಿಸಿ ಮರುಪ್ರತಿಷ್ಠಾಪಿಸಬಹುದು. ಇದರಿಂದ ಚನ್ನಮ್ಮ ಮೂರ್ತಿಗೂ ಗೌರವ ನೀಡಿದಂತಾಗುತ್ತದೆ. ಈಗಿರುವ ಸ್ಥಳದಲ್ಲಿಯೇ ಇಟ್ಟರೆ ಮೂರ್ತಿ ಅಸ್ತಿತ್ವವೇ ಕಳೆದುಕೊಂಡು ಕಳಾಹೀನವಾಗಲಿದೆ. ಅದು ಆಡಳಿತದ ವೈಫಲ್ಯಕ್ಕೆ ಸಾಕ್ಷಿಯಾಗಿ ಸಾರ್ವಜನಿಕರ ಅಸಮಾಧಾನಕ್ಕೂ ಕಾರಣವಾಗಬಹುದು’ ಎಂದು ಡಾ. ಪಂಡುರಂಗ ಪಾಟೀಲ ಎಚ್ಚರಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.