ADVERTISEMENT

ಹುಬ್ಬಳ್ಳಿ: ರಾಜನಗರ ಮೈದಾನದಲ್ಲಿ ಕ್ರಿಕೆಟ್ ಕಲರವ

ಕರ್ನಾಟಕ–ಜಮ್ಮು ಕಾಶ್ಮೀರ ಮುಖಾಮುಖಿ; ಕೆ.ಎಲ್‌.ರಾಹುಲ್‌, ಪ್ರಸಿದ್ಧ ಕೃಷ್ಣ ಆಕರ್ಷಣೆ

ಸತೀಶ ಬಿ.
Published 24 ಫೆಬ್ರುವರಿ 2026, 6:33 IST
Last Updated 24 ಫೆಬ್ರುವರಿ 2026, 6:33 IST
ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿ ಸೋಮವಾರ ತಪಾಸಣೆ ನಡೆಸಿದರು
ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿ ಸೋಮವಾರ ತಪಾಸಣೆ ನಡೆಸಿದರು ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ   

ಹುಬ್ಬಳ್ಳಿ: ಇಲ್ಲಿನ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಮಂಗಳವಾರ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಫೈನಲ್ ಪಂದ್ಯವು ಕರ್ನಾಟಕ ಮತ್ತು ಜಮ್ಮು –ಕಾಶ್ಮೀರ ತಂಡಗಳ ನಡುವೆ ನಡೆಯಲಿದೆ. ಈ ಹಿಂದೆ ಒಮ್ಮೆ ಕೆಪಿಎಲ್‌ ಟೂರ್ನಿಯ (ಈಗ ಮಹಾರಾಜ ಟ್ರೋಫಿ) ಫೈನಲ್‌ ಪಂದ್ಯ ಇಲ್ಲಿ ನಡೆದಿತ್ತು. 

ಭಾರತ ತಂಡದ ಆಟಗಾರರಾದ ಕೆ.ಎಲ್‌.ರಾಹುಲ್‌, ಪ್ರಸಿದ್ಧ ಕೃಷ್ಣ, ದೇವದತ್ತ ಪಡಿಕ್ಕಲ್‌, ಕರುಣ್ ನಾಯರ್‌, ಮಯಂಕ್ ಅಗರವಾಲ್‌ ಸೇರಿದಂತೆ ಖ್ಯಾತನಾಮ ಆಟಗಾರರು ಆಡುವರು. ಪಂದ್ಯ ವೀಕ್ಷಣೆಗೆ ಬರುವ ಜನರು, ಕ್ರಿಕೆಟ್ ಪ್ರೇಮಿಗಳಿಗೆ ಶಾಮಿಯಾನ ಹಾಕಿ ನೆರಳಿನ ವ್ಯವಸ್ಥೆ ಮತ್ತು ಐದು ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. 

‘ಪಂದ್ಯ ವೀಕ್ಷಣೆಗೆ ಬರುವವರಿಗೆ ಕ್ರೀಡಾಂಗಣದ 3 ಮತ್ತು 4 ನೇ ದ್ವಾರಗಳಿಂದ ಪ್ರವೇಶಾವಕಾಶ ಇದೆ. ಮೂರನೇ ಗೇಟ್‌ನಿಂದ ಪ್ರವೇಶಕ್ಕೆ‌ ಟಿಕೆಟ್ ದರ ₹200 ಮತ್ತು ನಾಲ್ಕನೇ ಗೇಟ್ ಮೂಲಕ ಪ್ರವೇಶಕ್ಕೆ ₹100 ಟಿಕೆಟ್ ದರ ನಿಗದಿಪಡಿಸಲಾಗಿದೆ’ ಎಂದು ಕೆಎಸ್‌ಸಿಎ ಧಾರವಾಡ ವಲಯದ ಅಧ್ಯಕ್ಷ ಅಲ್ತಾಫ್ ಕಿತ್ತೂರು ತಿಳಿಸಿದರು.

ADVERTISEMENT

‘ಮಂಗಳವಾರ ಬೆಳಿಗ್ಗೆ 8.30ಕ್ಕೆ ಟಿಕೆಟ್ ನೀಡಲಾಗುತ್ತದೆ. ಪ್ರತಿ ದಿನ 4,500 ಟಿಕೆಟ್‌ಗಳನ್ನು ಮಾತ್ರ ನೀಡಲಾಗುವುದು. ಸಾರ್ವಜನಿಕರು ನಗದು ಮತ್ತು ಯುಪಿಐ ಮೂಲಕ ಹಣ ಪಾವತಿಸಿ ಟಿಕೆಟ್ ಖರೀದಿಸಬಹುದು’ ಎಂದರು.

ನೆಚ್ಚಿನ ಅಂಕಣ: ಆತಿಥೇಯ ತಂಡದ ಆಟಗಾರರಿಗೆ ಇದು ನೆಚ್ಚಿನ ಅಂಕಣವಾಗಿದೆ. ಇಲ್ಲಿ ಆಡಿರುವ ಎಂಟು ಪಂದ್ಯಗಳಲ್ಲಿ ರಾಜ್ಯ ತಂಡ ನಾಲ್ಕರಲ್ಲಿ ಜಯಗಳಿಸಿದ್ದು, ನಾಲ್ಕು ಡ್ರಾನಲ್ಲಿ ಅಂತ್ಯ ಕಂಡಿವೆ.

ಕಳೆದ ನವೆಂಬರ್‌ನಲ್ಲಿ ಇದೇ ಮೈದಾನದಲ್ಲಿ ನಡೆದಿದ್ದ ರಣಜಿ ಟೂರ್ನಿಯ ಲೀಗ್ ಹಂತದ ಪಂದ್ಯದಲ್ಲಿ ಕರ್ನಾಟಕ ತಂಡವು ಇನಿಂಗ್ಸ್ ಹಾಗೂ 185 ರನ್‌ಗಳಿಂದ ಚಂಡೀಗಢ ತಂಡವನ್ನು ಮಣಿಸಿತ್ತು. ಈ ಪಂದ್ಯದಲ್ಲಿ ಸ್ಮರಣ್‌ ಆರ್‌., ಅಜೇಯ  ದ್ವಿಶತಕ (227) ಬಾರಿಸಿದ್ದರು. ಕರುಣ್ ನಾಯರ್ (95), ಶ್ರೇಯಸ್‌ ಗೋಪಾಲ್‌ (62), ಶಿಖರ್‌ ಶೆಟ್ಟಿ (59) ಸಹ ಮಿಂಚಿದ್ದರು. 

ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ನಾಲ್ಕು ದಿನ ಮುಂಚಿತವಾಗಿಯೇ ನಗರಕ್ಕೆ ಬಂದಿರುವ ಜಮ್ಮು– ಕಾಶ್ಮೀರ ತಂಡ ಭರ್ಜರಿ ಅಭ್ಯಾಸ ನಡೆಸಿದೆ. ಕರ್ನಾಟಕ‌ ತಂಡವೂ ನೆಟ್ಸ್ ನಲ್ಲಿ ಸಾಕಷ್ಟು ಬೆವರು ಹರಿಸಿದೆ.

ಪೆವಿಲಿಯನ್‌ ಬ್ಲಾಕ್‌ ಸುನಿಲ್ ಜೋಶಿ ಹೆಸರು

ರಾಜನಗರ ಕ್ರೀಡಾಂಗಣದ ಪೆವಿಲಿಯನ್‌ ಬ್ಲಾಕ್‌ಗೆ ದಿಗ್ಗಜ ಕ್ರಿಕೆಟಿಗ ಕೋಚ್‌ ಸುನಿಲ್ ಜೋಶಿ ಅವರ ಹೆಸರು ನಾಮಕರಣ ಕಾರ್ಯಕ್ರಮ ಮಂಗಳವಾರ ಪಂದ್ಯದ ಊಟದ ವಿರಾಮದ ವೇಳೆ ನಡೆಯಲಿದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಮಿಥುನ್ ಮನ್ಹಾಸ್ ಕೆಎಸ್‌ಸಿಎ ಆಧ್ಯಕ್ಷ ವೆಂಕಟೇಶ ಪ್ರಸಾದ್ ಮಾಜಿ ಕ್ರಿಕೆಟಿಗ ಸುನಿಲ್‌ ಜೋಶಿ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಸೇರಿ ಇತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುವರು. ಬಿಸಿಸಿಐ ಆಯ್ಕೆ ಸಮಿತಿ ಸದಸ್ಯರಾದ ಶಿವಸುಂದರ್ ದಾಸ್ ಅಜಯ್ ರಾತ್ರಾ ಅವರು ಪಂದ್ಯ ವೀಕ್ಷಿಸುವ ಸಾಧ್ಯತೆ ಇದೆ. 

ಭದ್ರತೆ; 222 ಪೊಲೀಸರ ನಿಯೋಜನೆ

ರಾಜನಗರ ಕ್ರೀಡಾಂಗಣ ಜಮ್ಮು ಮತ್ತು ಕಾಶ್ಮೀರ ತಂಡದ ಆಟಗಾರರು ಮತ್ತು ಕರ್ನಾಟಕ ತಂಡದ ಆಟಗಾರರು ಉಳಿದುಕೊಂಡಿರುವ ಹೋಟೆಲ್‌ಗಳಲ್ಲಿ ಭದ್ರತೆಗಾಗಿ ಒಟ್ಟು 222 ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿ ಕ್ರೀಡಾಂಗಣಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿದರು. ಟಿಕೆಟ್‌ ಖರೀದಿಸಿದವರಿಗೆ ಮಾತ್ರ ಕ್ರೀಡಾಂಗಣಕ್ಕೆ ಪ್ರವೇಶ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.