
ಹುಬ್ಬಳ್ಳಿಯ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಗುರುವಾರ ಪಿಚ್ ಸಿದ್ಧತೆಯಲ್ಲಿ ತೊಡಗಿದ್ದ ಸಿಬ್ಬಂದಿ ಪ್ರಜಾವಾಣಿ
ಚಿತ್ರ: ಗುರು ಹಬೀಬ
ಹುಬ್ಬಳ್ಳಿ: ರಾಜನನಗರದ ಕೆಎಸ್‌ಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸಂಭ್ರಮ ಗರಿಗೆದರಿದೆ. ಇದೇ ಇದೇ 24ರಿಂದ ಇಲ್ಲಿ ನಡೆಯಲಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯಕ್ಕಾಗಿ ಅಂತಿಮ ಹಂತದ ಸಿದ್ಧತೆಗಳು ಭರದಿಂದ ನಡೆಯುತ್ತಿವೆ. ಕರ್ನಾಟಕ ಮತ್ತು ಜಮ್ಮು–ಕಾಶ್ಮೀರ ತಂಡಗಳು ಮುಖಾಮುಖಿಯಾಗಲಿವೆ.
ಪಂದ್ಯ ವೀಕ್ಷಣೆಗೆ ಬರುವವರಿಗಾಗಿ 5 ಸಾವಿರ ಆಸನಗಳ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. 200 ಮಂದಿ ಗಣ್ಯ ವ್ಯಕ್ತಿಗಳು, ಮಾಧ್ಯಮದವರಿಗೆ ಪ್ರತ್ಯೇಕ ವ್ಯವಸ್ಥೆ ಇರಲಿದೆ.
ಕ್ರೀಡಾಂಗಣದ ಸ್ಟ್ಯಾಂಡ್, ಗ್ರಿಲ್‌ಗಳಿಗೆ ಬಣ್ಣ ಬಳಿದು, ಶುಚಿಗೊಳಿಸಲಾಯಿತು. ಡ್ರೆಸ್ಸಿಂಗ್ ಕೊಠಡಿ ಇರುವ ಕ್ಲಬ್ ಹೌಸ್ ಕಟ್ಟಡದಲ್ಲೂ ಸ್ವಚ್ಛತಾ ಕಾರ್ಯ ನಡೆಯಿತು. ಸ್ವಯಂಸೇವಕರು, ವಿವಿಧ ಕ್ಲಬ್‌ಗಳ ಸದಸ್ಯರು, ಆಟಗಾರರು ಸೇರಿ 200ಕ್ಕೂ ಹೆಚ್ಚು ಸಿಬ್ಬಂದಿ ಸಿದ್ಧತಾ ಕಾರ್ಯದಲ್ಲಿ ತೊಡಗಿದ್ದಾರೆ.
‘ಮುಂಬೈನಿಂದ ಬಿಸಿಸಿಐ ತಟಸ್ಥ ಪಿಚ್ ಕ್ಯುರೇಟರ್ ಬಂದಿದ್ದಾರೆ. ಅವರಿಗೆ ಅಗತ್ಯ ಸಾಮಗ್ರಿ ಒದಗಿಸಲಾಗಿದೆ. ಅವರು ಪಿಚ್ ಮತ್ತು ಔಟ್‌ಫೀಲ್ಡ್ ನಿರ್ವಹಿಸುವರು. ಇಲ್ಲಿ ಎಂಟು ಮಂದಿ ಮೈದಾನ ಸಿಬ್ಬಂದಿ ಇದ್ದಾರೆ. ಬೆಳಗಾವಿಯಿಂದ ಹೆಚ್ಚುವರಿಯಾಗಿ ಐವರು ಸಿಬ್ಬಂದಿಯನ್ನು ಕರೆಸಿಕೊಂಡಿದ್ದೇವೆ. 25ಕ್ಕೂ ಹೆಚ್ಚು ಬಾಲ್‌ಬಾಯ್‌ಗಳನ್ನು ನಿಯೋಜಿಸಲಾಗುವುದು’ ಎಂದು ಕೆಎಸ್‌ಸಿಎ ಧಾರವಾಡ ವಲಯದ ನಿಮಂತ್ರಕ ವೀರಣ್ಣ ಸವಡಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಸ್ಟಾರ್ ಸ್ಪೋರ್ಟ್ಸ್ ಮತ್ತು ಜಿಯೊ ಹಾಟ್‌ಸ್ಟಾರ್‌ನಲ್ಲಿ ಪಂದ್ಯದ ನೇರಪ್ರಸಾರ ಇರಲಿದೆ. ಅವರ 50 ಮಂದಿ ಸಿಬ್ಬಂದಿ ಬರುವರು. ಕ್ಯಾಮೆರಾ ಅಳವಡಿಕೆಗೆ ನಾಲ್ಕು ಕಡೆ ಸ್ಟ್ಯಾಂಡ್ ವ್ಯವಸ್ಥೆ ಮಾಡಲಾಗುವುದು’ ಎಂದು ಹೇಳಿದರು.
‘ಪಂದ್ಯ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುವ ನಿರೀಕ್ಷೆಯಿದ್ದು, ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ, ಸೂಕ್ತ ಭದ್ರತೆ ಒದಗಿಸುವಂತೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಅವರಿಗೆ ಕೋರಲಾಗಿದೆ. ಯಾವ ದ್ವಾರದಿಂದ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂಬ ಬಗ್ಗೆ ಪೊಲೀಸ್ ಸಿಬ್ಬಂದಿ ಜತೆ ಚರ್ಚಿಸಿ ನಿರ್ಧರಿಸಲಾಗುವುದು’ ಎಂದರು.
ಜಮ್ಮು –ಕಾಶ್ಮೀರ ತಂಡ ಹುಬ್ಬಳ್ಳಿಗೆ ಈಗಾಗಲೇ ಬಂದಿದೆ. ಶನಿವಾರ ಅವರು ಅಭ್ಯಾಸ ಆರಂಭಿಸುವರು. ಪ್ರಾಕ್ಟೀಸ್ ಪಿಚ್‌ಗಳನ್ನು ಸಿದ್ಧಪಡಿಸಲಾಗಿದೆ. ಫೆ.22ರಂದು ಕರ್ನಾಟಕ ತಂಡ ಬರಲಿದೆ.ವೀರಣ್ಣ ಸವಡಿ ನಿಮಂತ್ರಕ ಕೆಎಸ್‌ಸಿಎ ಧಾರವಾಡ ವಲಯ
ಅನುಮಾನಾಸ್ಪದ ವ್ಯಕ್ತಿಗಳು ಕ್ರೀಡಾಂಗಣಕ್ಕೆ ಬಾರದಂತೆ ನಿಗಾ ವಹಿಸಲಾಗುವುದು. ಪಂದ್ಯಕ್ಕೂ ಮುನ್ನ ಕ್ರೀಡಾಂಗಣದ ಸುತ್ತಮುತ್ತ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.ಎನ್.ಶಶಿಕುಮಾರ್ ಪೊಲೀಸ್ ಕಮಿಷನರ್ ಹುಬ್ಬಳ್ಳಿ–ಧಾರವಾಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.