ADVERTISEMENT

ಧಾರವಾಡ | ಮೀಸಲು ಅರಣ್ಯದಲ್ಲಿ ಮರಗಳ ಹನನ; ರಸ್ತೆ ನಿರ್ಮಾಣ

ಎಫ್‌ಐಆರ್‌ ದಾಖಲು; ತನಿಖೆ ಶುರು

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2025, 0:25 IST
Last Updated 3 ಏಪ್ರಿಲ್ 2025, 0:25 IST
ಧಾರವಾಡ ತಾಲ್ಲೂಕಿನ ಹಳ್ಳಿಗೇರಿ ಮೀಸಲು ಅರಣ್ಯ ಪ್ರದೇಶದಲ್ಲಿ ಕಾಲು ದಾರಿಯಲ್ಲಿ ಜಲ್ಲಿಕಲ್ಲು ಹಾಕಿ ರಸ್ತೆ ನಿರ್ಮಿಸಿರುವುದು
ಪ್ರಜಾವಾಣಿ ಚಿತ್ರ: ಬಿ.ಎಂ.ಕೇದಾರನಾಥ
ಧಾರವಾಡ ತಾಲ್ಲೂಕಿನ ಹಳ್ಳಿಗೇರಿ ಮೀಸಲು ಅರಣ್ಯ ಪ್ರದೇಶದಲ್ಲಿ ಕಾಲು ದಾರಿಯಲ್ಲಿ ಜಲ್ಲಿಕಲ್ಲು ಹಾಕಿ ರಸ್ತೆ ನಿರ್ಮಿಸಿರುವುದು ಪ್ರಜಾವಾಣಿ ಚಿತ್ರ: ಬಿ.ಎಂ.ಕೇದಾರನಾಥ   

ಧಾರವಾಡ: ತಾಲ್ಲೂಕಿನ ಬಣದೂರು ಶಾಖೆಯ ಹಳ್ಳಿಗೇರಿ ಮೀಸಲು ಅರಣ್ಯ ಪ್ರದೇಶದಲ್ಲಿ ರಸ್ತೆ ನಿರ್ಮಾಣ, ಜಮೀನಿನಲ್ಲಿನ ನೂರಾರು ಮರಗಳ ಹನನಕ್ಕೆ ಸಂಬಂಧಿಸಿದಂತೆ ಜಮೀನು ಮಾಲೀಕ ನವೀನ್‌ ಸಿಂಗ್‌ ಠಾಕೂರ್‌ ವಿರುದ್ಧ ಪ್ರಕರಣ ದಾಖಲಾಗಿದೆ.

ನವೀನ್‌ ಸಿಂಗ್‌ ಜಮೀನಿನಲ್ಲಿನ (ಸರ್ವೆ ನಂಬರ್‌ 23 ಮತ್ತು 24) ವಿವಿಧ ಜಾತಿಯ 177 ಮರ ಹಾಗೂ ಸರ್ವೆ ನಂಬರ್‌ 22ರ ಭಾಗದಲ್ಲಿ ರಸ್ತೆ ನಿರ್ಮಾಣಕ್ಕೆ 26 ಮರಗಳನ್ನು ಕಡಿಯಲಾಗಿದೆ ಎಂದು ಎಫ್‌ಐಆರ್‌ನಲ್ಲಿ ದಾಖಲಾಗಿದೆ. ರಸ್ತೆ ನಿರ್ಮಾಣಕ್ಕೆ ಬಳಸಿದ ಟ್ರಾಕ್ಟರ್‌ ಡೋಜರ್‌, ಕತ್ತರಿಸಿದ ಮರಗಳನ್ನು ವಶಕ್ಕೆ ಪಡೆಯಲಾಗಿದೆ.

ಆದರೆ, ಹಳ್ಳಿಗೇರಿ ಮೀಸಲು ಅರಣ್ಯದಲ್ಲಿ ಸರ್ವೆ ನಂಬರ್‌ 22ರ ಭಾಗದಲ್ಲಿ ಕಾಲು ದಾರಿಗೆ ಜಲ್ಲಿಕಲ್ಲು ಹಾಕಿ, ಅರ್ಧ ಕಿ.ಮೀ. ರಸ್ತೆ ನಿರ್ಮಿಸಲಾಗಿದೆ. ದಾರಿ ಬದಿಯ ಮರಗಳನ್ನು ಕಡಿಯಲಾಗಿದೆ.

ADVERTISEMENT

ಜಮೀನು ಭಾಗದಲ್ಲಿ ಕೆಲ ಮರಗಳನ್ನು ಬುಡ ಸಮೇತ ಉರುಳಿಸಿದರೆ, ಕೆಲ ಮರಗಳನ್ನು ಕತ್ತರಿಸಲಾಗಿದೆ. ನಿರ್ಮಾಣ ಕಾರ್ಯಕ್ಕೆ ಜಲ್ಲಿ, ಸಿಮೆಂಟ್‌ ಇಟ್ಟಿಗೆ, ‘ಎಂ’ ಸ್ಯಾಂಡ್‌ ಸಂಗ್ರಹಿಸಲಾಗಿದೆ.

‘ಜಮೀನಿನಲ್ಲಿನ ಮರಗಳನ್ನು ಕಡಿಯಲು, ರಸ್ತೆ ನಿರ್ಮಿಸಲು ಇಲಾಖೆಯಿಂದ ಅನುಮತಿ ಪಡೆಯಬೇಕು. ಮೀಸಲು ಅರಣ್ಯ ಪ್ರದೇಶದಲ್ಲಿ ರಸ್ತೆ ನಿರ್ಮಾಣಕ್ಕೆ ಅವಕಾಶ ಇಲ್ಲ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್‌) ವಿವೇಕ ಕವರಿ ‘ಪ್ರಜಾವಾಣಿ’ ತಿಳಿಸಿದರು.

‘ಮೀಸಲು ಅರಣ್ಯದಲ್ಲಿ ರಸ್ತೆ ನಿರ್ಮಾಣ, ಮರಗಳ ಹನನದ ಹಿಂದೆ ಪ್ರಭಾವಿ ರಾಜಕೀಯ ವ್ಯಕ್ತಿ ಕೈವಾಡ ಇದೆ. ಅರಣ್ಯ ಇಲಾಖೆ ಕೆಲ ಅಧಿಕಾರಿಗಳು ಅವರ ಜತೆ ಕೈಜೋಡಿಸಿದ್ದಾರೆ’ ಎಂದು ಜನ ಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಆರೋಪಿಸಿದರು.

ಧಾರವಾಡ ತಾಲ್ಲೂಕಿನ ಹಳ್ಳಿಗೇರಿ ಮೀಸಲು ಅರಣ್ಯ ಭಾಗದ ಜಮೀನಿನಲ್ಲಿ ಮರಗಳನ್ನು ಕತ್ತರಿಸಿರುವುದು ಪ್ರಜಾವಾಣಿ ಚಿತ್ರ: ಬಿ.ಎಂ.ಕೇದಾರನಾಥ
ಧಾರವಾಡ ತಾಲ್ಲೂಕಿನ ಹಳ್ಳಿಗೇರಿ ಮೀಸಲು ಅರಣ್ಯ ಭಾಗದ ಜಮೀನಿನಲ್ಲಿ ಸಿಮೆಂಟ್‌ ಇಟ್ಟಿಗೆ ಜಲ್ಲಿ ಎಂ ಸ್ಯಾಂಡ್‌ ಸಂಗ್ರಹಿಸಿರುವುದು ಪ್ರಜಾವಾಣಿ ಚಿತ್ರ: ಬಿ.ಎಂ.ಕೇದಾರನಾಥ
ಮೀಸಲು ಅರಣ್ಯದಲ್ಲಿ ರಸ್ತೆ ನಿರ್ಮಾಣ ಮರಗಳ ಹನನಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಿಸಲಾಗಿದೆ. ಪ್ರಕರಣದ ತನಿಖೆಯನ್ನು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗೆ ವಹಿಸಲಾಗಿದೆ.
ವಿವೇಕ ಕವರಿ, ಡಿಸಿಎಫ್‌ ಧಾರವಾಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.