ADVERTISEMENT

PV Web Exclusive: ಬೆಳವಲದ ನಾಡಲ್ಲಿ ಶ್ರೀಗಂಧ ಕೃಷಿ ಪ್ರಯೋಗ

ಧಾರವಾಡ ತಾಲ್ಲೂಕಿನ ವೆಂಕಟಾಪುರ ಸಮೀಪ 25 ಎಕರೆಯಲ್ಲಿ ಶ್ರೀಗಂಧ ಬೆಳೆ

ಬಿ.ಜೆ.ಧನ್ಯಪ್ರಸಾದ್
Published 14 ಜನವರಿ 2026, 0:30 IST
Last Updated 14 ಜನವರಿ 2026, 0:30 IST
<div class="paragraphs"><p>ಧಾರವಾಡ ತಾಲ್ಲೂಕಿನ ವೆಂಕಟಾಪುರದ ಬಳಿ ರಾಜು ಪಟಾಡಿಯಾ ಅವರು ಜಮೀನಿನಲ್ಲಿ ಬೆಳೆದಿರುವ ಶ್ರೀಗಂಧದ ಗಿಡಗಳು </p></div>

ಧಾರವಾಡ ತಾಲ್ಲೂಕಿನ ವೆಂಕಟಾಪುರದ ಬಳಿ ರಾಜು ಪಟಾಡಿಯಾ ಅವರು ಜಮೀನಿನಲ್ಲಿ ಬೆಳೆದಿರುವ ಶ್ರೀಗಂಧದ ಗಿಡಗಳು

   

ಪ್ರಜಾವಾಣಿ ಚಿತ್ರ / ಬಿ.ಎಂ.ಕೇದಾರನಾಥ

ಧಾರವಾಡ: ಹುಬ್ಬಳ್ಳಿಯ ರಾಜು ಪಟಾಡಿಯಾ ಅವರು ಧಾರವಾಡ ತಾಲ್ಲೂಕಿನ ವೆಂಕಟಾಪುರ ಸಮೀಪ 25 ಎಕರೆಯಲ್ಲಿ ಶ್ರೀಗಂಧದ ಗಿಡಗಳನ್ನು ನೆಟ್ಟು ನಿರ್ವಹಿಸುತ್ತಿದ್ದಾರೆ. ಶ್ರೀಗಂಧ ಕೃಷಿ ಪ್ರಯೋಗದಲ್ಲಿ ತೊಡಗಿದ್ದಾರೆ.

ADVERTISEMENT

ಮೈಸೂರು, ಧಾರವಾಡ ಮತ್ತು ದಾವಣಗೆರೆ ಜಿಲ್ಲೆಯ ಚನ್ನಗಿರಿಯಿಂದ (ಅರಣ್ಯ ಇಲಾಖೆ ನರ್ಸರಿ) ಗಿಡಗಳನ್ನು ತಂದು ವೆಂಕಟಾಪುರ ಬಳಿಯ ಜಮೀನಿನಲ್ಲಿ ಸುಮಾರು 20 ಸಾವಿರ ಗಿಡಗಳನ್ನು ನೆಟ್ಟಿದ್ಧಾರೆ. ಜಮೀನಿಗೆ ಗಿಡಗಳನ್ನು ತರಲು ಸಾಗಣೆವೆಚ್ಚ ಸಹಿತ ಒಂದು ಗಿಡಕ್ಕೆ ₹ 25 ತಗುಲಿದೆ.

ಅರಣ್ಯದ ಪಕ್ಕದಲ್ಲೇ ಜಮೀನು ಇದೆ. ಬದಿಯಲ್ಲಿ ಸಣ್ಣ ಕೆರೆ ಇದೆ. ಒಂದು ಕಡೆ ಏರಿ ಭಾಗ, ಮತ್ತೊಂದು ಕಡೆ ಇಳಿಜಾರು, ಇನ್ನೊಂದು ಕಡೆ ಸಮತಟ್ಟು ಪ್ರದೇಶ ಇದೆ.

ಮೂರು ಕೊಳವೆ ಬಾವಿಗಳು ಇವೆ. 20 ಲಕ್ಷ ಲೀಟರ್‌ ಸಾಮರ್ಥ್ಯದ ಒಂದು ಕೃಷಿ ಹೊಂಡ ಸಹಿತ ನಾಲ್ಕು ಹೊಂಡಗಳು ಇವೆ. ಹನಿ ನೀರಾವರಿಯಲ್ಲಿ ಗಿಡಗಳಿಗೆ ನೀರು ಪೂರೈಕೆ ವ್ಯವಸ್ಥೆ ಮಾಡಲಾಗಿದೆ. ಗಿಡಗಳನ್ನು ನೆಟ್ಟು ನಾಲ್ಕು ವರ್ಷಗಳಾಗಿವೆ. ಗಿಡಗಳು ಹುಲುಸಾಗಿ ಬೆಳೆದಿವೆ. ಬೆಳೆಯದ, ಒಣಗಿದ ಗಿಡಗಳ ಜಾಗದಲ್ಲಿ ಮತ್ತೆ ಗಿಡಗಳನ್ನು ನೆಡಲಾಗಿದೆ. ಜಮೀನು ನಿರ್ವಹಣೆಗೆ ಕೆಲಸಗಾರರು ಇದ್ದಾರೆ.

‘ಅರಣ್ಯ ಇಲಾಖೆಯವರ ಮಾರ್ಗದರ್ಶನದಲ್ಲಿ ಶ್ರೀಗಂಧ ಕೃಷಿಯಲ್ಲಿ ತೊಡಗಿದ್ದೇನೆ. ಮಣ್ಣು ಪರೀಕ್ಷೆ ಮಾಡಿಸಿದ್ದೇನೆ. ಇಲ್ಲಿನ ವಾತವರಣ ಮಣ್ಣಿನ ಸತ್ವ, ಗಂಧ ಬೆಳೆಯಲು ಪೂರಕವಾಗಿದೆ. ಗಿಡಗಳನ್ನು ನೆಟ್ಟ ಹೊಸತರಲ್ಲಿ (ಮೊದಲ ವರ್ಷ) ಪ್ರತಿ ಗಿಡ ಅಕ್ಕಪಕ್ಕದಲ್ಲಿ ತೊಗರಿ ಗಿಡಗಳನ್ನು ಬೆಳೆಸಿದ್ದೆವು. ಶ್ರೀಗಂಧಕ್ಕೆ ಸಾರಜನಕ (ನೈಟ್ರೋಜನ್‌) ಯಥೇಚ್ಛವಾಗಿರಬೇಕು’ ಎಂದು ರಾಜು ಪಟಾಡಿಯಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಗಿಡಗಳ ಪಕ್ಕದಲ್ಲಿ ಈಗ ಹಣ್ಣಿನ ಸಸಿ ನೆಡಲು ಅರಣ್ಯ ಇಲಾಖೆಯವರು ತಿಳಿಸಿದ್ದಾರೆ. ಪೇರಲ,  ಪಪ್ಪಾಯಿ, ಸೀತಾಫಲ ಸಸಿಗಳನ್ನು ತಯಾರಿ ಮಾಡಿಕೊಂಡಿದ್ದೇವೆ. ಗಿಡದ ಆಜುಬಾಜುವಿನಲ್ಲಿ ಏನಾದರೂ ಬೆಳೆಯಲೇಬೇಕು. ಶ್ರೀಗಂಧ ಗಿಡಗಳು ಹೆಚ್ಚು ನೀರು ಬೇಡುವುದಿಲ್ಲ. ಆಗಾಗ ಸ್ವಲ್ಪ ಗೊಬ್ಬರ ಹಾಕುತ್ತೇವೆ. ಗಿಡಗಳಿಗೆ ರೋಗ ತಗುಲದಂತೆ ಔಷಧ ಸಿಂಪಡಣೆ ಮಾಡುತ್ತೇವೆ’ ಎಂದು ತಿಳಿಸಿದರು.

‘ಕೊಟೂರಿನಲ್ಲಿ 17 ಎಕರೆ ಹಾಗೂ ಹುಬ್ಬಳ್ಳಿ ತಾಲ್ಲೂಕಿನ ಛಬ್ಬಿಯಲ್ಲಿ ನಾಲ್ಕು ಎಕರೆಯಲ್ಲಿ ಶ್ರೀಗಂಧ ನೆಟ್ಟಿದ್ದೇನೆ. ಮೂರೂ ಕಡೆ ಒಟ್ಟು 50 ಸಾವಿರ ಗಿಡ ನೆಟ್ಟಿದ್ದೇನೆ, ಒಟ್ಟಾರೆ ಒಂದು ಲಕ್ಷ ಗಿಡಗಳನ್ನು ನೆಡುವ ಗುರಿ ಇದೆ. ವಾರ್ಷಿಕ ಸುಮಾರು ₹ 20 ಲಕ್ಷ (ಔಷಧ,  ಗೊಬ್ಬರ, ನಿರ್ವಹಣೆ, ಕೆಲಸಗಾರರು)  ವೆಚ್ಚವಾಗುತ್ತದೆ. ಶ್ರೀಗಂಧದಲ್ಲಿ ವರಮಾನ ಚೆನ್ನಾಗಿ ಬರುವ ನಿರೀಕ್ಷೆ ಇದೆ. 15 ವರ್ಷದಿಂದ 20 ವರ್ಷಗಳು ಕಾಯಬೇಕು. ಕಳ್ಳರಿಂದ ಗಿಡಗಳನ್ನು ರಕ್ಷಣೆ ಮಾಡುವುದೇ ಸವಾಲು’ ಎಂದು ತಿಳಿಸಿದರು.

ಅರಣ್ಯ ಇಲಾಖೆಯ ಅಧಿಕಾರಿಗಳು ವೆಂಕಟಾಪುರ ಸಮೀಪದ ಜಮೀನಿಗೆ ಭೇಟಿ ಮಾಡಿದ್ದಾರೆ. ಗಿಡಗಳ ಬೆಳವಣಿಗೆ, ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲನೆ ಮಾಡಿದ್ದಾರೆ. ಬೆಳೆಗಾರಗೆ ಸಲಹೆಗಳನ್ನು ನೀಡಿದ್ದಾರೆ.

ಧಾರವಾಡ ತಾಲ್ಲೂಕಿನ ವೆಂಕಟಾಪುರ ಗ್ರಾಮ ಸಮೀಪ ಜಮೀನಿನಲ್ಲಿ ಬೆಳೆದಿರುವ ಶ್ರೀಗಂಧ ಗಿಡಗಳು

ಗಿಡ ನೆಟ್ಟು ನಾಲ್ಕು ವರ್ಷವಾಗಿದೆ. ಎರಡು ವರ್ಷಗಳ ನಂತರ ಮುಧೋಳ ನಾಯಿಗಳು, ಕಾವಲಗಾರರನ್ನು ವ್ಯವಸ್ಥೆ ಮಾಡುತ್ತೇನೆ. ಕಣ್ಗಾವಲಿಗೆ ಸಿ.ಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಿ ನಿರಂತರ ನಿಗಾ ವಹಿಸುವುದು ಅನಿವಾರ್ಯ.
ರಾಜುಪಟಾಡಿಯಾ, ಶ್ರೀಗಂಧ ಬೆಳೆಗಾರ, ಹುಬ್ಬಳ್ಳಿ

ಧಾರವಾಡ ತಾಲ್ಲೂಕಿನ ವೆಂಕಟಾಪುರ ಸಮೀಪ ಶ್ರೀಗಂಧ ಗಿಡಗಳನ್ನು ಬೆಳೆದಿರುವ ಜಮೀನಿನಲ್ಲಿ ನಿರ್ಮಿಸಿರುವ ಕೃಷಿ ಹೊಂಡ

ಗಿಡದಲ್ಲಿ 10 ವರ್ಷ ನಂತರ ಹಾರ್ಟ್‌ವುಡ್‌ ಬೆಳವಣಿಗೆ

‘ರಾಜು ಪಟಾಡಿಯಾ ಅವರ ಜಮೀನಿಗೆ ಭೇಟಿ ನೀಡಿ ಸಮೀಕ್ಷೆ ಮಾಡಿದ್ದೇವೆ. ಗಿಡಗಳು ಚೆನ್ನಾಗಿವೆ. ಗಿಡಗಳಲ್ಲಿ ‘ಹಾರ್ಟ್‌ ವುಡ್‌’ ಬೆಳವಣಿಗೆಯಾಗುವುದು 10 ವರ್ಷಗಳ ನಂತರ. ಶ್ರೀಗಂಧ ಕೃಷಿಯಲ್ಲಿ ಆದಾಯ ಪಡೆಯಲು 20 ವರ್ಷ ಕಾಯಬೇಕು’ ಎಂದು ಅರಣ್ಯ ಇಲಾಖೆಯ ಸಂಶೋಧನಾ ಘಟಕದ ಆರ್‌ಎಫ್‌ಒ ಮಹಾಂತೇಶ ಪೆಟ್ಲೂರು ತಿಳಿಸಿದರು.

‘ಧಾರವಾಡ, ಹಾವೇರಿ, ಗದಗ ಮತ್ತು ಬೆಳಗಾವಿ ಜಿಲ್ಲೆಗಳ ಶ್ರೀಗಂಧ ಬೆಳಗಾರರಿಗೆ ರಾಜು ಅವರ ಜಮೀನಿನಲ್ಲೇ ಶ್ರೀಗಂಧ ಕೃಷಿ ಕಾರ್ಯಗಾರ ಆಯೋಜಿಸಲು ಉದ್ದೇಶಿಸಲಾಗಿದೆ. ವಿಜ್ಞಾನಿಗಳು ಬೆಳೆಗಾರರಿಗೆ ಶ್ರೀಗಂಧ ಕೃಷಿ ಕುರಿತು ಸಲಹೆಗಳನ್ನು ನೀಡುವರು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.