ADVERTISEMENT

‘ಅಳ್ನಾವರ ತಾಲ್ಲೂಕಿನ ಅಭಿವೃದ್ಧಿಗೆ ಬದ್ದ’: ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್

​ಪ್ರಜಾವಾಣಿ ವಾರ್ತೆ
Published 3 ಜೂನ್ 2025, 13:34 IST
Last Updated 3 ಜೂನ್ 2025, 13:34 IST
ಅಳ್ನಾವರ ತಾಲ್ಲೂಕು ಆಡಳಿತದ ಪ್ರಜಾಸೌಧ ಕಟ್ಟಡ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಭೂಮಿಪೂಜೆ ನೇರವೇರಿಸಿದರು.
ಅಳ್ನಾವರ ತಾಲ್ಲೂಕು ಆಡಳಿತದ ಪ್ರಜಾಸೌಧ ಕಟ್ಟಡ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಭೂಮಿಪೂಜೆ ನೇರವೇರಿಸಿದರು.   

ಅಳ್ನಾವರ: ‘ಹೊಸದಾಗಿ ರಚನೆಯಾಗಿರುವ ಅಳ್ನಾವರ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ತಾವು ಸದಾ ಬದ್ಧ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

ಪಟ್ಟಣದಲ್ಲಿ ₹8.60 ಕೋಟಿ ವೆಚ್ಚದ ತಾಲ್ಲೂಕು ಆಡಳಿತದ ಪ್ರಜಾಸೌಧ ಕಟ್ಟಡ ಕಾಮಗಾರಿ ಹಾಗೂ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

ದಿವಂಗತ ಮುಜಾಹಿದ್ ಕಾಂಟ್ರ್ಯಾಕ್ಟರ ಅವರ ನೇತೃತ್ವದಲ್ಲಿ ಹಲವಾರು ವರ್ಷ ನಡೆದ ಹೋರಾಟದ ಕ್ಷಣಗಳನ್ನು ಸ್ಮರಿಸಿದ ಅವರು, ‘ಮುಜಾಹಿದ್‌ ಹೋರಾಟದ ಫಲವಾಗಿ ಇಂದು ₹15 ಕೋಟಿಗೂ ಅಧಿಕ ಅನುದಾನದ ಕಾರ್ಯಕ್ರಮಗಳು ಲೋಕಾರ್ಪಣೆಗೊಂಡಿವೆ’ ಎಂದರು.

ADVERTISEMENT

ಈ ಭಾಗದ ರಸ್ತೆ ಅಭಿವೃದ್ಧಿಗೆ ₹3.5 ಕೋಟಿ ಬಿಡುಗಡೆ ಮಾಡಲಾಗಿದೆ. ನಮ್ಮ ಸರ್ಕಾರದ ಮಹಾತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ರಾಜ್ಯದ ಪ್ರಗತಿಗೆ ವೇಗ ದೊರೆತಿದೆ.  ಈ  ಯೋಜನೆಗಳ ಮೂಲಕ ಪ್ರತಿ ವರ್ಷ ₹56 ಸಾವಿರ ಕೋಟಿ ಹಣ ನೇರವಾಗಿ ಬಡವರ ಕುಟುಂಬಕ್ಕೆ ಸಂದಾಯವಾಗುತ್ತಿದೆ. ಬಡವರಿಗೆ, ರೈತರಿಗೆ ಅನುಕೂಲ ಆಗಿದೆ ಎಂದರು.

ಧಾರವಾಡ ಜಿಲ್ಲೆಯಲ್ಲಿ ದಾಖಲೆ ಇರದ ಸುಮಾರು 5,000 ಕುಟುಂಬಗಳಿಗೆ ಹಕ್ಕು ಪತ್ರ ನೀಡಲಾಗಿದೆ. ಕೋ ಆಪರೇಟಿವ್ ಸೊಸೈಟಿ ಹೆಸರಲ್ಲಿ ಉಳಿಮೆ ಮಾಡುತ್ತಿರುವ ರೈತರಿಗೆ ಮುಂಬರುವ ದಿನಗಳಲ್ಲಿ ಹಕ್ಕು ಪತ್ರ ನೀಡಲಾಗುವುದು. ಚರಂಡಿ ನೀರನ್ನು ಸಂಸ್ಕರಣೆ ಮಾಡುವ ₹60 ಕೋಟಿ ವೆಚ್ಚದ ಹೊಸ ಪ್ರಯೋಗ ತಾಲ್ಲೂಕಿನ ಹೊನ್ನಾಪೂರ ಗ್ರಾಮದಲ್ಲಿ ನಡೆಯುತ್ತಿದೆ. ಪಂಚ ಗ್ಯಾರಂಟಿ ಯೋಜನೆಯಡಿ ತಾಲ್ಲೂಕಿಗೆ ಕಳೆದ ಎರಡು ವರ್ಷದಲ್ಲಿ ₹92 ಕೋಟಿ ಹಣ ಹಂಚಿಕೆ ಆಗಿದೆ. ಗ್ಯಾರಂಟಿ ಯೋಜನೆ ಜೊತೆಗೆ ಇಂದಿರಾ ಗಾಂಧಿ ಕಾಲದ 20 ಅಂಶಗಳ ಕಾರ್ಯಕ್ರಮಗಳು ಬರುವ ದಿನಗಳಲ್ಲಿ  ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನಮ್ಮ ರಾಜ್ಯಕ್ಕಿಂತ ಗುಜರಾತ ರಾಜ್ಯ ಯಾವುದೇ ಮಾನದಂಡದಲ್ಲಿ ಮುಂದೆ ಇಲ್ಲ. ಆದರೆ ಗುಜರಾತ ರಾಜ್ಯ ಪ್ರಗತಿ ಸಾಧಿಸಿದೆ ಎಂದು ಬಿಂಬಿಸುತ್ತಿರುವುದು ದುರ್ದೆವದ ಸಂಗತಿ. ದೇಶದ ಏಳಿಗೆಗೆ ಪ್ರಧಾನ ಮಂತ್ರಿ ಮೋದಿ ಒಬ್ಬರೆ ಕಾರಣವೆಂದು ಯಾರಾದರೂ ಹೇಳಿದರೆ ಅದನ್ನು ಪ್ರಶ್ನಿಸುವ ಕಾರ್ಯ ಆಗಬೇಕು ಎಂದರು.

ಜಿಲ್ಲಾಧಿಕಾರಿ ದಿವ್ಯಪ್ರಭು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಭುವನೇಶ ಪಾಟೀಲ ದೇವಿದಾಸ, ಉಪವಿಭಾಗಾಧಿಕಾರಿ ಶಾಲೆಮ ಹುಸೇನ, ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಶಾಂತ ತುರ್ಕಾಣಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಮಧು ಬಡಸ್ಕರ್, ಉಪಾಧ್ಯಕ್ಷ ಅಮೂಲ ಗುಂಜೀಕರ, ಸ್ಥಾಯಿ ಸಮಿತಿ ಅಧ್ಯಕ್ಷ ಜೈಲಾನಿ ಸುದರ್ಜಿ, ಪಟ್ಟಣ ಪಂಚಾಯಿತಿ ಸರ್ವ ಸದ್ಯರು, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪ್ರಕಾಶ ಮುಗದಮ್ ಇದ್ದರು.
 

ಅಳ್ನಾವರ ತಾಲ್ಲೂಕು ಆಡಳಿತದ ಪ್ರಜಾಸೌಧ ಕಟ್ಟಡ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಭೂಮಿಪೂಜೆ ನೇರವೇರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.