ADVERTISEMENT

ಸಮಸ್ಯೆಗೆ ಸವಾಲೊಡ್ಡಿದ ಶಂಕರಲಿಂಗ

ಶೂಟಿಂಗ್‌, ಟೆನಿಸ್‌, ಪ್ಯಾರಾ ಕ್ರಿಕೆಟ್‌ ಕ್ರೀಡೆಗಳಲ್ಲಿ ಸಾಧನೆ

ಪ್ರಮೋದ
Published 2 ಡಿಸೆಂಬರ್ 2020, 19:30 IST
Last Updated 2 ಡಿಸೆಂಬರ್ 2020, 19:30 IST
ಶಂಕರಲಿಂಗ ತವಳಿ ಚಿತ್ರ/ಬಿ.ಎಂ. ಕೇದಾರನಾಥ
ಶಂಕರಲಿಂಗ ತವಳಿ ಚಿತ್ರ/ಬಿ.ಎಂ. ಕೇದಾರನಾಥ   

ಹುಬ್ಬಳ್ಳಿ: ಮೂರು ವರ್ಷದವರಿದ್ದಾಗ ಪೋಲಿಯೊ ಕಾರಣಕ್ಕಾಗಿ ಎರಡೂ ಕಾಲಿನ ಸ್ವಾಧೀನ ಕಳೆದುಕೊಂಡ ಕಲಘಟಗಿ ತಾಲ್ಲೂಕಿನ ಬಮ್ಮಗಟ್ಟಿ ಗ್ರಾಮದ ಶಂಕರಲಿಂಗ ತವಳಿ ಪ್ಯಾರಾ ಶೂಟಿಂಗ್‌, ವೀಲ್‌ಚೇರ್‌ ಟೆನಿಸ್‌ ಮತ್ತು ಪ್ಯಾರಾ ಕ್ರಿಕೆಟ್‌ ಈ ಮೂರೂ ಕ್ರೀಡೆಗಳಲ್ಲಿ ಸಾಧನೆ ಮಾಡಿದ್ದಾರೆ.

ಧಾರವಾಡದ ಪ್ರಧಾನ ಅಂಚೆ ಕಚೇರಿಯಲ್ಲಿ ಪೋಸ್ಟಲ್‌ ಅಸಿಸ್ಟೆಂಟ್‌ ಆಗಿರುವ ಶಂಕರಲಿಂಗ ಆರು ವರ್ಷಗಳಿಂದ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ. 2017ರಲ್ಲಿ ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಆಹ್ವಾನಿತ ವ್ಹೀಲ್‌ಚೇರ್‌ ಕ್ರಿಕೆಟ್‌ ಟೂರ್ನಿಯಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದರು. ಹೋದ ವರ್ಷ ರಾಜ್ಯಮಟ್ಟದ ರೈಫಲ್‌ ಶೂಟಿಂಗ್‌ ಚಾಂಪಿಯನ್‌ಷಿಪ್‌ನ ’ಪೀಪ್‌ ಸೈಟ್‌ ಏರ್‌ ರೈಫಲ್‌’ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದರು.

2018ರ ದಸರಾ ಕ್ರೀಡಾಕೂಟದಲ್ಲಿ ಇದೇ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದರು. ಅದೇ ವರ್ಷ ಚೆನ್ನೈನಲ್ಲಿ ಜರುಗಿದ ಮೌಲಾಂಕರ್‌ ಪ್ರೀ ನ್ಯಾಷನಲ್‌ ಪ್ಯಾರಾ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಜಯಿಸಿದ್ದು ಶಂಕರಲಿಂಗ ಅವರ ದೊಡ್ಡ ಸಾಧನೆಯಾಗಿದೆ. ಶಂಕರಲಿಂಗ ಬಮ್ಮಗಟ್ಟಿ ಗ್ರಾಮದ ಬಸಪ್ಪ ಹಾಗೂ ಸುಶೀಲಾ ದಂಪತಿಯ ಪುತ್ರ.

ADVERTISEMENT

2017ರಲ್ಲಿ ಬೆಂಗಳೂರಿನಲ್ಲಿ ವೀಲ್‌ಚೇರ್‌ ಟೆನಿಸ್‌ ಟೂರ್ನಿಯ ಡಬಲ್ಸ್‌ ವಿಭಾಗದಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದರು. ಆರು ಬಾರಿ ರಾಷ್ಟ್ರೀಯ ವೀಲ್‌ಚೇರ್‌ ಟೆನಿಸ್‌ ಟೂರ್ನಿಗಳಲ್ಲಿ ಭಾಗವಹಿಸಿದ್ದಾರೆ. ಪ್ಯಾರಾ ಶೂಟರ್‌ಗಳಿಗೆ ಪ್ರಾಯೋಜಕರು ಹಾಗೂ ದಾನಿಗಳು ಸಿಗುವುದು ವಿರಳ. ಆದರೂ, ಶಂಕರಲಿಂಗ ಸ್ವಂತ ಖರ್ಚಿನಿಂದ ಕ್ರೀಡಾ ಸಾಮಗ್ರಿಗಳನ್ನು ಖರೀದಿಸುತ್ತಾರೆ.

‘ಅಂಗವೈಕಲ್ಯ ನನಗೆ ಯಾವತ್ತೂ ಕೊರತೆ ಅನಿಸಿಲ್ಲ. ಅನೇಕರು ಇದನ್ನು ಶಾಪ ಎಂದುಕೊಂಡಿದ್ದಾರೆ. ಅವರ ಮನಸ್ಸಿನ ಕೀಳರಿಮೆ ಹೋಗಲಾಡಿಸಲು ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಂಡೆ. ಅಂತಿಮವಾಗಿ ಪ್ಯಾರಾ ಶೂಟಿಂಗ್‌ ಮತ್ತು ಟೆನಿಸ್‌ನಲ್ಲಿ ಸಾಧನೆ ಮುಂದುವರಿಸಿದ್ದೇನೆ. ಈಗ ಶೂಟಿಂಗ್‌ ಕ್ರೀಡೆಯತ್ತ ಹೆಚ್ಚು ಗಮನ ಹರಿಸುತ್ತಿದ್ದೇನೆ. ಇದೇ ಕ್ರೀಡೆಯಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆಲ್ಲುವ ಹೆಗ್ಗುರಿ ಹೊಂದಿದ್ದೇನೆ’ ಎಂದು ಶಂಕರಲಿಂಗ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.