ಮುಖ್ಯ ಸಚೇತಕ ಸಲೀಂ ಅಹಮ್ಮದ್
ಹುಬ್ಬಳ್ಳಿ: ‘ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತಕಳವು ಪ್ರಕರಣಕ್ಕೆ ಸಂಬಂಧಿಸಿ ಎಸ್‌ಐಟಿ ತನಿಖೆ ನಡೆಸಿ, ಸತ್ಯಾಂಶ ಹೊರಹಾಕಲಿದೆ’ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮತಕಳವು ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಲು ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿದ್ದು ಸ್ವಾಗತಾರ್ಹ. ಮತಕಳವಿನ ಹಿಂದೆ ಕಾಣದ ಕೈಗಳು ಕೆಲಸ ಮಾಡಿದ್ದು, ಅದಕ್ಕೆ ಚುನಾವಣಾ ಆಯೋಗ ಶಾಮೀಲಾಗಿದೆ. ಹೀಗಾಗಿ, ಕೆಲವು ಕಡೆ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಆಳಂದದಲ್ಲಿ ಆರು ಸಾವಿರ ಮತ ಕಳವು ಆಗಿರುವ ಅನುಮಾನವಿದೆ’ ಎಂದರು.
‘ರಾಜ್ಯ ಸರ್ಕಾರ ನಡೆಸಲು ಉದ್ದೇಶಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಿಂದ ತುಳಿತಕ್ಕೊಳಗಾದ ಸಮಾಜಕ್ಕೆ ಶಕ್ತಿ ಸಿಗಲಿದೆ. ಇದು ಕ್ರಾಂತಿಕಾರಿ ನಡೆಯಾಗಿದ್ದು, ಯಾರೂ ಆತಂಕಪಡುವ ಅಗತ್ಯವಿಲ್ಲ. ಯಾವ್ಯಾವ ಸಮಾಜಕ್ಕೆ ಎಷ್ಟೆಷ್ಟು ಸೌಲಭ್ಯ ನೀಡಬೇಕು ಎನ್ನುವುದು ಸಮೀಕ್ಷೆಯಿಂದ ತಿಳಿಯಲಿದೆ. ಹೀಗಾಗಿ ಎಲ್ಲರೂ ಇದರಲ್ಲಿ ಭಾಗಿಯಾಗಬೇಕು’ ಎಂದು ವಿನಂತಿಸಿದ ಸಲೀಂ, ‘ಸಮೀಕ್ಷಾ ವರದಿಯನ್ನು ಸಚಿವ ಸಂಪುಟದಲ್ಲಿ ಇಟ್ಟು, ಸರ್ವರಿಗೂ ನ್ಯಾಯ ಕೊಡಲು ಪ್ರಯತ್ನಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.