
ಹುಬ್ಬಳ್ಳಿ: ‘ಸ್ಲಂ ಪ್ರದೇಶದ ಎಲ್ಲ ನಿವಾಸಿಗಳಿಗೆ ಹಕ್ಕುಪತ್ರ ಕೊಡುವಂತಹ ಕೆಲಸ ಮಾಡುತ್ತೇನೆ’ ಎಂದು ಕರ್ನಾಟಕ ರಾಜ್ಯ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ ಭರವಸೆ ನೀಡಿದರು.
ನಗರದ ಮೇದಾರ ಓಣಿ ಸಿದ್ಧಾರ್ಥ ಕಾಲೊನಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ವಿಶೇಷ ಅನುದಾನದಡಿ ₹2 ಕೋಟಿ ವೆಚ್ಚದಲ್ಲಿ ಒಳಚರಂಡಿ ಹಾಗೂ ರಸ್ತೆ ಕಾಮಗಾರಿ, ಬಾಳಿಕಾಯಿ ಪ್ಲಾಟ್‌ನಲ್ಲಿ ಲೋಕೋಪಯೋಗಿ ಇಲಾಖೆಯ ₹1 ಕೋಟಿ ಅನುದಾನದಲ್ಲಿ ಡಾಂಬರ್ ರಸ್ತೆ ಕಾಮಗಾರಿ ಮತ್ತು ನೂರಾಣಿ ಪ್ಲಾಟ್‌ನಲ್ಲಿ ಯುಜಿಡಿ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಜನರಿಗೆ ಉಚಿತ ಚಿಕಿತ್ಸೆ ನೀಡುವ ಉದ್ದೇಶದಿಂದ ಕ್ಷೇತ್ರ ವ್ಯಾಪ್ತಿಯಲ್ಲಿ ‘ನಮ್ಮ ಕ್ಲಿನಿಕ್’ ಸ್ಥಾಪನೆ ಮಾಡಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯ ಹೆಚ್ಚಿಸಲಾಗಿದೆ. ವಿವಿಧ ಸಮಾಜಗಳ ಅಭಿವೃದ್ಧಿಗಾಗಿ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳ ಆಯೋಜನೆಗೆ ಹತ್ತಾರು ಸಮುದಾಯ ಭವನ ನಿರ್ಮಿಸಲಾಗಿದೆ ಎಂದು ಹೇಳಿದರು.
ನ್ಯೂ ಇಂಗ್ಲಿಷ್ ಸ್ಕೂಲ್ ಬಳಿ ₹8 ಕೋಟಿ ಅನುದಾನದಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹಳೇ ಹುಬ್ಬಳ್ಳಿ ಪ್ರಮುಖ ರಸ್ತೆಯನ್ನು ದ್ವಿಪಥವಾಗಿ ಮಾಡಲು ಹಾಗೂ ಮಟನ್ ಮಾರುಕಟ್ಟೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು’ ಎಂದು ಹೇಳಿದರು.
ಕ್ಷೇತ್ರ ಸರ್ಕಾರಿ ಶಾಲೆಗಳ ನವೀಕರಣ, ಸ್ಮಾರ್ಟ್ ಕ್ಲಾಸ್ ಸೌಲಭ್ಯ ಮತ್ತು ಶಾಲೆಗಳಿಗೆ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ಕೊಳಗೇರಿ ಪ್ರದೇಶದಲ್ಲಿ ಸಿಸಿ ರಸ್ತೆಗಳು ಮತ್ತು ಯುಜಿಡಿ ವ್ಯವಸ್ಥೆ ನಿರ್ಮಿಸುವುದಕ್ಕಾಗಿ ಕೋಟ್ಯಂತರ ಅನುದಾನ ಒದಗಿಸಲಾಗಿದೆ ಎಂದು ತಿಳಿಸಿದರು.
ಪಾಲಿಕೆ ಸದಸ್ಯರಾದ ರಾಧಾಬಾಯಿ ಸಪಾರಿ, ಮನ್ಸೂರಾ ಮುದಗಲ್ಲ, ಮುಖಂಡರಾದ ರಾಜಕುಮಾರ ಕಾಮರೆಡ್ಡಿ, ಭಾಗಣ್ಣ ಬಿರಾಜದಾರ, ಮುಸ್ತಾಕ ಮುದಗಲ್ಲ, ಬಸೀರ ಗುಡಮಾಲ್, ಅಂಬರೀಶ ಛಲವಾದಿ, ಆರೀಫ್ ದೊಡ್ಡಮನಿ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.