
ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ 10,000 ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತಿದ್ದರೂ, ಸಕ್ಕರೆ ಕಾರ್ಖಾನೆಯೊಂದೂ ಸ್ಥಾಪನೆಯಾಗದ ಕಾರಣ ಕಬ್ಬು ಬೆಳೆಗಾರರು ಇತರೆ ಜಿಲ್ಲೆಗಳನ್ನೇ ಆಶ್ರಯಿಸುವಂತಾಗಿದೆ.
ಜಿಲ್ಲೆಯ ಕಲಘಟಗಿ (4,693 ಹೆಕ್ಟೇರ್), ಧಾರವಾಡ (3,518 ಹೆ.), ಅಳ್ನಾವರ (1,850 ಹೆ.) ಹಾಗೂ ಹುಬ್ಬಳ್ಳಿ (280 ಹೆ.) ಭಾಗದಲ್ಲಿ ಕಬ್ಬು ಬೆಳೆಯಲಾಗುತ್ತದೆ. ಕಬ್ಬಿನ ಗುಣಮಟ್ಟವೂ ಚೆನ್ನಾಗಿದೆ. ಆದರೆ, ಸಹಕಾರ ರಂಗ ಅಥವಾ ಖಾಸಗಿ ರಂಗದ ಸಕ್ಕರೆ ಕಾರ್ಖಾನೆ ಇಲ್ಲ. ಸಕ್ಕರೆ ಕಾರ್ಖಾನೆ ಸ್ಥಾಪಿಸುವ ಯತ್ನಗಳೂ ಸಫಲವಾಗಿಲ್ಲ ಎನ್ನುತ್ತಾರೆ ಕಬ್ಬು ಬೆಳೆಗಾರರು.
‘ನಾಲ್ಕು ಎಕರೆಯಲ್ಲಿ ಕಬ್ಬು ಬೆಳೆಯುತ್ತೇನೆ. ಉತ್ತಮ ಇಳುವರಿಯೂ ಸಿಗುತ್ತದೆ. ಬೇರೆ ಜಿಲ್ಲೆಗಳಲ್ಲಿರುವ ಸಕ್ಕರೆ ಕಾರ್ಖಾನೆಗಳಿಗೆ ನಾವೇ ಕಬ್ಬು ಕೊಂಡೊಯ್ಯಬೇಕಿದ್ದು, ಸಾಗಣೆ ವೆಚ್ಚ ಹೊರೆಯಾಗುತ್ತದೆ. ಕಾರ್ಖಾನೆಯವರು ಮನಸೋಇಚ್ಛೆ ತೂಕ ಕಡಿಮೆ ಮಾಡುತ್ತಾರೆ. ಕಟಾವು ಮಾಡುವವರೂ ಹೆಚ್ಚು ಹಣ ಕೇಳುತ್ತಾರೆ. ಇಷ್ಟೆಲ್ಲ ಖರ್ಚುಗಳನ್ನು ಭರಿಸಬೇಕಿರುವುದರಿಂದ ಕಬ್ಬು ಬೆಳೆಗಾರರಿಗೆ ಹೆಚ್ಚು ಆದಾಯ ಸಿಗುವುದಿಲ್ಲ’ ಎನ್ನುತ್ತಾರೆ ಗಾಮನಗಟ್ಟಿಯ ರೈತ ಈಶ್ವರ ಮಾಳಣ್ಣವರ.
‘ಧಾರವಾಡ ಜಿಲ್ಲೆಯಲ್ಲೇ ಸಕ್ಕರೆ ಕಾರ್ಖಾನೆ ಸ್ಥಾಪನೆಯಾದರೆ ಸಾಗಣೆ ವೆಚ್ಚ ಹೆಚ್ಚಾಗುವುದಿಲ್ಲ. ಲೋಪವಾದಲ್ಲಿ ಕಾರ್ಖಾನೆಯವರನ್ನು ಪ್ರಶ್ನಿಸಬಹುದು. ಇದರಿಂದ ಈ ಭಾಗದ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತದೆ’ ಎಂದು ಹೇಳಿದರು.
‘ಮೂರು ವರ್ಷಗಳಿಂದ 10 ಎಕರೆಯಲ್ಲಿ ಕಬ್ಬು ಬೆಳೆಯುತ್ತಿರುವೆ. ಮೊದಲ ವರ್ಷ ಎಕರೆಗೆ ₹50,000 ಹಾಗೂ ನಂತರದ ವರ್ಷ ₹30,000 ಖರ್ಚಾಯಿತು. ಎಕರೆಗೆ 50 ಟನ್ ಕಬ್ಬಿನ ಇಳುವರಿ ಬರುವುದರಿಂದ ಉತ್ತಮ ಆದಾಯ ಸಿಗುತ್ತದೆ. ಸದ್ಯ ಕ್ವಿಂಟಲ್‌ಗೆ ₹3,250 ದರವಿದ್ದು, ಧಾರವಾಡ ಜಿಲ್ಲೆಯಲ್ಲೇ ಕಾರ್ಖಾನೆ ಸ್ಥಾಪನೆಯಾದರೆ ಹೆಚ್ಚು ದರ ಸಿಗುವುದೆಂಬ ನಿರೀಕ್ಷೆ ಇದೆ’ ಎಂದು ಅಗಡಿಯ ರೈತ ಬಸಯ್ಯ ಮಂಟೆಯ್ಯನವರ ತಿಳಿಸಿದರು.
ಕಬ್ಬಿನ ಲಾಬಿ: ‘ಜಿಲ್ಲೆಯಲ್ಲಿ ಎರಡು ಸಕ್ಕರೆ ಕಾರ್ಖಾನೆಗಳ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿತ್ತು. ಆದರೆ, ಈವರೆಗೆ ಸ್ಥಾಪನೆ ಆಗಿಲ್ಲ. ಕಬ್ಬು ಬೆಳೆ ಹಾಳಾಗುವ ಪ್ರಮಾಣ ಕಡಿಮೆ. ಹಾಗಾಗಿ, ಬೆಳೆಗಾರರಿಗೆ ಲಕ್ಷಾಂತರ ರೂಪಾಯಿ ಆದಾಯ ತಂದುಕೊಡುತ್ತದೆ. ಕಲಘಟಗಿ, ಅಳ್ನಾವರ, ಧಾರವಾಡ ಗ್ರಾಮೀಣ ಭಾಗದಲ್ಲಿ ಕಾರ್ಖಾನೆ ಸ್ಥಾಪಿಸಲು ಅವಕಾಶವಿದೆ. ಆದರೆ, ಸಕ್ಕರೆ ಕಾರ್ಖಾನೆ ಹೊಂದಿರುವ ರಾಜಕಾರಣಿಗಳು ಇದಕ್ಕೆ ಅವಕಾಶ ನೀಡುತ್ತಿಲ್ಲ. ಇದು ಕಬ್ಬಿನ ಲಾಬಿ’ ಎಂದು ರೈತ ಮುಖಂಡ ಸಿದ್ದಣ್ಣ ತೇಜಿ ಆರೋಪಿಸಿದರು.
ಕಬ್ಬು ಬೆಳೆಗಾರರು ಹೆಚ್ಚು ಇಳುವರಿ ನೀಡುವ ಕಬ್ಬಿನ ತಳಿ ಬೆಳೆಯಬೇಕು. ತಂತ್ರಜ್ಞಾನ ಬಳಸಬೇಕು. ಇಲಾಖೆಯಿಂದ ತರಬೇತಿ ಯಂತ್ರಗಳು ನೆರವು ನೀಡಲಾಗುತ್ತಿದೆಮಂಜುನಾಥ ಅಂತರವಳ್ಳಿ ಜಂಟಿ ನಿರ್ದೇಶಕ ಕೃಷಿ ಇಲಾಖೆ
ಧಾರವಾಡ ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆ ನಿರ್ಮಾಣ ಸಂಬಂಧ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಇಲಾಖೆಗೆ ಅವಕಾಶವಿಲ್ಲ. ಕಾರ್ಖಾನೆ ಸ್ಥಾಪನೆಗೆ ಯಾರೂ ಅರ್ಜಿ ಸಲ್ಲಿಸಿಲ್ಲಶಿವಪುತ್ರಪ್ಪ ಜಂಟಿ ನಿರ್ದೇಶಕ ಜಿಲ್ಲಾ ಕೈಗಾರಿಕಾ ಕೇಂದ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.