ಅದಿತಿ ಕ್ಷಾತ್ರತೇಜ
ಹುಬ್ಬಳ್ಳಿ: ಕ್ರೀಡೆ, ಸಮರಕಲೆಯಾಗಿರುವ ಟೇಕ್ವಾಂಡೊ ಸ್ಪರ್ಧೆಯಲ್ಲಿ ಧಾರವಾಡದ ಅದಿತಿ ಪರಪ್ಪ ಕ್ಷಾತ್ರತೇಜ ಭರವಸೆ ಮೂಡಿಸಿದ್ದಾರೆ. ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಹಲವು ಪದಕಗಳನ್ನು ಗಳಿಸಿದ್ದಾರೆ.
ಟೇಕ್ವಾಂಡೊ ತರಬೇತುದಾರರಾದ ಅಂಜಲಿ ಮತ್ತು ಪರಪ್ಪ ದಂಪತಿಯ ಪುತ್ರಿ ಅದಿತಿ ಧಾರವಾಡದ ಕೆಸಿಡಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಎ ವಿದ್ಯಾರ್ಥಿನಿ. ಅವರ ಪೋಷಕರು ಧಾರವಾಡ ಜಿಲ್ಲೆ ಅಳ್ನಾವರ ತಾಲ್ಲೂಕಿನ ಹೊನ್ನಾಪುರದವರು.
ಅದಿತಿ ಕ್ಷಾತ್ರತೇಜ
ಅದಿತಿ ಅವರು 2024ರ ಜನವರಿಯಲ್ಲಿ ರಾಜಸ್ತಾನದ ಎಸ್‌ಜೆಜೆಟಿ ವಿಶ್ವವಿದ್ಯಾಲಯದಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕ್ರೀಡಾಕೂಟದ ಟೇಕ್ವಾಂಡೊ ಸ್ಪರ್ಧೆಯ 53 ಕೆ.ಜಿ ಮತ್ತು ವೈಯಕ್ತಿಕ ವಿಭಾಗ, ನವೆಂಬರ್‌ನಲ್ಲಿ ಅಮೃತಸರದ ಗುರುನಾನಕ್‌ದೇವ್ ವಿಶ್ವವಿದ್ಯಾಲಯದಲ್ಲಿ ನಡೆದ ಟೇಕ್ವಾಂಡೊ ಚಾಪಿಯನ್‌ಷಿಪ್ ಸೇರಿ ಒಟ್ಟು ಮೂರು ಕಂಚಿನ ಪದಕ ಗೆದ್ದಿದ್ದಾರೆ. ಅದೇ ವರ್ಷ ನವೆಂಬರ್‌ನಲ್ಲಿ ಧಾರವಾಡದಲ್ಲಿ ನಡೆದ ಖೇಲೊ ಇಂಡಿಯಾ ಟೇಕ್ವಾಂಡೊ ಟೂರ್ನಿಯಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ.
2022ರಲ್ಲಿ ಫ್ರಾನ್ಸ್‌ನಲ್ಲಿ ನಡೆದ 19ನೇ ವಿಶ್ವ ಶಾಲಾ ಜಿಮ್ನಾಸೈಡ್ ಕ್ರೀಡಾಕೂಟದ ಟೇಕ್ವಾಂಡೊ ಸ್ಪರ್ಧೆ, ವಿಯೆಟ್ನಾಂನಲ್ಲಿ ನಡೆದ ಏಷ್ಯನ್ ಕೆಡೆಟ್ ಆ್ಯಂಡ್ ಜ್ಯೂನಿಯರ್ ಟೇಕ್ವಾಂಡೊ ಚಾಂಪಿಯನ್‌ಷಿಪ್‌ನಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಈಜು, ಕರಾಟೆ, ರೋಪ್ ಸ್ಕಿಪ್ಪಿಂಗ್‌ನಲ್ಲೂ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಟ್ಟದ ಟೂರ್ನಿಗಳಲ್ಲಿ ಮಿಂಚಿದ್ದಾರೆ. ಪ್ರಸಕ್ತ ವರ್ಷ ಮಾರ್ಚ್‌ನಲ್ಲಿ ರಾಜ್ಯ ಸರ್ಕಾರದ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
‘ನಾಲ್ಕು ವರ್ಷದವಳಿದ್ದಾಗ ಟೇಕ್ವಾಂಡೊ ಸ್ಪರ್ಧೆಯಲ್ಲಿ ಭಾಗವಹಿಸಲು ಆರಂಭಿಸಿದೆ. ತರಬೇತುದಾರರಾದ ತಂದೆ, ತಾಯಿ ಅವರಿಂದ ತರಬೇತಿ, ಮಾರ್ಗದರ್ಶನ ಪಡೆದೆ. ಪ್ರತಿ ದಿನ 4 ಗಂಟೆ ಮತ್ತು ಮತ್ತು ಸ್ಪರ್ಧೆ ಇದ್ದಾಗ 7 ಗಂಟೆ ಅಭ್ಯಾಸ ಮಾಡುತ್ತೇನೆ. ಟ್ರಯಥ್ಲಾನ್ ಸ್ಪರ್ಧೆ, ವಿಶ್ವ ವಿಶ್ವವಿದ್ಯಾಲಯಗಳ ಕ್ರೀಡಾಕೂಟದಲ್ಲಯೂ ಸಾಧನೆ ಮಾಡಬೇಕು ಎಂಬ ಗುರಿ ಇದೆ. ಅದಕ್ಕೆ ಸಿದ್ಧತೆ ನಡೆಸಿದ್ದೇನೆ’ ಎಂದು ಅದಿತಿ ‘ಪ್ರಜಾವಾಣಿ’ಗೆ ತಿಳಿಸಿದರು.
ಅದಿತಿ ಕ್ಷಾತ್ರತೇಜ
ಅದಿತಿಗೆ ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ಇದೆ. ಓದಿನಲ್ಲಿಯೂ ಮುಂದೆ ಇದ್ದಾಳೆ. ಕಠಿಣ ಪರಿಶ್ರಮದ ಮೂಲಕ ಸಾಧನೆ ಮಾಡಿದ್ದಾಳೆ. ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಬೇಕು ಎಂಬುದು ನಮ್ಮ ಆಸೆಯೂ ಆಗಿದೆಪರಪ್ಪ ಅದಿತಿ ತಂದೆ ತರಬೇತುದಾರ
ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದು ನನ್ನ ಕನಸು. ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಉತ್ತಮ ರ‍್ಯಾಂಕಿಂಗ್ ಜೊತೆಗೆ ಪರಿಶ್ರಮ ಅಗತ್ಯ. ಪದವಿ ಮುಗಿದ ಬಳಿಕ ಸ್ಪೇನ್‌ನಲ್ಲಿ ತರಬೇತಿ ಪಡೆಯುವ ಗುರಿಯಿದೆ.ಅದಿತಿ ಅದಿತಿ ಪರಪ್ಪ ಕ್ಷಾತ್ರತೇಜ ಟೇಕ್ವಾಂಡೊ ಪಟು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.