ADVERTISEMENT

ಧಾರವಾಡನ ಜಿಲ್ಲೆಯಲ್ಲಿ ಏರುತ್ತಿರುವ ತಾಪಮಾನ: ಎಳನೀರು, ಕೊಡೆಗಳಿಗೆ ಮೊರೆ

ಗರಿಷ್ಠ 39 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲು

ಎಲ್‌.ಮಂಜುನಾಥ
Published 12 ಮೇ 2025, 5:28 IST
Last Updated 12 ಮೇ 2025, 5:28 IST
ಬಿಸಿಲಿನ ತಾಪದಿಂದ ದೇಹವನ್ನು ತಣಿಸಿಕೊಳ್ಳಲು ಹುಬ್ಬಳ್ಳಿಯ ದುರ್ಗದ ಬೈಲ್‌ನಲ್ಲಿದ್ದ ತಳ್ಳುಗಾಡಿಯಲ್ಲಿ ಜನರು ನಿಂಬೆಹಣ್ಣಿನ ಶರಬತ್‌ನ್ನು ಕುಡಿದರು
ಪ್ರಜಾವಾಣಿ ಚಿತ್ರ: ಗುರುಹಬೀಬ 
ಬಿಸಿಲಿನ ತಾಪದಿಂದ ದೇಹವನ್ನು ತಣಿಸಿಕೊಳ್ಳಲು ಹುಬ್ಬಳ್ಳಿಯ ದುರ್ಗದ ಬೈಲ್‌ನಲ್ಲಿದ್ದ ತಳ್ಳುಗಾಡಿಯಲ್ಲಿ ಜನರು ನಿಂಬೆಹಣ್ಣಿನ ಶರಬತ್‌ನ್ನು ಕುಡಿದರು ಪ್ರಜಾವಾಣಿ ಚಿತ್ರ: ಗುರುಹಬೀಬ    

ಹುಬ್ಬಳ್ಳಿ: ಧಾರವಾಡ– ಹುಬ್ಬಳ್ಳಿ ಅವಳಿನಗರ ಸೇರಿ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಕ್ರಮೇಣ ಹೆಚ್ಚಾಗುತ್ತಿದೆ. ಕಳೆದ ಕೆಲ ದಿನಗಳಿಂದ ಅವಳಿ ನಗರಗಳಲ್ಲಿ 34 ರಿಂದ 39 ಡಿಗ್ರಿ ಸೆಲ್ಸಿಯಸ್‌ವರೆಗೆ ತಲುಪಿತ್ತು. ಆದರೆ, ಸಂಜೆ ಆಗುತ್ತಿದ್ದಂತೆ ಮೋಡ ಕವಿದು ಇಡೀ ವಾತಾವರಣವು ತಂಪಿನ ಅನುಭೂತಿ ನೀಡುತ್ತಿದೆ.

ಇದೀಗ ಮತ್ತೆ ಎಂದಿನಂತೆ ಬೇಸಿಗೆಯ ಬಿಸಿಲಿನ ಪ್ರಖರ ಹೆಚ್ಚುತ್ತಲೇ ಇದೆ. ಮೇ ಅಂತ್ಯದವರೆಗೆ ಬಿಸಿಲಿನ ತಾಪಮಾನ ಇರುತ್ತದೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಅಂತಹ ತೀವ್ರತೆಯ ತಾಪಮಾನ ಇರುವುದಿಲ್ಲ. ಆದರೂ ಆರೋಗ್ಯದ ದೃಷ್ಟಿಯಿಂದ ಎಲ್ಲರೂ ತುಸು ಮುಂಜಾಗ್ರತೆ ವಹಿಸಬೇಕು ಎನ್ನುತ್ತಾರೆ ಹವಾಮಾನ ತಜ್ಞರು. 

ಬೇಸಿಗೆ ಬಿಸಿಲಿನ ತಾಪ ತಾಗುವ ಮುನ್ನವೇ ಅವಳಿ ನಗರಗಳಲ್ಲಿ ಈಗಾಗಲೇ ಮಹಿಳೆಯರು, ವಿದ್ಯಾರ್ಥಿನಿಯರು ಕೊಡೆಗಳನ್ನಿಡಿದು, ಸ್ಕಾರ್ಪ್‌ನ್ನು ಕಟ್ಟಿಕೊಂಡು ಓಡಾಡುತ್ತಿದ್ದಾರೆ. 

ADVERTISEMENT

‘ಜಿಲ್ಲೆಯ ಅವಳಿ ನಗರದಲ್ಲಿ ಮಾರ್ಚ್‌ ಅಂತ್ಯದವರೆಗೆ 34 ಡಿಗ್ರಿ ಸೆಲ್ಸಿಯಸ್‌ನಿಂದ 39.3 ಡಿಗ್ರಿ ಸೆಲ್ಸಿಯಸ್‌  ತಾಪಮಾನ ಇತ್ತು. ಈ ಸಲ 39.3 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಪ್ರಮಾಣ ಮುಟ್ಟಿದೆ. ಇದು ಅವಳಿನಗರದಲ್ಲಿ ಈವರೆಗಿನ ಗರಿಷ್ಠ ದಾಖಲೆ ತಾಪಮಾನವಾಗಿದೆ‘ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ಹವಾಮಾನ ತಜ್ಞ ರವಿ ಪಾಟೀಲ ತಿಳಿಸಿದರು.

‘ಕಳೆದ ವರ್ಷ ಮಳೆ ಕೊರತೆಯಿಂದ ಬಿಸಿಲಿನ ತಾಪಮಾನ ತುಸು ಹೆಚ್ಚಾಗಿಯೇ ಇತ್ತು. ಆದರೆ, ಈ ಬಾರಿ ಬೇಸಿಗೆಯ ಆರಂಭದಲ್ಲಿಯೇ ಜಿಲ್ಲೆಯ ಕೆಲವೆಡೆ ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ.  ಬಿಸಿಲು ಹಾಗೂ ಮೋಡಕವಿದ ವಾತಾವರಣ ಕಣ್ಣಾಮುಚ್ಚಾಲೆ ಆಟದಂತಿದೆ. ಕಳೆದ ವರ್ಷದಂತೆ ತೀವ್ರತೆಯ ಬಿಸಿಲಿನ ತಾಪಮಾನ ಈ ಬಾರಿ ಇಲ್ಲ’ ಎಂದರು.

ಈಗಲೂ ಜಿಲ್ಲೆಯ ಕೆಲವೆಡೆ ತಂಪಿನ ವಾತಾವರಣ, ಇನ್ನೂ ಕೆಲವೆಡೆ ಒಣಹವೆಯೂ ಇದೆ. ಇದು ಕೆಲ ದಿನಗಳ ವರೆಗೆ ಮುಂದುವರೆಯಲಿದೆ. ನಂತರ ನಿಧಾನವಾಗಿ ಬಿಸಿಲಿನ ತಾಪಮಾನ ಹೆಚ್ಚಳವಾಗುವ ಸಾಧ್ಯತೆಯೂ ಇದೆ ಎನ್ನುತ್ತಾರೆ.

ಹಣ್ಣು, ತಂಪು ಪಾನಿಯಕ್ಕೆ ಬೇಡಿಕೆ:

ಬಿಸಿಲಿನ ಝಳಕ್ಕೆ ಬಾಯಾರಿಕೆಯೂ ಹೆಚ್ಚಾಗಿದ್ದು, ದಾಹ ತಣಿಸಿಕೊಳ್ಳಲು ಜನರು ಎಳನೀರು, ಕಲ್ಲಂಗಡಿ, ಕರಬೂಜ, ಮೊಸಂಬಿ ರಸ, ಮಜ್ಜಿಗೆ, ಲಿಂಬು ಶರಬತ್, ಕಬ್ಬಿನ ಹಾಲು, ಐಸ್‌ಕ್ರೀಂ ಸೇರಿದಂತೆ ತಂಪಾದ ಪಾನೀಯಗಳ ಮೊರೆ ಹೋಗಿದ್ದಾರೆ. ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಹಣ್ಣುಗಳ ಖರೀದಿಯೂ ತುಸು ಜೋರಾಗಿಯೇ ನಡೆಯುತ್ತಿದೆ. 

‘ಕಳೆದ ಕೆಲ ದಿನಗಳಿಂದ ಎಳನೀರು ಕುಡಿಯುವವರು ಹೆಚ್ಚಾಗಿದ್ದಾರೆ. ಅದರಲ್ಲೂ ದ್ವಿಚಕ್ರ ವಾಹನ ಸವಾರರ ಪ್ರಮಾಣ ಹೆಚ್ಚಾಗಿದೆ’ ಎಂದು ಜನತಾಬಜಾರ್‌ ಬಳಿ ಎಳನೀರು ವ್ಯಾಪಾರಿ ಬಸವರಾಜಪ್ಪ ತಿಳಿಸಿದರು.

‘ನೀರು ಮೇವಿನ ಸಮಸ್ಯೆ ಸದ್ಯಕ್ಕಿಲ್ಲ’

‘ಬೇಸಿಗೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರು ಹಾಗೂ ಜಾನುವಾರಿಗೆ ಮೇವಿನ ಸಮಸ್ಯೆ ಆಗದಂತೆ ಈಗಾಗಲೇ ಮುಂಜಾಗ್ರತೆ ಕ್ರಮ ವಹಿಸಲಾಗಿದೆ. ಜಿಲ್ಲೆಯಲ್ಲಿ 90 ಸಮಸ್ಯಾತ್ಮಕ ಗ್ರಾಮಗಳ ಪಟ್ಟಿಯನ್ನೂ ಮಾಡಲಾಗಿದೆ. 186 ಖಾಸಗಿ ಕೊಳವೆಬಾವಿಗಳನ್ನು ಗುರುತಿಸಲಾಗಿದೆ. ನೀರಿನ ಸಮಸ್ಯೆಯಾದಲ್ಲಿ ನೀರನ್ನು ಬಳಸಿಕೊಳ್ಳಬಹುದು ಎಂದು ಅಧಿಕಾರಿಗಳ ಮೂಲಕ ಸಂಬಂಧಿಸಿದ ರೈತರಿಗೆ ಮಾಹಿತಿ ನೀಡಲಾಗಿದೆ. ಜಿಲ್ಲೆಯಲ್ಲಿ ಸದ್ಯ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಸಮಸ್ಯೆ ಇಲ್ಲ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭುವನೇಶ್‌ ದೇವಿದಾಸ್‌ ಪಾಟೀಲ ತಿಳಿಸಿದರು.

ಬಿಸಿಲಿನ ಪ್ರಮಾಣ ಹೆಚ್ಚಾದರೆ ಮಾವು ದ್ರಾಕ್ಷಿ ಬೆಳೆಗೆ ಹಾನಿಯಾಗಲ್ಲ. ಆದರೆ ತುಸು ಜೋರಾಗಿ ಗಾಳಿ ಬೀಸಿ ಮಳೆಯಾದರೆ ಮಾವು ದ್ರಾಕ್ಷಿ ಬೆಳೆಗೆ ಹಾನಿಯಾಗುವ ಸಾಧ್ಯತೆ ಇದೆ.
- ರವಿ ಪಾಟೀಲ, ಕೃಷಿ ಹವಾಮಾನ ತಜ್ಞ, ಕೃಷಿ ವಿಶ್ವವಿದ್ಯಾಲಯ ಧಾರವಾಡ
ಬೇಸಿಗೆ ವೇಳೆಯಲ್ಲಿ ಜಾನುವಾರಗಳಿಗೆ ಮೇವಿನ ಸಮಸ್ಯೆಯಾಗದಂತೆ ನಿಭಾಹಿಸಲು ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿನ ಜಾನುವಾರುಗಳಿಗೆ 33 ವಾರ ಆಗುವಷ್ಟು ಮೇವು ದಾಸ್ತಾನು ಇದೆ.
- ಡಾ.ರವಿ ಸಾಲಿಗೌಡ್ರ ಪಶುವೈದ್ಯಕೀಯ ಮತ್ತು ಪಶುಪಾಲನಾ ಉಪನಿರ್ದೇಶಕ ಧಾರವಾಡ. 
ಹುಬ್ಬಳ್ಳಿ ತಾಲ್ಲೂಕಿನ ನೂಲ್ವಿ ಗ್ರಾಮ. ಧಾರವಾಡ ತಾಲ್ಲೂಕಿನ ಬೆಣಚಿ ಗ್ರಾಮದಲ್ಲಿ ನೀರಿನ ಸಮಸ್ಯೆಯಿದ್ದು ಬೋರವೆಲ್‌ ನೀರು ಪೂರೈಸಲಾಗುತ್ತಿದೆ. ಅಗತ್ಯವಿರುವೆಡೆ ನೀರು ಪೂರೈಸಲಾಗುವುದು.
- ಜಗದೀಶ ಪಾಟೀಲ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆಯ ಕಾರ್ಯನಿರ್ವಾಹಕ ಎಂಜಿನಿಯರ್‌ 
ಬಿಸಿಲಿನ ತಾಪದಿಂದ ದೇಹವನ್ನು ತಣಿಸಿಕೊಳ್ಳಲು ಹುಬ್ಬಳ್ಳಿಯ ಜನತಾಬಜಾರ್‌ನಲ್ಲಿ ವ್ಯಕ್ತಿಯೊಬ್ಬರು ಕಲ್ಲಂಗಡಿ ಹಣ್ಣನ್ನು ಸೇವಿಸಿದರು ಪ್ರಜಾವಾಣಿ ಚಿತ್ರ: ಗುರುಹಬೀಬ 
ಬಿಸಿಲಿನ ತಾಪದಿಂದ ದೇಹವನ್ನು ತಣಿಸಿಕೊಳ್ಳಲು ಹುಬ್ಬಳ್ಳಿಯ ಜನತಾಬಜಾರ್‌ನಲ್ಲಿ ವ್ಯಕ್ತಿಯೊಬ್ಬರು ಕಲ್ಲಂಗಡಿ ಹಣ್ಣನ್ನು ಸೇವಿಸಿದರು ಪ್ರಜಾವಾಣಿ ಚಿತ್ರ: ಗುರುಹಬೀಬ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.