
ಧಾರವಾಡ: ‘ರೈತರು ಕೃಷಿ ತೊರೆದು ಊರುಬಿಟ್ಟು ಹೋಗದಂತೆ ಮಾಡಬೇಕು. ಕೃಷಿ ರಕ್ಷಿಸುವ ಕಾರ್ಯಕ್ರಮಗಳನ್ನು ಸರ್ಕಾರಗಳು ರೂಪಿಸಬೇಕು’ ಎಂದು ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಕೃಷಿ ಮತ್ತು ಪರಿಸರ ಮಂಟಪದ ವತಿಯಿಂದ ಪಾಟೀಲ ಪುಟ್ಟಪ್ಪ ಸಭಾಂಗಣದಲ್ಲಿ ಶುಕ್ರವಾರ ನಡೆದ ‘ಭಾರತದ ಕೃಷಿ ಬಿಕ್ಕಟ್ಟುಗಳು’ ಉಪನ್ಯಾಸ ಮಾಲಿಕೆ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಕೃಷಿ ಕ್ಷೇತ್ರವು ಭಾರತದ ಜೀವನಾಡಿ. ಹೊಲಗದ್ದೆಗಳಲ್ಲಿನ ಮಣ್ಣಿನಲ್ಲಿ ದೇಶದ ಭವಿಷ್ಯ ಇದೆ. ಮಣ್ಣನ್ನು ರಕ್ಷಣೆ ಮಾಡಬೇಕು. ರೈತರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಪ್ರೇರಣೆ ನೀಡಬೇಕು’ ಎಂದು ಹೇಳಿದರು.
‘ರೈತರು ಹೊಲಗದ್ದೆಗಳಲ್ಲಿ ಕೆಲಸ ಮಾಡುತ್ತಾರೆ. ದೇಶದ ಸಂಸ್ಕೃತಿ, ಪರಂಪರೆ ಉಳಿಸಿದ್ದಾರೆ. ಅವರಿಗೆ ಹವಾಮಾನ ಮಾಹಿತಿ ನೀಡುವುದು, ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಜವಾಬ್ದಾರಿ. ಸ್ವಾತಂತ್ರ್ಯ ಸಂದಾಗ ಕೃಷಿ ಉತ್ಪಾದನೆ ಕಡಿಮೆ ಇತ್ತು. ಈಗ ಹೆಚ್ಚಾಗಿದೆ, ರಫ್ತು ಮಾಡುವ ಹಂತಕ್ಕೆ ತಲುಪಿಸಿದ್ದೇವೆ’ ಎಂದರು.
‘ಬೀಳು ಬಿದ್ದಿರುವ ಜಮೀನುಗಳ ಮಾಲೀಕರನ್ನು ಪತ್ತೆ ಹಚ್ಚಬೇಕು. ಆ ಜಮೀನುಗಳ ಉಳುಮೆ ನಿಟ್ಟಿನಲ್ಲಿ ಕ್ರಮ ವಹಿಸುವ ಅಗತ್ಯ ಇದೆ. ಕೃಷಿ ಕಡೆಗೆ ಯುವಜನರಿಗೆ ಒಲವು ಬೆಳೆಸಬೇಕು. ಕೃಷಿಯಲ್ಲಿ ತೊಡಗಿಸಬೇಕು’ ಎಂದರು.
ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಧ್ಯಕ್ಷ ಬಸವಪ್ರಭು ಹೊರಕೇರಿ, ಪ್ರಧಾನ ಕಾರ್ಯದರ್ಶಿ ಶಂಕರಹಲಗತ್ತಿ, ಗುರು ಹಿರೇಮಠ ಇದ್ದರು.
ಕೃಷಿ ಕ್ಷೇತ್ರದಲ್ಲಿನ ಬಿಕ್ಕಟ್ಟುಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಬೇಕು. ಕಾರಣಗಳನ್ನು ತಿಳಿಯಬೇಕು. ಪರಿಹಾರಗಳನ್ನು ರೂಪಿಸಬೇಕು. ರೈತರಿಗೆ ಕೃಷಿಯಿಂದ ಲಾಭ ಬರುವಂತೆ ಮಾಡಬೇಕುರಾಜೇಂದ್ರ ಪೊದ್ದಾರ್ ನಿವೃತ್ತ ನಿರ್ದೇಶಕ ನೆಲ ಮತ್ತು ಜಲ ನಿರ್ವಹಣೆ ಸಂಸ್ಥೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.