
ಧಾರವಾಡ: ‘ಪ್ರಜಾಪ್ರಭುತ್ವವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಅರ್ಹರೆಲ್ಲ ಮತ ಚಲಾಯಿಸಬೇಕು. ಆಮಿಷಗಳಿಗೆ ಒಳಗಾಗದೆ, ನಿರ್ಭೀತಿಯಿಂದ ಮತದಾನ ಮಾಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭುವನೇಶ ಪಾಟೀಲ ಹೇಳಿದರು.
ನಗರದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ಭಾನುವಾರ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಮಾತನಾಡಿದರು.
‘ಸಂವಿಧಾನವು ಅರ್ಹ ಭಾರತೀಯರೆಲ್ಲರಿಗೂ ಮತದಾನದ ಹಕ್ಕು ನೀಡಿದೆ. ಯುವಜನರು ಮತದಾನದಿಂದ ದೂರ ಉಳಿಯಬಾರದು. 18 ವರ್ಷ ತುಂಬಿದವರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಬೇಕು ಹಾಗೂ ತಪ್ಪದೆ ಮತದಾನದ ಹಕ್ಕು ಚಲಾಯಿಸಬೇಕು. ಪ್ರತಿಯೊಂದು ಮತವೂ ಅಮೂಲ್ಯವಾಗಿದ್ದು, ಸಮರ್ಥ ನಾಯಕನನ್ನು ಆಯ್ಕೆ ಮಾಡುವ ಶಕ್ತಿ ಮತಕ್ಕೆ ಇದೆ’ ಎಂದು ಹೇಳಿದರು.
‘ಭಾರತೀಯ ಚುನಾವಣಾ ಆಯೋಗವು 1950 ಜನವರಿ 25ರಂದು ಸ್ಥಾಪನೆಯಾಯಿತು. ಆ ದಿನದ ನೆನಪಿಗಾಗಿ 2011ರಿಂದ ಜ. 25ರಂದು ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸಲಾಗುತ್ತಿದೆ. ಮತದಾನದ ಹಕ್ಕು ದೊರೆತಿರುವುದು ಹೆಮ್ಮೆ ಮತ್ತು ಗೌರವದ ಸಂಕೇತವಾಗಿದೆ’ ಎಂದರು.
‘ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುತ್ತೇವೆ ಮತ್ತು ಯಾವುದೇ ಪ್ರಭಾವಕ್ಕೆ ಒಳಗಾಗದೆ ಮತ ಚಲಾಯಿಸುತ್ತೇವೆ’ ಎಂದು ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು. ಮತದಾನ ದಿನದ ಅಂಗವಾಗಿ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಉಪವಿಭಾಗಾಧಿಕಾರಿ ಶಾಲಂ ಹುಸೇನ್, ತಹಶೀಲ್ದಾರ್ ಡಿ.ಎಚ್. ಹೂಗಾರ, ಎಸಿಪಿ ಪ್ರಶಾಂತ ಸಿದ್ದನಗೌಡರ ಇದ್ದರು.
ಮತದಾನದ ಹಕ್ಕು ಸಂವಿಧಾನ ನೀಡಿರುವ ಶ್ರೇಷ್ಠ ಅಧಿಕಾರವಾಗಿದೆ. ಮತ ಮಾರಾಟದ ವಸ್ತುವಲ್ಲ ದೇಶದ ಭವಿಷ್ಯ ರೂಪಿಸುವ ಅಸ್ತ್ರವಾಗಿದೆಗುಂಜನ್ ಆರ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
‘ಮತದಾನ ಎಲ್ಲರ ಜವಾಬ್ದಾರಿ’ ‘ಪ್ರಜಾಪ್ರಭುತ್ವದ ಯಶಸ್ಸು ಮತದಾರರ ಜಾಗೃತಿಯನ್ನು ಅವಲಂಬಿಸಿದೆ. ಮತದಾನ ಹಕ್ಕಿನ ಮಹತ್ವನ್ನು ಜನರಿಗೆ ತಿಳಿಸುವುದು ಈ ದಿನದ ಉದ್ದೇಶವಾಗಿದೆ’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಪರುಶುರಾಮ ದೊಡ್ಡಮನಿ ತಿಳಿಸಿದರು. ‘ಬಿ.ಆರ್. ಅಂಬೇಡ್ಕರ್ ಅವರು ಬಹಳ ಸ್ಪಷ್ಟವಾದ ನಿಲುವನ್ನು ಹೊಂದಿದ್ದರು. ಅವರ ಪ್ರಕಾರ ಮತದಾನ ಎನ್ನುವುದು ಹಕ್ಕು ಮಾತ್ರವಲ್ಲ ಅದೊಂದು ಜವಾಬ್ದಾರಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.