
ಹುಬ್ಬಳ್ಳಿ: ಹು–ಧಾ ಮಹಾನಗರ ಪಾಲಿಕೆ ವ್ಯಾಪ್ತಿಯ ನೀರಿನ ಕಂದಾಯ ಬಾಕಿಗೆ ಸಂಬಂಧಿಸಿದಂತೆ ಒಂದು ಬಾರಿ ಪರಿಹಾರ ಯೋಜನೆ (ಒಟಿಎಸ್) ಜಾರಿ ಮಾಡಬೇಕು ಎಂದು ಶಾಸಕ ಪ್ರಸಾದ್ ಅಬ್ಬಯ್ಯ ಅವರು ವಿಧಾನಸಭೆಯಲ್ಲಿ ಕೇಳಿದ ಗಮನ ಸೆಳೆಯುವ ಪ್ರಶ್ನೆಗೆ, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರು ಲಿಖಿತ ಉತ್ತರ ನೀಡಿ, ಈ ಬಗ್ಗೆ ಕ್ರಮ ವಹಿಸುವುದಾಗಿ ಹೇಳಿದ್ದಾರೆ.
‘ಪಾಲಿಕೆ ವ್ಯಾಪ್ತಿಯಲ್ಲಿ ₹324.87 ಕೋಟಿ ನೀರಿನ ಕರ ಬಾಕಿ ಇದೆ. ಇದರಲ್ಲಿ ₹195.97 ಕೋಟಿ ಅಸಲು ಹಾಗೂ ₹128.90 ಕೋಟಿ ಬಡ್ಡಿ ಮೊತ್ತ ಇದೆ. ಅಸಲು ಪಾವತಿಸಿದ ಗ್ರಾಹಕರಿಗೆ ಬಡ್ಡಿ ಮನ್ನಾ ಮಾಡಲು ಒಟಿಎಸ್ ಯೋಜನೆ ಜಾರಿ ಮಾಡಬೇಕು‘ ಎಂದು ಕೇಳಿದ್ದರು.
‘ಬೆಂಗಳೂರಿನ ಗ್ರಾಹಕರಿಗೆ ಕೊಟ್ಟಂತೆ ಹು–ಧಾ ಮಹಾನಗರ ಪಾಲಿಕೆಯ ಗ್ರಾಹಕರಿಗೂ ಅವಕಾಶ ಮಾಡಿಕೊಡಬೇಕು. ಬಡ್ಡಿ ಮೊತ್ತವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ಇದರಿಂದ ಬಹಳ ವರ್ಷಗಳಿಂದ ಬಾಕಿ ಉಳಿದ ನೀರಿನ ಕರ ಪಾವತಿಗೆ ಗ್ರಾಹಕರಿಗೆ ಅನುಕೂಲವಾಗುತ್ತದೆ‘ ಎಂದು ಕೇಳಿದ್ದರು. ಸಚಿವ ಭೈರತಿ ಸುರೇಶ್ ಅವರನ್ನು ಖುದ್ದಾಗಿ ಭೇಟಿ ಮಾಡಿ ಈ ಬಗ್ಗೆ ಮನವಿ ಕೂಡ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.