
ಗದಗ: ಬೆಳಗಾವಿ ಜಿಲ್ಲೆ ಭೂತರಾಮನಹಟ್ಟಿಯ ಕಿರು ಮೃಗಾಲಯದಲ್ಲಿ 30ಕ್ಕೂ ಹೆಚ್ಚು ಕೃಷ್ಣಮೃಗಗಳ ಸಾವಿಗೆ ಗಳಲೆ ರೋಗ (ಹೆಮರೈಸಿಕ್ ಸೆಪ್ಟೀಸಿಮಿಯಾ– ಎಚ್.ಎಸ್.) ಕಾರಣವೆಂದು ಪ್ರಯೋಗಾಲಯದ ವರದಿ ಖಚಿತಪಡಿಸಿದ ಹಿನ್ನೆಲೆಯಲ್ಲಿ ಇಲ್ಲಿನ ಬಿಂಕದಕಟ್ಟಿ ಮೃಗಾಲಯದಲ್ಲಿ ಸೋಂಕು ನಿವಾರಣೆಗೆ ಕ್ರಮ ಕೈಗೊಳ್ಳಲಾಗಿದೆ.
ಸ್ಯಾನಿಟೈಸೇಷನ್, ಪ್ರತಿ ಆವರಣಕ್ಕೂ ಪ್ರಾಣಿಪಾಲಕರ ನಿಯೋಜನೆ, ಸಪ್ಲಿಮೆಂಟ್ಸ್ ಪೂರೈಕೆ, ಆರೋಗ್ಯ ಸಲಹಾ ಸಮಿತಿ ಸಭೆ ಆಯೋಜನೆ ಹಾಗೂ ಲಸಿಕೆ ಹಾಕಿಸುವಂತಹ ಪಂಚಕ್ರಮಗಳನ್ನು ಅನುಸರಿಸಿ ಪ್ರಾಣಿಗಳ ರಕ್ಷಣೆಗೆ ಯೋಜನೆ ರೂಪಿಸಲಾಗಿದೆ.
ಪ್ರವಾಸಿಗರು ಮೃಗಾಲಯ ಪ್ರವೇಶಿಸುವ ದ್ವಾರದಲ್ಲಿ ಸೋಂಕು ನಿವಾರಕ ದ್ರಾವಣ ಇರುವ ‘ಫೂಟ್‌ಡಿಪ್ಸ್’ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರವಾಸಿಗರು ಸೋಂಕು ನಿವಾರಕ ದ್ರಾವಣ ತುಳಿದುಕೊಂಡೇ ಮೃಗಾಲಯದೊಳಗೆ ಪ್ರವೇಶಿಸಬೇಕು. ನಿರ್ಗಮನ ದ್ವಾರದಲ್ಲೂ ಇದೇ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಮೃಗಾಲಯದ ಒಳಭಾಗದಲ್ಲಿರುವ ಮಾರ್ಗವನ್ನು ಸಂಪೂರ್ಣವಾಗಿ ಸ್ಯಾನಿಟೈಸೇಷನ್ ಮಾಡಿಸಲಾಗಿದೆ.
ಪ್ರತಿ ಆವರಣಕ್ಕೂ ಪ್ರಾಣಿಪಾಲಕರ ನಿಯೋಜನೆ: ಕೃಷ್ಣಮೃಗಗಳ ಸಾವಿಗೆ ಎಚ್.ಎಸ್. ಬ್ಯಾಕ್ಟೀರಿಯಾ ಕಾರಣ ಎಂಬುದು ದೃಢಪಟ್ಟಿದ್ದು, ಮೃಗಾಲಯದಲ್ಲಿರುವ ಎಲ್ಲ ಸಸ್ಯಾಹಾರಿ ಮತ್ತು ಮಾಂಸಾಹಾರಿ ಪ್ರಾಣಿಗಳಿರುವ ಆವರಣವನ್ನು ಸ್ಯಾನಿಟೈಸ್ ಮಾಡಲಾಗಿದೆ. ಹೆಚ್ಚುವರಿ ಕ್ರಮವಾಗಿ ಎಲ್ಲ ಪ್ರಾಣಿಗಳ ಆವರಣಕ್ಕೆ ಒಬ್ಬೊಬ್ಬರಂತೆ ಪ್ರಾಣಿಪಾಲಕರನ್ನು ನಿಯೋಜಿಸಲಾಗಿದೆ.
ಮೃಗಾಲಯದಲ್ಲಿರುವ ಚುಕ್ಕೆ ಜಿಂಕೆ, ಕಡವೆ, ಕೃಷ್ಣಮೃಗ ಮತ್ತು ನೀಲಗಾಯಿಗಳ ಆವರಣದ ಎದುರು ಸದಾ ಕಾಲ ಒಬ್ಬರು ಪ್ರಾಣಿಪಾಲಕ ಇರುತ್ತಾರೆ. ಪ್ರಾಣಿಗಳ ಚಲನವಲನ, ಅವುಗಳ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದರೆ ತಕ್ಷಣವೇ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಾರೆ.
ಪ್ರಾಣಿಪಾಲಕರು ಶೂ, ಕೋಟು ಸೇರಿದಂತೆ ಸುರಕ್ಷಾ ದಿರಿಸು ಧರಿಸಿ, ‘ಫೂಟ್‌ಡಿಪ್ಸ್’ ಮೂಲಕವೇ ಸಸ್ಯಾಹಾರಿ ಪ್ರಾಣಿಗಳ ಆವರಣ ಪ್ರವೇಶಿಸುವಂತೆ ಸೂಚನೆ ಕೊಡಲಾಗಿದೆ. ಪ್ರತಿಯೊಬ್ಬರಿಗೂ ಸ್ಯಾನಿಟೈಸರ್ ಕೊಡಲಾಗಿದ್ದು, ಪ್ರತಿ ಗಂಟೆಗೊಮ್ಮೆ ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳಬೇಕು. ಊಟಕ್ಕೆ ಹೋಗುವಾಗ ಹ್ಯಾಂಡ್‌ವಾಶ್‌ನಿಂದ ಕೈತೊಳೆದುಕೊಳ್ಳುವಂತೆ ಸೂಚಿಸಲಾಗಿದೆ.
‘ಹೊರಗಡೆಯಿಂದ ಪ್ರಾಣಿಗಳ ಆರೋಗ್ಯ ರಕ್ಷಣೆಗೆ ಸೋಂಕುನಿವಾರಣಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳಲಾಗಿದೆ. ಅದೇ ರೀತಿ, ಪ್ರಾಣಿಗಳು ನಿಶಕ್ತಿ ಹೊಂದದಂತೆ ಕುಡಿಯುವ ನೀರಿನಲ್ಲಿ ಎಲೆಕ್ಟ್ರಾಲ್ ಪೌಡರ್ ಸೇರಿಸಲಾಗುತ್ತಿದೆ. ಆಹಾರದಲ್ಲಿ ಇಮ್ಯುನೋ ಬೂಸ್ಟರ್ ಸಿರಪ್, ಮಿನರಲ್ ಮಿಕ್ಚರ್ ಪೌಡರ್ ಸೇರಿಸಿ ಕೊಡಲಾಗುತ್ತಿದೆ. ಇದರಿಂದ ಪ್ರಾಣಿಗಳು ವಾತಾವರಣ ವೈಪರೀತ್ಯದಿಂದ ಬಳಲುವುದನ್ನು ತಪ್ಪಿಸಬಹುದು’ ಎಂದು ಮೃಗಾಲಯದ ವೈದ್ಯೆ ಪವಿತ್ರಾ ತಿಳಿಸಿದ್ದಾರೆ.
ಬಿಂಕದಕಟ್ಟಿ ಮೃಗಾಲಯದಲ್ಲಿನ ಕೃಷ್ಣಮೃಗಗಳು
ಜಾನುವಾರುಗಳಿಗೆ ಲಸಿಕೆ ಹಾಕಿಸಲು ನಿರ್ಧಾರ
ಮೃಗಾಲಯದಲ್ಲಿನ ಪ್ರಾಣಿಗಳ ಆವರಣ ಕಾಯುವ ಕೆಲಸಕ್ಕೆ ನಿಯೋಜನೆಗೊಂಡಿರುವ ಪ್ರಾಣಿಪಾಲಕರ ಮನೆಯಲ್ಲಿ ದನ ಕರು ಆಡು ಕುರಿ ಇದ್ದರೆ ಅವರ ಮನೆಗೇ ತೆರಳಿ ಎಚ್.ಎಸ್. ನಿಯಂತ್ರಣಾ ಲಸಿಕೆ ಹಾಕಿಸುವ ಯೋಜನೆಯನ್ನು ಮೃಗಾಲಯದ ಸಿಬ್ಬಂದಿ ರೂಪಿಸಿದ್ದಾರೆ. ‘ದನ–ಕರು ಆಡು–ಕುರಿಗಳ ಸೋಂಕು ಪ್ರಾಣಿಪಾಲಕರ ಮೂಲಕ ಮೃಗಾಲಯಕ್ಕೆ ಬರಬಾರದೆಂಬ ಉದ್ದೇಶಕ್ಕೆ ಲಸಿಕೆ ಹಾಕಿಸಲು ಯೋಚಿಸಲಾಗಿದೆ. ಈ ಸಂಬಂಧ ಡಿಸಿಎಫ್ ಸಂತೋಷ್ ಕುಮಾರ್ ಅವರು ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆ ಉಪ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಲಸಿಕೆ ಲಭ್ಯವಾದ ಮೇಲೆ ಲಸಿಕಾ ಶಿಬಿರ ಆಯೋಜಿಸಲಾಗುವುದು’ ಎಂದು ಮೃಗಾಲಯದ ಆರ್‌ಎಫ್‌ಒ ಸ್ನೇಹಾ ಕೊಪ್ಪಳ ತಿಳಿಸಿದ್ದಾರೆ. ಸದ್ಯ ಪಶುವೈದ್ಯಕೀಯ ಇಲಾಖೆಯಿಂದ ಕಾಲುಬಾಯಿ ರೋಗಕ್ಕೆ ಲಸಿಕೆ ಹಾಕುವ ಪ್ರಕ್ರಿಯೆ ನಡೆದಿದೆ. ಅದು ಮುಗಿದ ಬಳಿಕ ಬಿಂಕದಕಟ್ಟಿ ಮೃಗಾಲಯದ ಸುತ್ತ ಇರುವ ಬಿಂಕದಕಟ್ಟಿ ಅಸುಂಡಿ ಮತ್ತು ಮಲ್ಲಸಮುದ್ರ ಗ್ರಾಮದಲ್ಲಿನ ಎಲ್ಲ ಜಾನುವಾರುಗಳಿಗೆ ಎಚ್.ಎಸ್. ನಿಯಂತ್ರಣಾ ಲಸಿಕೆ ಹಾಕಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ಆರೋಗ್ಯ ಸಲಹಾ ಸಮಿತಿ ಸಭೆ
ಮೃಗಾಲಯದಲ್ಲಿನ ಪ್ರಾಣಿಗಳ ಆರೋಗ್ಯ ರಕ್ಷಣೆಗಾಗಿ ತಜ್ಞರ ಜತೆಗೆ ಪ್ರತಿ ಆರು ತಿಂಗಳಿಗೊಮ್ಮೆ ಸಭೆ ನಡೆಸಿ ಚರ್ಚಿಸಲಾಗುತ್ತದೆ. ಅದರಂತೆ ಆರೋಗ್ಯ ಸಲಹಾ ಸಮಿತಿ ಸಭೆ ನವೆಂಬರ್ 25ರಂದು ನಡೆಯಲಿದ್ದು ಪ್ರಾಣಿಗಳ ಆರೋಗ್ಯ ಕಾಳಜಿ ಬ್ಯಾಕ್ಟೀರಿಯಾಗಳಿಂದ ರಕ್ಷಣೆಗೆ ವೈಜ್ಞಾನಿಕ ಮತ್ತು ಪರಿಣಾಮಕಾರಿ ಸಲಹೆಗಳು ಸಿಗುವ ನಿರೀಕ್ಷೆ ಇದೆ. ‘ಆರೋಗ್ಯ ಸಲಹಾ ಸಮಿತಿ ಸಭೆಯಲ್ಲಿ ಪಶುವೈದ್ಯರು ಪಶುವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕರು ಹಾಗೂ ಡಿಸಿಎಫ್ ಭಾಗವಹಿಸಲಿದ್ದು ಪ್ರಾಣಿಗಳ ರಕ್ಷಣೆಗೆ ಅನುಸರಿಸಬೇಕಾದ ವೈಜ್ಞಾನಿಕ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು’ ಎಂದು ಆರ್‌ಎಫ್‌ಒ ಸ್ನೇಹಾ ತಿಳಿಸಿದ್ದಾರೆ. ಇದೆಲ್ಲದರ ಜತೆಗೆ ಮೃಗಾಲಯದಲ್ಲಿನ ಪ್ರಾಣಿಗಳಿಗೆ ಸಸ್ಯಾಹಾರ ಮತ್ತು ಮಾಂಸಾಹಾರ ಪೂರೈಸುವ ವಾಹನಗಳಿಗೆ ಸ್ಯಾನಿಟೈಸೇಷನ್ ಒಳಬರುವ ಹಾಗೂ ಹೊರ ಹೋಗುವ ವಾಹನಗಳ ವಿವರ ಸೇರಿದಂತೆ ಮೃಗಾಲಯದ ಸಿಬ್ಬಂದಿಗೆ ಬ್ಯಾಕ್ಟೀರಿಯಾಗಳಿಂದ ಪ್ರಾಣಿಗಳನ್ನು ರಕ್ಷಣೆ ಮಾಡುವ ಕ್ರಮಗಳ ಕುರಿತು ಹೆಚ್ಚಿನ ಮಾಹಿತಿ ಒದಗಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಎಚ್.ಎಸ್. ಬ್ಯಾಕ್ಟೀರಿಯಾ ಸೋಂಕಿನಿಂದ ಮೃಗಾಲಯದ ಪ್ರಾಣಿಗಳ ರಕ್ಷಣೆಗೆ ಡಿಸಿಎಫ್ ಮಾರ್ಗದರ್ಶನದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಸದ್ಯ ಪ್ರಾಣಿಗಳು ಆರೋಗ್ಯದಿಂದ ಇವೆ-ಸ್ನೇಹಾ ಕೊಪ್ಪಳ, ಮೃಗಾಲಯದ ಆರ್‌ಎಫ್‌ಒ
ಎಚ್.ಎಸ್. ಬ್ಯಾಕ್ಟೀರಿಯಾ ಸೋಂಕಿನಿಂದ ಪ್ರಾಣಿಗಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಆಗಿ ಸಾಯುವ ಸಾಧ್ಯತೆ ಜಾಸ್ತಿ ಇರುತ್ತದೆ. ಮೃಗಾಲಯದ ಪ್ರಾಣಿಗಳಿಗೆ ಸಪ್ಲಿಮೆಂಟ್ಸ್ ಕೊಡಲಾಗುತ್ತಿದೆ-ಪವಿತ್ರಾ, ಮೃಗಾಲಯದ ಪಶುವೈದ್ಯೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.