
ನರಗುಂದ: ಆಶ್ರಯ ಯೋಜನೆಯಡಿ ನಿರ್ಮಿಸುತ್ತಿರುವ 410 ಮನೆಗಳಲ್ಲಿ ಪ್ರಸ್ತುತ 292 ಮನೆಗಳು ಪೂರ್ಣಗೊಂಡಿವೆ. ಉಳಿದ ಮನೆಗಳು ನಿರ್ಮಾಣ ಹಂತದಲ್ಲಿವೆ. ಪೂರ್ಣಗೊಂಡಿರುವ ಮನೆಗಳನ್ನು ಜನವರಿ 14 ರ ನಂತರ ಫಲಾನುಭವಿಗಳಿಗೆ ವಿತರಿಸಲಾಗುವುದು ಎಂದು ಶಾಸಕ ಸಿ ಸಿ ಪಾಟೀಲ ಹೇಳಿದರು.
ಪಟ್ಟಣದಲ್ಲಿ ಗುಡ್ಡದ ಪಕ್ಕದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ನಿರ್ಮಾಣಗೊಳ್ಳುತ್ತಿರುವ ಆಶ್ರಯ ಮನೆಗಳನ್ನು ಬುಧವಾರ ವೀಕ್ಷಣೆ ಮಾಡಿ ನಂತರ ಮಾತನಾಡಿದರು.
₹ 30 ಕೋಟಿ ವೆಚ್ಚದಲ್ಲಿ 500 ಮನೆಗಳು ನಿರ್ಮಾಣ ಆಗಬೇಕಾಗಿತ್ತು, ಅದರಲ್ಲಿ 90 ಮನೆಗಳ ನಿರ್ಮಾಣ ರದ್ದಾಗಿದೆ. ಸಧ್ಯ 410 ಮನೆಗಳು ನಿರ್ಮಾಣಗೊಳ್ಳುತ್ತಿವೆ. ಅದರಲ್ಲಿ 292 ಪೂರ್ಣಗೊಂಡಿವೆ. ವೈರಿಂಗ್ ಮತ್ತು ಗ್ಲಾಸ್ ಜೋಡಣೆ ಮಾತ್ರ ಬಾಕಿ ಇದೆ. ವಿದ್ಯುತ್ ವ್ಯವಸ್ಥೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ನೂತನ ನಗರಕ್ಕೆ ಶ್ರೀ ಜಗನ್ನಾಥ ಬಡಾವಣೆ ಎಂದು ನಾಮಕರಣ ಮಾಡಲಾಗುವುದು ಎಂದರು.
ಗುತ್ತಿಗೆದಾರರು ಬಾಕಿವುಳಿದ ಕೆಲಸಗಳನ್ನು ಗುಣಮಟ್ಟದ ರೂಪದಲ್ಲಿ ಬೇಗ ಮಾಡಿ ಮುಗಿಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಬಿ ಕೆ ಗುಜಮಾಗಡಿ, ಎಸ್ ಎಸ್ ಪಾಟೀಲ, ಪ್ರಕಾಶ ಪಟ್ಟಣಶೆಟ್ಟಿ, ಚಂದ್ರಗೌಡ ಪಾಟೀಲ, ಮಾರುತಿ ಗೊಂದಿ, ಹನುಮಂತ ಹವಾಲ್ದಾರ, ಅನೀಲ ಧರಿಯಣ್ಣವರ, ಸಿದ್ದಪ್ಪ ಯಲಿಗಾರ, ಬಸು ಹೂಗಾರ, ನಾಗರಾಜ ಶಲವಡಿ, ಅಬ್ದುಲ್ ಮುಲ್ಲಾ, ಮುಖ್ಯಾಧಿಕಾರಿ ಎಸ್ ಎಸ್ ಬ್ಯಾಳಿ, ಎಇಇ ಮಂಜುನಾಥ ಜಿ ಹೆಚ್, ಗುತ್ತಿಗೆದಾರ ನಾಗರಾಜ ಇದ್ದರು.