ಗದಗ: ‘ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್‌ನವರಿಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಮಹದಾಯಿ ವಿಚಾರದಲ್ಲಿ ಏನಾದರೂ ಪ್ರಗತಿ ಆಗಿದ್ದರೆ ಅದು ಬಿಜೆಪಿ ಸರ್ಕಾರದಿಂದ ಮಾತ್ರ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್‌ನವರು ನ್ಯಾಯಮಂಡಳಿ ಮಾಡಿ ಅದಕ್ಕೆ ನಾಲ್ಕು ವರ್ಷ ಕಚೇರಿ ಕೊಡಲಿಲ್ಲ. ನಮ್ಮ ಸರ್ಕಾರ ಬಂದು ಕಚೇರಿ ನೀಡಿತು. ಮಹದಾಯಿ ಯೋಜನೆಗೆ ಡಿಪಿಆರ್ ಮಾಡಿ ಒಪ್ಪಿಗೆ ಪಡೆದಿದ್ದು ಕೇಂದ್ರದ ಎನ್‌ಡಿಎ ಸರ್ಕಾರ. ಪರಿಸರ ಇಲಾಖೆ ಅನುಮತಿಯನ್ನೂ ಬಿಜೆಪಿ ಸರ್ಕಾರವೇ ಕೊಡಿಸಿದೆ. ಬಿಜೆಪಿ ಅವಧಿಯಲ್ಲಿ ಕಾಮಗಾರಿ ಮಾಡಿ ಇಂಟರ್ ಲಿಂಕಿಂಗ್ ಕೆನಾಲ್ ಮಾಡಿದ್ದನ್ನು ತಡೆದು ಮಹದಾಯಿ ನೀರು ಮಲಪ್ರಭಾ ನದಿಗೆ ಹರಿಯದಂತೆ ಅಡ್ಡಗೋಡೆ ಕಟ್ಟಿರುವುದೇ ಕಾಂಗ್ರೆಸ್ ಕೊಡುಗೆ’ ಎಂದು ಆರೋಪಿಸಿದರು.
‘ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮಹದಾಯಿಯಿಂದ ಕರ್ನಾಟಕಕ್ಕೆ ಒಂದು ಹನಿ ನೀರು ಕೊಡುವುದಿಲ್ಲ ಎಂದು ಹೇಳಿದ್ದರು. ಕಾಂಗ್ರೆಸ್‌ನವರಿಗೆ ಮಹದಾಯಿ ಬಗ್ಗೆ ಮಾತನಾಡಲು ಯಾವ ನೈತಿಕ ಹಕ್ಕಿದೆ’ ಎಂದು ಪ್ರಶ್ನಿಸಿದರು.
‘ನೀರಾವರಿ ವಿಚಾರದಲ್ಲಿ ರಾಜಕಾರಣ ಮಾಡುವ ಅವಶ್ಯಕತೆ ಇಲ್ಲ. ನಾವೆಲ್ಲಾ ಒಂದಾಗಿದ್ದೇವೆ. ನಾನು ಗೋವಾ ಮುಖ್ಯಮಂತ್ರಿ ಹೇಳಿಕೆಯನ್ನು ಖಂಡಿಸುತ್ತೇನೆ’ ಎಂದರು.
‘ರಾಜ್ಯದಲ್ಲಿ ಯೂರಿಯಾ ಗೊಬ್ಬರ ಕೊರತೆಯನ್ನು ರಾಜ್ಯ ಸರ್ಕಾರ ತಪ್ಪಿಸಬಹುದಿತ್ತು. ಬಫರ್ ಸ್ಟಾಕ್ ಇಟ್ಟುಕೊಳ್ಳಬೇಕಿತ್ತು. ನಿರ್ವಹಣೆ ಸರಿಯಾಗಿ ಆಗಿಲ್ಲ. ಕೇಂದ್ರ ಸಚಿವರ ಜೊತೆ ಮಾತನಾಡಿ ಹೆಚ್ಚುವರಿ ಗೊಬ್ಬರ ಕೊಡಿಸಲಾಗುವುದು’ ಎಂದರು.
‘ಯತೀಂದ್ರ ಅವರು ತಮ್ಮ ತಂದೆಯ ಸಾಧನೆ ಹೇಳಲು ಒಡೆಯರ್ ಅವರಿಗೆ ಹೋಲಿಕೆ ಮಾಡಿದ್ದಾರೆ. ಸೂರ್ಯನಿಗೆ ಯಾವುದಾದರೂ ಸಣ್ಣ ಬೆಳಕನ್ನು ಹೋಲಿಕೆ ಮಾಡಲು ಸಾಧ್ಯವೇ’ ಎಂದು ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.