ADVERTISEMENT

ಬದುಕಿಗೆ ನವಚೈತನ್ಯ ತುಂಬುವ ಕವಿತೆ: ಸಿದ್ಧರಾಮ ಸ್ವಾಮೀಜಿ

ಕವನ ಸಂಕಲನ ಲೋಕಾರ್ಪಣೆ ಮಾಡಿ ತೋಂಟದ ಶ್ರೀಗಳು

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2021, 3:38 IST
Last Updated 8 ಫೆಬ್ರುವರಿ 2021, 3:38 IST
ನಿರ್ಮಲಾ ಶೆಟ್ಟರ ‘ಸರಹದ್ದುಗಳಿಲ್ಲದ ಭೂಮಿಯ ಕನಸು’ ಕವನ ಸಂಕಲನವನ್ನು ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ ಲೋಕಾರ್ಪಣೆಗೊಳಿಸಿದರು
ನಿರ್ಮಲಾ ಶೆಟ್ಟರ ‘ಸರಹದ್ದುಗಳಿಲ್ಲದ ಭೂಮಿಯ ಕನಸು’ ಕವನ ಸಂಕಲನವನ್ನು ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ ಲೋಕಾರ್ಪಣೆಗೊಳಿಸಿದರು   

ಗದಗ: ‘ಸರಹದ್ದುಗಳಿಲ್ಲದ ಭೂಮಿಯ ಕನಸು’ ಕವನ ಸಂಕಲನ ನಿರಾಯಾಸವಾಗಿ ಓದಿಸಿಕೊಂಡು ಹೋಗುವ ಜತೆಗೆ ಯಶಸ್ಸಿಗೆ ವ್ಯತಿರಿಕ್ತವಾಗುವ ಸರಹದ್ದುಗಳನ್ನು ಒಡೆದು ಮುನ್ನುಗ್ಗಬೇಕೆಂಬ ಪ್ರಜ್ಞೆ ಬೆಳೆಸುತ್ತದೆ’ ಎಂದು ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ ಹೇಳಿದರು.

ನಗರದ ತೋಂಟದಾರ್ಯ ಮಠದ ಶಿವಾನುಭವ ಮಂಟಪದಲ್ಲಿ ಡಾ.ಎಂ.ಎಂ ಕಲಬುರ್ಗಿ ಸಂಶೋಧನಾ ಕೇಂದ್ರ, ಬಣ್ಣದ ಮನೆ ಸಾಂಸ್ಕೃತಿಕ ವೇದಿಕೆ ಹಾಗೂ ಲಕ್ಷ್ಮೇಶ್ವರದ ಪಾಲ್ಗುಣಿ ಪ್ರಕಾಶನದ ಸಹಯೋಗದಲ್ಲಿ ಭಾನುವಾರ ನಡೆದ ನಿರ್ಮಲಾ ಶೆಟ್ಟರ ‘ಸರಹದ್ದುಗಳಿಲ್ಲದ ಭೂಮಿಯ ಕನಸು’ ಕವನ ಸಂಕಲನ ಲೋಕಾರ್ಪಣೆಗೊಳಿಸಿ ಮಾತನಾಡಿದರು. ‌

‘ಕವನದ ಆಶಯಗಳು ಟಿಪ್ಪಣಿ ಮಾಡಿಟ್ಟುಕೊಳ್ಳಲು ಯೋಗ್ಯವಾಗಿವೆ. ಕಾವ್ಯ ರಚನೆಗೆ ಎಲ್ಲೆಗಳಿಲ್ಲ. ಉದ್ದೇಶ ಮೌಲ್ಯಯುತವಾಗಿದ್ದರೆ ಅವುಗಳ ಹುಟ್ಟು ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ಬದುಕಿನ ಪ್ರತಿ ಹಂತದಲ್ಲೂ ಆಶಾಭಾವನೆ ಇಟ್ಟುಕೊಳ್ಳಬೇಕು ಎಂದು ಕಲಿಸುವ ಈ ಕವನ ಸಂಕಲನ ಬದುಕಿಗೆ ನವಚೈತನ್ಯ ತುಂಬಬಲ್ಲದು’ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಡಾ.ಎಂ.ಎಂ.ಕಲಬುರ್ಗಿ ಸಂಶೋಧನಾ ಕೇಂದ್ರದ ಸಂಯೋಜಕ ಡಾ.ಅರ್ಜುನ ಗೊಳಸಂಗಿ, ‘ಮಹಿಳೆಯರಿಗೆ, ಮಕ್ಕಳಿಗೆ ಸರ್ವರಂಗಗಳಲ್ಲೂ ಸ್ವಾತಂತ್ರ್ಯ ದೊರೆತರೆ ಉತ್ತುಂಗಕ್ಕೆ ತಲುಪಬಲ್ಲರು. ಸಮಾಜಕ್ಕೆ ಅದ್ವಿತೀಯ ಕೊಡುಗೆ ನೀಡಬಲ್ಲರು’ ಎಂದರು.

ಸಂಶೋಧಕ ಡಾ.ದೇವೇಂದ್ರಪ್ಪ ಜಾಜಿ, ‘ಆಧುನಿಕ ಯುಗದ ಭರಾಟೆಯ ಬದುಕಿನ ಅಪಸವ್ಯಗಳಿಗೆ ಕಾವ್ಯ ಮದ್ದಾಗಿದೆ. ಮಾನವ ತನ್ನ ಚೌಕಟ್ಟಿಗೆ ಸೀಮಿತವಾಗುವ ಸಂಕುಚಿತತೆ ತೊರೆದು ಎಲ್ಲೆ ಮೀರಿ ಬೆಳೆಯುವ ಪ್ರವೃತ್ತಿಯುಳ್ಳವನಾಗಬೇಕು’ ಎಂದರು.

ಲೇಖಕಿ ನಿರ್ಮಲಾ ಶೆಟ್ಟರ್ ಕವನ ಸಂಕಲನದ ಆಶಯ ತಿಳಿಸಿದರು. ನಿವೃತ್ತ ಮುಖ್ಯಶಿಕ್ಷಕಿ ಈರಮ್ಮ ಮುತಗಾರ ಅವರನ್ನು ಸನ್ಮಾನಿಸಲಾಯಿತು.

ಶ್ರೀನಿವಾಸ ಕುಲಕರ್ಣಿ, ತೋಂಟದಾರ್ಯ ಮಠದ ಶಿವಾನುಭವ ಸಮಿತಿ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ದಾವಣಗೆರೆಯ ಸಾಹಿತಿ ಡಾ.ಆನಂದ ಋಗ್ವೇದಿ, ಪ್ರೊ.ಕೆ.ಬಿ ಸಂಕನಗೌಡರ, ಪ್ರೊ.ಶಿವರಾಮ ಬಂಡೇಮೇಗಳ, ಬಣ್ಣದ ಮನೆ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ವಿಜಯ ಕಿರೇಸೂರ, ಸಾಹಿತಿಗಳಾದ ಪ್ರಕಾಶ ಖಾಡೆ, ಬಂಡಾಯ ಸಾಹಿತಿ
ಬಸವರಾಜ ಸೂಳಿಬಾವಿ, ಅಣ್ಣಿಗೇರಿಯ ದಿ.ನಿಂಗಮ್ಮ ಹೂಗಾರ ಕಾಲೇಜಿನ ಪ್ರಾಚಾರ್ಯ ಎಸ್.ಎಸ್.ಹರ್ಲಾಪೂರ, ಸಾಹಿತಿ ಎ.ಎಸ್.ಮಕಾನದಾರ, ವಿನಾಯಕ ಕಮತದ, ಮರುಳಸಿದ್ಧಪ್ಪ ದೊಡ್ಡಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.