ADVERTISEMENT

ಹುಲಿ, ಚಿರತೆಗೆ ಕೋಳಿಮಾಂಸ!

ಗೋಹತ್ಯೆ ನಿಷೇಧ ಮಸೂದೆ ಪರಿಣಾಮ: ಮೃಗಾಲಯಕ್ಕೆ ಆರ್ಥಿಕ ಹೊರೆ ಹೆಚ್ಚಳ

ಸತೀಶ ಬೆಳ್ಳಕ್ಕಿ
Published 18 ಡಿಸೆಂಬರ್ 2020, 1:23 IST
Last Updated 18 ಡಿಸೆಂಬರ್ 2020, 1:23 IST
ಬಿಂಕದಕಟ್ಟಿ ಮೃಗಾಲಯದ ನೋಟ
ಬಿಂಕದಕಟ್ಟಿ ಮೃಗಾಲಯದ ನೋಟ   

ಗದಗ: ಕೋವಿಡ್‌–19ನಿಂದ ನಷ್ಟದಲ್ಲಿದ್ದ ಮೃಗಾಲಯಗಳಿಗೆ ಗೋಹತ್ಯೆ ನಿಷೇಧ ಮಸೂದೆ ಮಂಡನೆಯಿಂದ ಮತ್ತಷ್ಟು ಆರ್ಥಿಕ ಸಂಕಷ್ಟ ಎದುರಾಗುವ ಸಾಧ್ಯತೆಗಳಿವೆ. ಇಲ್ಲಿನ ಮಾಂಸಾಹಾರಿ ಪ್ರಾಣಿಗಳು ಪರ್ಯಾಯ ಮಾಂಸದ ಆಹಾರ ವ್ಯವಸ್ಥೆಗೆ ಹೊಂದಿಕೊಳ್ಳುವ ಅನಿವಾರ್ಯ ಎದುರಾಗಿದೆ.

ಗದಗ ನಗರದ ಹೊರವಲಯದ ಬಿಂಕದಕಟ್ಟಿಯಲ್ಲಿರುವ ಕಿರು ಮೃಗಾಲಯದಲ್ಲಿ ಎರಡು ಹುಲಿ, ಆರು ಚಿರತೆಗಳು, ಒಂಬತ್ತು ನರಿಗಳು, ಒಂದು ಕತ್ತೆಕಿರುಬ ಹಾಗೂ ಎರಡು ತೋಳಗಳಿದ್ದು ಇವುಗಳಿಗೆ ಪ್ರತಿನಿತ್ಯ 60 ಕೆ.ಜಿ. ದನದ ಮಾಂಸವನ್ನು ಆಹಾರವಾಗಿ ನೀಡಲಾಗುತ್ತಿತ್ತು. ಮಸೂದೆ ಮಂಡನೆಯಾಗಿರುವುದರಿಂದ ಮುಂದೆ ದನದ ಮಾಂಸ ಸಿಗುವುದು ತುಸು ಕಷ್ಟವಾಗಲಿದ್ದು, ಇಲ್ಲಿನ ಪ್ರಾಣಿಗಳಿಗೆ ಕೋಳಿ ಅಥವಾ ಕುರಿ ಮಾಂಸ ಒದಗಿಸಬೇಕಿದೆ.

‘ಮೃಗಾಲಯದಲ್ಲಿರುವ ಒಂದು ಹುಲಿಗೆ ಪ್ರತಿನಿತ್ಯ 10 ಕೆ.ಜಿ. ಮಾಂಸವನ್ನು ಆಹಾರವಾಗಿ ನೀಡಲಾಗುತ್ತದೆ. ಇಲ್ಲಿರುವ ಎರಡು ಹುಲಿಗಳಿಗೆ 20 ಕೆ.ಜಿ. ಮಾಂಸ ಬೇಕು. 1 ಕೆ.ಜಿ. ದನದ ಮಾಂಸಕ್ಕೆ ₹135 ಇದ್ದು, ಪ್ರತಿ ದಿನ ಒಂದು ಹುಲಿಗೆ ಆಹಾರ ಪೂರೈಸಲು ₹1,350 ವ್ಯಯಿಸಬೇಕಾಗುತ್ತದೆ. ಗದಗ ಕಿರು ಮೃಗಾಲಯದ ಒಂದು ದಿನದ ಆದಾಯ ಇರುವುದು ₹4ರಿಂದ ₹5 ಸಾವಿರ ಮಾತ್ರ! ಇನ್ನು ಚಿರತೆ, ನರಿ, ಹೈನಾ, ತೋಳಗಳಿಗೆಲ್ಲ ಮಾಂಸ ಒದಗಿಸಲು ಪ್ರತಿನಿತ್ಯ ₹8 ಸಾವಿರಕ್ಕೂ ಹೆಚ್ಚು ಖರ್ಚಾಗುತ್ತದೆ’ ಎನ್ನುತ್ತಾರೆ ಬಿಂಕದಕಟ್ಟಿ ಮೃಗಾಲಯದ ಪಶುವೈದ್ಯಕೀಯ ಸಹಾಯಕ ಹಾಗೂ ಎಜುಕೇಷನ್‌ ಆಫೀಸರ್‌ ನಿಖಿಲ್‌ ಕುಲಕರ್ಣಿ.

ADVERTISEMENT

‘ಮೈಸೂರು ಮತ್ತು ಬನ್ನೇರುಘಟ್ಟ ಮೃಗಾಲಯಗಳನ್ನು ಹೊರತುಪಡಿಸಿದರೆ ರಾಜ್ಯದಲ್ಲಿನ ಎಲ್ಲ ಮೃಗಾಲಯಗಳು ಕೂಡ ನಷ್ಟದಲ್ಲಿವೆ. ಝೂಗಳಿಂದ ಬರುವ ಆದಾಯದಿಂದ ಪ್ರಾಣಿಗಳ ನಿರ್ವಹಣೆ ಸಾಧ್ಯವಿಲ್ಲ. ಮೃಗಾಲಯ ಪ್ರಾಧಿಕಾರದಿಂದ ಅನುದಾನ ಸಿಗುತ್ತದೆ. ಹೊಸ ಕಾನೂನು ಬಂದರೆ ನಿರ್ವಹಣೆ ವೆಚ್ಚ ಹೆಚ್ಚಲಿದೆ. ದನದ ಮಾಂಸದ ಬದಲಾಗಿ ಕೋಳಿ ಮಾಂಸ ನೀಡಬೇಕಾಗಿ ಬಂದರೆ ಶೇ 30ರಷ್ಟು ವೆಚ್ಚ ಹೆಚ್ಚಲಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.