ADVERTISEMENT

ಹಸ್ತಾಂತರವಾಗದ ಪಟ್ಟಣ ಪಂಚಾಯಿತಿ ವಾಣಿಜ್ಯ ಮಳಿಗೆ: ವ್ಯಾಪಾರ, ವಹಿವಾಟಿಗೆ ಹಿನ್ನಡೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 5:18 IST
Last Updated 1 ಸೆಪ್ಟೆಂಬರ್ 2025, 5:18 IST
ನರೇಗಲ್‌ ಪಟ್ಟಣ ಪಂಚಾಯಿತಿ ಎದುರಲ್ಲಿರುವ ವಾಣಿಜ್ಯ ಮಳಿಗೆಗಳಿಗೆ ಬೀಗ ಹಾಕಲಾಗಿದ್ದು, ಮುಂದುಗಡೆ ಖಾಸಗಿ ವಾಹನ ನಿಲ್ಲಿಸಿರುವುದು
ನರೇಗಲ್‌ ಪಟ್ಟಣ ಪಂಚಾಯಿತಿ ಎದುರಲ್ಲಿರುವ ವಾಣಿಜ್ಯ ಮಳಿಗೆಗಳಿಗೆ ಬೀಗ ಹಾಕಲಾಗಿದ್ದು, ಮುಂದುಗಡೆ ಖಾಸಗಿ ವಾಹನ ನಿಲ್ಲಿಸಿರುವುದು   

ನರೇಗಲ್:‌ ಪಟ್ಟಣದ ವಾಣಿಜ್ಯ ಮಳಿಗೆಗಳು ಹರಾಜಾಗಿ ಐದೂವರೆ ತಿಂಗಳಾಗಿವೆ. ಆದರೂ ಮಳಿಗೆಗಳ ದುರಸ್ತಿ ಕಾರ್ಯ, ನೂತನ ಮಾಲೀಕರಿಗೆ ಹಸ್ತಾಂತರಿಸುವ ಪ್ರಕ್ರಿಯೆ ಇಂದಿಗೂ ನಡೆದಿಲ್ಲ. ಇದರಿಂದ ಪಟ್ಟಣದ ವ್ಯಾಪಾರ ವಹಿವಾಟಿಗೆ ಹಿನ್ನಡೆಯಾಗಿದೆ ಎನ್ನುವುದು ಸ್ಥಳೀಯ ವರ್ತಕರ ಆರೋಪವಾಗಿದೆ.

ಇಲ್ಲಿನ ಪಟ್ಟಣ ಪಂಚಾಯಿತಿಗೆ ಪ್ರಮುಖ ಆದಾಯದ ಮೂಲವಾಗಿರುವ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ಮಾರ್ಚ್‌ 7ರಂದು ನಡೆದಿದೆ. ಇದರಲ್ಲಿ ಗದಗ ಮಾರ್ಗದ 13, ತೊಂಡಿಹಾಳ ಮಾರ್ಗದ 2, ಅಬ್ಬಿಗೇರಿ ಮಾರ್ಗದ 14 ಒಟ್ಟು 29 ಮಳಿಗೆಗಳ ಹರಾಜು ಪ್ರತ್ಯೇಕವಾಗಿ ನಡೆಯಿತು. ಬಿಡ್‌ನಲ್ಲಿ ಭಾಗವಹಿಸಿದವರು ₹50 ಸಾವಿರ ಬ್ಯಾಂಕ್‌ ಡಿಡಿಯನ್ನು ಪ್ರತ್ಯೇಕವಾಗಿ ತುಂಬಿದ್ದಾರೆ. ಅದರಲ್ಲಿ ವ್ಯಾಪಾರಕ್ಕಾಗಿ ಪಣತೊಟ್ಟವರು ಎರಡೆರಡು ಮಳಿಗೆಗಳನ್ನು ಪಡೆದಿದ್ದಾರೆ. ಕೆಲವರು ₹10 ಸಾವಿರಕ್ಕಿಂತ ಹೆಚ್ಚು ಬಿಡ್ ಮಾಡಿ ಮಳಿಗೆ ಪಡೆದಿದ್ದು ಹಸ್ತಾಂತರಕ್ಕೆ ಕಾಯುತ್ತಿದ್ದಾರೆ. ಆದರೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ವ್ಯಾಪಾರಕ್ಕೆ ಹಾಗೂ ಆದಾಯಕ್ಕೆ ತೊಂದರೆಯಾಗಿದೆ.

ಗದಗ ರಸ್ತೆ ಮಾರ್ಗದ ಪಟ್ಟಣ ಪಂಚಾಯಿತಿ ಸಮೀಪದಲ್ಲಿ 10X15 ಅಳತೆಯ ಎಂಟು, 12X15 ಅಳತೆಯ ನಾಲ್ಕು ಹಾಗೂ 8X15 ಅಳತೆಯ ಒಂದು ವಾಣಿಜ್ಯ ಮಳಿಗೆಗಳ ಎದುರಲ್ಲಿ ಸ್ವಲ್ಪ ಮಳೆಯಾದರೂ ಸಾಕು ಅಪಾರ ಪ್ರಮಾಣದ ನೀರು ನಿಲ್ಲುತ್ತದೆ. ಇದರಿಂದ ಜನರು ಮಳಿಗೆಗಳ ಕಡೆಗೆ ಬರದಂತ ಪರಿಸ್ಥಿತಿ ನಿರ್ಮಾಣವಾಗಿದೆ.

ADVERTISEMENT

ಸದ್ಯ ಇಲ್ಲಿನ ಮಳಿಗೆಗಳು ಖಾಸಗಿ ವಾಹನಗಳನ್ನು ನಿಲ್ಲಿಸುವ ಅಡ್ಡೆಯಾಗಿ ಬದಲಾಗಿದೆ. ಇಲ್ಲಿನ ಮಳಿಗೆಗಳ ಒಳಗೆ ನೆಲಕ್ಕೆ ಪಾಟಿಗಲ್ಲು, ಟೈಲ್ಸ್‌ ಇಲ್ಲವಾಗಿದೆ. ಇವುಗಳನ್ನು ಒಳಗೊಂಡಂತೆ ಅಬ್ಬಿಗೇರಿ ಮಾರ್ಗದ ಕಾಲೇಜು ರಸ್ತೆ ಪಕ್ಕದಲ್ಲಿ 20X15 ಅಳತೆಯ 14 ಮಳಿಗೆಗಳ ಚಾವಣಿ ಹಾಗೂ ಗೋಡೆಗಳು ಬಿರುಕು ಬಿಟ್ಟಿವೆ. ಮಳೆ ಬಂದಾಗ ಸೋರುತ್ತವೆ.

ಮಳಿಗೆಗಳ ಮೇಲೆ ಅಪಾರ ಪ್ರಮಾಣದ ನೀರು ನಿಲ್ಲುತ್ತದೆ. ವಿದ್ಯುತ್‌ ಸಂಪರ್ಕ ಸರಿಯಾಗಿಲ್ಲ, ಸುಣ್ಣ, ಬಣ್ಣವಿಲ್ಲ. ಇದರಿಂದಾಗಿ ವಾಣಿಜ್ಯ ಮಳಿಗೆಗಳು ಪಾಳು ಬಿದ್ದ ಕಟ್ಟಡದಂತಾಗಿವೆ. ಹೆಗ್ಗಣಗಳು ನುಸುಳಿರುವ ಕಾರಣ ಬುನಾದಿಗೂ ತೊಂದರೆಯಾಗಲಿದೆ. ಆದರೂ ಅಧಿಕಾರಿಗಳಿಗೆ ಹಣ ಕಟ್ಟಿಸಿಕೊಳ್ಳುವಾಗ ಇದ್ದಂತಹ ಆತುರ ಈಗ ಇಲ್ಲವಾಗಿದೆ. ಯಾವುದೇ ದುರಸ್ತಿ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಮುಂದಾಗುತ್ತಿಲ್ಲ. ಆದರೆ, ಬಾಡಿಗೆ ಮಾತ್ರ ಜಿಲ್ಲಾಮಟ್ಟಕ್ಕೆ ಹೋಲಿಕೆಯಾಗುವಂತೆ ಏರಿಸಿ ಹರಾಜು ಮಾಡಿದ್ದಾರೆ ಎಂದು ಮಳಿಗೆ ಮಾಲೀಕರು ಆರೋಪ ಮಾಡಿದ್ದಾರೆ.

‘ಪಟ್ಟಣ ಪಂಚಾಯಿತಿಯವರು ಇದೇ ರೀತಿ ನಿರ್ಲಕ್ಷ್ಯ ಮುಂದುವರಿಸಿದರೆ ವಾಣಿಜ್ಯ ಮಳಿಗೆಗಳಿಂದ ಸಂಗ್ರಹವಾಗಬೇಕಿದ್ದ ಆದಾಯ ಕುಂಠಿತಗೊಳ್ಳುತ್ತದೆ. ಇನ್ನಾದರೂ ಅಭಿವೃದ್ದಿ ಕಾರ್ಯಗಳಿಗೆ ಮುದಾಗಬೇಕು’ ಎಂದು ಮಳಿಗೆ ಪಡೆದ ಚನ್ನಪ್ಪಗೌಡ್ರ ಹೇಳಿದರು.

‘ಗದಗ ಮಾರ್ಗದ ಮಳಿಗೆಗಳ ಎದುರಲ್ಲಿ ಫೇವರ್ಸ್‌ ಹಾಕುವ ಕುರಿತು ಚರ್ಚಿಸಲಾಗಿದೆ. ಉಳಿದಂತೆ ವಾಟರ್‌ಪ್ರೂಫ್‌, ಬಣ್ಣ, ದುರಸ್ತಿ ಕಾರ್ಯಗಳು ಸೋಮವಾರದಿಂದ ಆರಂಭವಾಗಲಿವೆ’ ಎಂದು ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಚೇರ್ಮನ್ ಮುತ್ತಪ್ಪ ಹನಮಪ್ಪ ನೂಲ್ಕಿ ತಿಳಿಸಿದ್ದಾರೆ.

ಮೈಲಾರಪ್ಪ ಚಳ್ಳಮರದ
₹1 ಲಕ್ಷ ಠೇವಣಿ ಮೊತ್ತದ ಡಿಡಿ ತುಂಬಿ ಹರಾಜಿನಲ್ಲಿ ಅತಿ ಹೆಚ್ಚಿನ ಬೆಲೆಗೆ ಎರಡು ಮಳಿಗೆ ಪಡೆದಿರುವೆ. ಆದರೆ ಇಂದಿಗೂ ಪಟ್ಟಣ ಪಂಚಾಯಿತಿಯವರು ಯಾವುದೇ ದುರಸ್ತಿ ಹಾಗೂ ಹಸ್ತಾಂತರ ಕಾರ್ಯ ಮಾಡಿಲ್ಲ
ಮೈಲಾರಪ್ಪ ಚಳ್ಳಮರದ ಹರಾಜಿನಲ್ಲಿ ಮಳಿಗೆ ಪಡೆದ ಸ್ಥಳೀಯ
ಫಕೀರಪ್ಪ ಮಳ್ಳಿ
ವ್ಯಾಪಾರ ವಹಿವಾಟಿಗೆ ಅಗತ್ಯವಿರುವ ಅಭಿವೃದ್ದಿ ಕಾರ್ಯಗಳನ್ನು ತ್ವರಿತವಾಗಿ ಮಾಡಿ ನೂತನ ಮಾಲೀಕರಿಗೆ ಹಸ್ತಾಂತರಿಸಲಾಗುವುದು
ಫಕೀರಪ್ಪ ಮಳ್ಳಿ ಅಧ್ಯಕ್ಷ ಪಟ್ಟಣ ಪಂಚಾಯಿತಿ
ಕುಮಾರಸ್ವಾಮಿ ಕೋರಧಾನ್ಯಮಠ
ಮಳಿಗೆಗಳ ದುರಸ್ತಿಗೆ ಉಂಟಾದ ತೊಂದೆರೆಗೆ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದು ಸರಿಪಡಿಸಿದ್ದೇವೆ. ಅಗತ್ಯ ಕೆಲಸಗಳನ್ನು ವಾರದೊಳಗೆ ಮಾಡುವಂತೆ ನಾಲ್ಕು ಜನ ಗುತ್ತಿಗೆದಾರರಿಗೆ ನೀಡಲಾಗಿದೆ
ಕುಮಾರಸ್ವಾಮಿ ಕೋರಧಾನ್ಯಮಠ ಉಪಾಧ್ಯಕ್ಷ ಪಟ್ಟಣ ಪಂಚಾಯಿತಿ
ಮಹೇಶ ನಿಡಶೇಶಿ
ಒಂದು ವಾರದೊಳಗೆ ಕೆಲಸ ಮಾಡುವಂತೆ ಗುತ್ತಿಗೆದಾರರಿಗೆ ವರ್ಕ್‌ ಆರ್ಡರ್‌ ನೀಡಲಾಗಿದೆ. ಕೆಲಸ ಪೂರ್ಣಗೊಂಡ ನಂತರ ಹಸ್ತಾಂತರ ಮಾಡಲಾಗುವುದು
ಮಹೇಶ ನಿಡಶೇಶಿ  ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.