ADVERTISEMENT

ಗೋಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿ ಮಾಡಿದರೆ ಹೋರಾಟ ತೀವ್ರ: ವಿಹಿಂಪ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 5:39 IST
Last Updated 9 ಡಿಸೆಂಬರ್ 2025, 5:39 IST
ಗೋ ಸಂರಕ್ಷಣಾ ತಿದ್ದುಪಡಿ ವಿಧೇಯಕ ವಿರುದ್ಧ ವಿಶ್ವ ಹಿಂದೂ ಪರಿಷತ್‌ ಸದಸ್ಯರು ಸೋಮವಾರ ನಗರದ ಛತ್ರಪತಿ ಶಿವಾಜಿ ಮಹಾರಾಜರ ಉದ್ಯಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು 
ಗೋ ಸಂರಕ್ಷಣಾ ತಿದ್ದುಪಡಿ ವಿಧೇಯಕ ವಿರುದ್ಧ ವಿಶ್ವ ಹಿಂದೂ ಪರಿಷತ್‌ ಸದಸ್ಯರು ಸೋಮವಾರ ನಗರದ ಛತ್ರಪತಿ ಶಿವಾಜಿ ಮಹಾರಾಜರ ಉದ್ಯಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು    

ಗದಗ: ‘ಗೋಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿ ತರಲು ಉದ್ದೇಶಿಸುವ ಮೂಲಕ ರಾಜ್ಯ ಕಾಂಗ್ರೆಸ್‌ ಸರ್ಕಾರ ಗೋವು ಕಳ್ಳರಿಗೆ ಸಹಕರಿಸುವ ನೀತಿ ಅನುಸರಿಸುತ್ತಿದೆ. ಅಕ್ರಮ ಗೋವು ಸಾಗಣೆದಾರರಿಗೆ ಅನುಕೂಲ ಮಾಡಿಕೊಡುವ ಈ ತಿದ್ದುಪಡಿಯನ್ನು ತಕ್ಷಣವೇ ಕೈಬಿಡಬೇಕು. ಒಂದು ವೇಳೆ ಬೆಳಗಾವಿ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆ ಮಂಡಿಸಿದರೆ, ಹಿಂದೂ ಸಮಾಜದ ನೇತೃತ್ವದಲ್ಲಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುವುದು’ ಎಂದು ವಿಶ್ವ ಹಿಂದೂ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಧರ್‌ ಕುಲಕರ್ಣಿ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಕಾಂಗ್ರೆಸ್‌ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿ ತರಲು ಉದ್ದೇಶಿಸುವ ಮೂಲಕ ಗೋವು ಕಳ್ಳರಿಗೆ ಅನುಕೂಲ ಮಾಡಿಕೊಡಲು ಮುಂದಾಗಿದೆ ಎಂದು ಆರೋಪಿಸಿ, ಸೋಮವಾರ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ವಿವಿಧ ಹಿಂದೂ ಸಂಘಟನೆ ಸದಸ್ಯರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಮಾತನಾಡಿದರು.

‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಒಂದಲ್ಲ ಒಂದು ರೀತಿಯಲ್ಲಿ ಹಿಂದೂ ಸಮಾಜಕ್ಕೆ ಕಿರುಕುಳ ನೀಡುತ್ತಲೇ ಬಂದಿದೆ’ ಎಂದು ಆರೋಪಿಸಿದರು.

ADVERTISEMENT

‘ಮುಂದುವರಿದ ಭಾಗವಾಗಿ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆ-2020’ನ್ನು ಸಡಿಲಗೊಳಿಸಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂಬ ವರದಿಗಳು ಆತಂಕಕಾರಿಯಾಗಿವೆ’ ಎಂದರು.

‘ಪ್ರಸ್ತುತ ಜಾರಿಯಲ್ಲಿರುವ ಕಾಯ್ದೆಯ ಸೆಕ್ಷನ್ 8ರ ಪ್ರಕಾರ, ಅಕ್ರಮವಾಗಿ ಗೋವು ಸಾಗಣೆ ಮಾಡುವ ವೇಳೆ ಪೊಲೀಸರು ವಾಹನ ಜಪ್ತಿ ಮಾಡಿದರೆ, ಆ ವಾಹನವನ್ನು ತಾತ್ಕಾಲಿಕವಾಗಿ ಬಿಡಿಸಿಕೊಳ್ಳಲು ವಾಹನದ ಮೌಲ್ಯದಷ್ಟೇ ಮೊತ್ತದ ಬ್ಯಾಂಕ್ ಗ್ಯಾರಂಟಿ ನೀಡುವುದು ಕಡ್ಡಾಯವಾಗಿತ್ತು. ಅಂದರೆ, ₹4 ಲಕ್ಷ ಮೌಲ್ಯದ ವಾಹನವಿದ್ದರೆ, ಅಷ್ಟೇ ಮೊತ್ತದ ಬ್ಯಾಂಕ್ ಗ್ಯಾರಂಟಿ ನೀಡಿದರಷ್ಟೇ ವಾಹನ ಬಿಡಿಸಿಕೊಳ್ಳಬಹುದಿತ್ತು. ಅಪರಾಧ ಸಾಬೀತಾದರೆ ಈ ಹಣವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬಹುದಿತ್ತು. ಇಂತಹ ಬಿಗಿ ಕ್ರಮದಿಂದಾಗಿ ಗೋವುಗಳ ಅಕ್ರಮ ಸಾಗಣೆಗೆ ಸಾಕಷ್ಟು ಕಡಿವಾಣ ಬಿದ್ದಿತ್ತು’ ಎಂದು ಹೇಳಿದರು.

‘ಆದರೆ, ಈಗ ರಾಜ್ಯ ಸರ್ಕಾರವು ಗೋವು ಕಳ್ಳರ ಮೇಲಿನ ಅತಿಯಾದ ಪ್ರೀತಿಯಿಂದ, ಅವರಿಗೆ ಬ್ಯಾಂಕ್ ಗ್ಯಾರಂಟಿ ಒದಗಿಸಲು ಕಷ್ಟವಾಗುತ್ತದೆ ಎಂಬ ನೆಪವೊಡ್ಡಿ, ಕೇವಲ ಸಾಲದ ಬಾಂಡ್ ಬರೆದುಕೊಟ್ಟರೆ ಸಾಕು ಎಂಬ ತಿದ್ದುಪಡಿ ತರಲು ಹೊರಟಿದೆ. ಇದು ಪರೋಕ್ಷವಾಗಿ ಸರ್ಕಾರವು ಗೋಕಳ್ಳರೊಂದಿಗೆ ನಾವಿದ್ದೇವೆ ಎನ್ನುವ ಸಂದೇಶ ನೀಡಿದಂತಿದೆ’ ಎಂದು ಕಿಡಿಕಾರಿದರು.

ವಿಶ್ವ ಹಿಂದೂ ಪರಿಷತ್‌ ಪ್ರಮುಖರಾದ ಸಂಜೀವ ಜೋಶಿ, ಸುರೇಶ ಮರಳಪ್ಪನವರ, ಎಂ.ಎನ್.ಪವಾರ್‌, ರಾಘವೇಂದ್ರ ವರ್ಣೇಕರ್, ಸುರೇಶ ಹಾದಿಮನಿ, ಲುಕ್ಕಣಸಾ ರಾಜೋಳಿ, ಕೆ.ಎಸ್.ಹಿರೇಮಠ, ಕೆ.ಕೆ. ಪರ್ವತಗೌಡ್ರ, ರೇವಣಸಿದ್ದಪ್ಪ ಗೊಡಚಪ್ಪನವರ ಸೇರಿದಂತೆ ಹಲವರು ಇದ್ದರು.

ಈ ತಿದ್ದುಪಡಿಯಿಂದ ಗೋವುಗಳ ಮೇಲಿನ ಹಿಂಸೆ ಹೆಚ್ಚಾಗಲಿದೆ. ಈ ಮೂಲಕ ಸರ್ಕಾರವೇ ಜನರನ್ನು ಉದ್ವಿಗ್ನಗೊಳಿಸಲು ಪ್ರಚೋದನೆ ನೀಡುತ್ತಿದೆ. ಜತೆಗೆ ಹಿಂದೂಗಳ ಧಾರ್ಮಿಕ ಭಾವನೆಗೂ ತೀವ್ರ ಧಕ್ಕೆ ತರಲಿದೆ
ಶ್ರೀಧರ್‌ ಕುಲಕರ್ಣಿ ವಿಶ್ವ ಹಿಂದೂ ಪರಿಷತ್‌ ಗದಗ ಜಿಲ್ಲಾ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.