
ಗದಗ: ‘ವಿವಿಧ ಪ್ರಕರಣಗಳಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಕೆಲವು ಕೈದಿಗಳಿಗೆ ರಾಜಾತಿಥ್ಯ ನೀಡುವ ಮೂಲಕ ರಾಜ್ಯ ಸರ್ಕಾರ ಕ್ರಿಮಿನಲ್‍ಗಳನ್ನು ಪೋಷಿಸುವ ಕೆಲಸ ಮಾಡುತ್ತಿದೆ’ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಆರೋಪ ಮಾಡಿದರು.
ಬಿಜೆಪಿ ಯುವ ಮೋರ್ಚಾ ಗದಗ ಜಿಲ್ಲಾ ಘಟಕದ ವತಿಯಿಂದ ಬುಧವಾರ ನಗರದ ಹೊಸ ಬಸ್ ನಿಲ್ದಾಣದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿವರೆಗೆ ನಡೆದ ‘ಎಸ್‌ಪಿ ಕಚೇರಿ ಚಲೋ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಉಗ್ರ ಚಟುವಟಿಕೆಯಲ್ಲಿ ಭಾಗಿಯಾದ ಭಯೋತ್ಪಾದಕನಿಗೆ ಮೊಬೈಲ್ ನೀಡಿರುವುದು ದೇಶಕ್ಕೆ ಗಂಡಾಂತರ ತರುವ ಕೃತ್ಯವಾಗಿದೆ. ಉಮೇಶ್ ರೆಡ್ಡಿಯಂತಹ ವಿಕೃತಕಾಮಿಗೆ ಐಷರಾಮಿ ಸವಲತ್ತುಗಳನ್ನು ನೀಡಿರುವುದು ಕಣ್ಣಿಗೆ ರಾಚುವಂತಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ತನಿಖೆ ನಡೆಸಲು ಎನ್‍ಐಎಗೆ ವಹಿಸಬೇಕು. ನೈತಿಕ ಹೊಣೆ ಹೊತ್ತು ಗೃಹಸಚಿವರು ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.
ಗದಗ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ಅಕ್ಕಿ ಮಾತನಾಡಿ, ‘ಶಿಕ್ಷೆಗೆ ಒಳಗಾದ ಕೈದಿಗಳಿಗೆ ಜೈಲುಗಳಲ್ಲೇ ರಾಜಾಶ್ರಯ ನೀಡುವ ಮೂಲಕ ರಾಜ್ಯ ಸರ್ಕಾರ ಭಯೋತ್ಪಾದಕರು, ಕ್ರಿಮಿನಲ್‌ಗಳು, ಅತ್ಯಾಚಾರಿಗಳು ಹಾಗೂ ವಂಚಕರಿಗೆ ಮೊಬೈಲ್, ಮದ್ಯ, ಗಾಂಜಾ, ಸಿಗರೇಟ್ ಸೇರಿದಂತೆ ಎಲ್ಲಾ ಸವಲತ್ತುಗಳನ್ನು ಒದಗಿಸಿರುವ ವಿಡಿಯೊ, ಚಿತ್ರಗಳು ಭಿತ್ತರಗೊಂಡಿವೆ. ಇದು ಇಡೀ ರಾಜ್ಯವೇ ನಾಚಿಕೆಪಡುವ ಸಂಗತಿ’ ಎಂದು ಕಿಡಿಕಾರಿದರು.
ಯುವ ಮೋರ್ಚಾ ಗದಗ ನಗರ ಮಂಡಲ ಅಧ್ಯಕ್ಷ ನವೀನ ಕೊಟೆಕಲ್ ಮಾತನಾಡಿ, ‘ಅಕ್ರಮ ಚಿನ್ನ ಸಾಗಣೆ ಪ್ರಕರಣದಲ್ಲಿ ಜೈಲು ಸೇರಿರುವ ತರುಣ್ ಎನ್ನುವ ಆರೋಪಿಗೂ ಜೈಲಿನಲ್ಲಿ ರೆಸಾರ್ಟ್ ಮಾದರಿ ಸೌಲಭ್ಯ ನೀಡಿರುವುದನ್ನು ಗಮನಿಸಿದರೆ, ಗೃಹಸಚಿವರು ನಿದ್ದೆ ಮಾಡುತ್ತಿದ್ದಾರೋ ಅಥವಾ ಎಲ್ಲ ವ್ಯವಸ್ಥೆ ಮಾಡಲು ಜೈಲಿನ ಅಧಿಕಾರಿಗಳಿಗೆ ಅವರೇ ಮೌಖಿಕ ಸೂಚನೆ ನೀಡಿದ್ದಾರೋ ಎನ್ನುವ ಅನುಮಾನ ಜನರನ್ನು ಕಾಡುತ್ತಿವೆ’ ಎಂದು ಆರೋಪ ಮಾಡಿದರು.
ಗದಗ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಲಿಂಗರಾಜ ಪಾಟೀಲ ಮಲ್ಲಾಪೂರ, ಆರ್.ಕೆ.ಚವ್ಹಾಣ, ಗದಗ ನಗರ ಮಂಡಲ ಅಧ್ಯಕ್ಷ ಸುರೇಶ ಮರಳಪ್ಪನವರ, ಪ್ರಮುಖರಾದ ಅನೀಲ ಅಬ್ಬಿಗೇರಿ, ಶಶಿಧರ ದಿಂಡೂರ, ಅಮರನಾಥ ಗಡಗಿ, ಎಫ್.ಎಸ್.ಗೋಡಿ, ಮಂಜುನಾಥ ಶಾಂತಗೇರಿ, ಸುರೇಶ ಚಿತ್ತರಗಿ, ಶಂಕರ ಕಾಕಿ, ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಕ್ತಿ ಕತ್ತಿ, ಕಿರಣ ಕಲಾಲ, ಸಂತೋಷ ಜಾವೂರ, ಗ್ರಾಮೀಣ ಮಂಡಲ ಯುವ ಮೋರ್ಚಾ ಅಧ್ಯಕ್ಷ ಅರವಿಂದ ಅಣ್ಣಿಗೇರಿ, ನಗರಸಭಾ ಸದಸ್ಯರಾದ ವಿಜಯಲಕ್ಷ್ಮೀಮಿ ದಿಂಡೂರ, ವಿದ್ಯಾವತಿ ಗಡಗಿ, ಯುವ ಮೋರ್ಚಾ ರೋಣ ಮಂಡಲ ಅಧ್ಯಕ್ಷ ಹುಲ್ಲಪ್ಪ ಕೆಂಗಾರ ಸೇರಿದಂತೆ ಹಲವರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.