ADVERTISEMENT

ಸಾಲ ಮನ್ನಾ: ಗರಿಗೆದರಿದ ಅನ್ನದಾತರ ನಿರೀಕ್ಷೆ

ಮಳೆ ಕೊರತೆ; ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಸಾಲದ ಹೊರೆ; ಬಜೆಟ್‌ನತ್ತ ಚಿತ್ತ

​ಪ್ರಜಾವಾಣಿ ವಾರ್ತೆ
Published 4 ಜುಲೈ 2018, 17:53 IST
Last Updated 4 ಜುಲೈ 2018, 17:53 IST
ಗದಗ ತಾಲ್ಲೂಕಿನ ಹೊರವಲಯದಲ್ಲಿ ಬೆಳೆದು ನಿಂತಿರುವ ಹೆಸರು ಬೆಳೆ ಮಳೆ ಕೊರತೆಯಿಂದ ಬಾಡುತ್ತಿದೆ. ಇನ್ನೊಂದು ವಾರದಲ್ಲಿ ಮಳೆಯಾಗದಿದ್ದರೆ ರೈತರಿಗೆ ಈ ಬಾರಿಯೂ ತೀವ್ರ ಆರ್ಥಿಕ ಹಾನಿಯಾಗಲಿದೆ – ಸಾಂದರ್ಭಿಕ ಚಿತ್ರ
ಗದಗ ತಾಲ್ಲೂಕಿನ ಹೊರವಲಯದಲ್ಲಿ ಬೆಳೆದು ನಿಂತಿರುವ ಹೆಸರು ಬೆಳೆ ಮಳೆ ಕೊರತೆಯಿಂದ ಬಾಡುತ್ತಿದೆ. ಇನ್ನೊಂದು ವಾರದಲ್ಲಿ ಮಳೆಯಾಗದಿದ್ದರೆ ರೈತರಿಗೆ ಈ ಬಾರಿಯೂ ತೀವ್ರ ಆರ್ಥಿಕ ಹಾನಿಯಾಗಲಿದೆ – ಸಾಂದರ್ಭಿಕ ಚಿತ್ರ   

ಗದಗ: ಎರಡು ವರ್ಷಗಳ ಬಳಿಕ ಇತ್ತೀಚೆಗಷ್ಟೇ ಇನ್‌ಪುಟ್‌ ಸಬ್ಸಿಡಿ ಭಾಗ್ಯ ಪಡೆದಿರುವ ಜಿಲ್ಲೆಯ ರೈತರು, ಇದೀಗ ಸಾಲ ಮನ್ನಾದ ಬಹುದೊಡ್ಡ ನಿರೀಕ್ಷೆಯಲ್ಲಿದ್ದಾರೆ. ಎಲ್ಲರ ಚಿತ್ತ ಜೂನ್‌ 5ರಂದು ಮಂಡನೆಯಾಗಲಿರುವ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಸರ್ಕಾರದ ಬಜೆಟ್‌ನತ್ತ ನೆಟ್ಟಿದೆ.

ಸತತ ಬರ ಮತ್ತು ಮಳೆ ಕೊರತೆಯಿಂದಾಗಿ, ಜಿಲ್ಲೆಯ ರೈತರ ಸಾಲದ ಹೊರೆಯೂ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಜಿಲ್ಲೆಯ 164 ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ಕಳೆದ 5 ವರ್ಷಗಳಲ್ಲಿ 10,392 ರೈತರು ಪಡೆದಿರುವ ₨26.74 ಕೋಟಿ ಸಾಲವನ್ನು ಮರು ಪಾವತಿಸಿಲ್ಲ.

‘ಜಿಲ್ಲೆಯಲ್ಲಿ ಫಸಲ್‌ ಬೀಮಾ ವಿಮಾ ಯೋಜನೆಗೆ ನೋಂದಣಿ ಮಾಡಿಕೊಂಡಿರುವ ರೈತರಲ್ಲಿ ಶೇ 90ರಷ್ಟು ಮಂದಿ ಬ್ಯಾಂಕುಗಳಿಂದ ಕೃಷಿ ಸಾಲ ಪಡೆದುಕೊಂಡಿದ್ದಾರೆ. ಮುಂಗಾರು ವೈಫಲ್ಯದಿಂದ ರೈತರ ಸಾಲದ ಹೊರೆ ವರ್ಷದಿಂದ ಏರುತ್ತಿದೆ’ ಎಂದು ಕೃಷಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ADVERTISEMENT

‘ಸಾಲ ಮನ್ನಾ ಆಗುತ್ತದೆ ಎಂಬ ನಿರೀಕ್ಷೆಯಿಂದ ರೈತರು, ಸಾಲ ಮರು ಪಾವತಿ ಮಾಡುವುದನ್ನೇ ನಿಲ್ಲಿಸಿದ್ದಾರೆ. ಸಾಲ ಮನ್ನಾ ಆದರೆ, ರೈತರಿಗೆ ಮಾತ್ರವಲ್ಲ, ಬ್ಯಾಂಕುಗಳಿಗೂ ದೊಡ್ಡ ಮಟ್ಟದಲ್ಲಿ ಲಾಭವಿದೆ. ವಸೂಲಾಗದ ಸಾಲದ ಪ್ರಮಾಣದ (ಎನ್‌ಪಿಎ) ಹೊರೆಯಿಂದ ಬ್ಯಾಂಕುಗಳೂ ಪಾರಾಗಬಹುದು’ ಎಂದು ಹೆಸರು ಹೇಳಲು ಇಚ್ಛಿಸದ ರಾಷ್ಟ್ರೀಕೃತ ಬ್ಯಾಂಕೊಂದರ ಶಾಖಾ ವ್ಯವಸ್ಥಾಪಕರು ಅಭಿಪ್ರಾಯಪಟ್ಟರು.

‘ಸಹಕಾರಿ ಬ್ಯಾಂಕ್‌ಗಳಲ್ಲಿನ ಸಾಲ ಮಾತ್ರವಲ್ಲ, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಮಾಡಿರುವ ಕೃಷಿ ಸಾಲ ಸೇರಿದಂತೆ ಎಲ್ಲ ರೀತಿಯ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು’ ಎಂದು ರೈತ ಸೇನೆ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ಆಗ್ರಹಿಸಿದರು. ಈಗಾಗಲೇ ಮುಖ್ಯಮಂತ್ರಿ ಅವರಿಗೆ, ಮಹದಾಯಿ ಹೋರಾಟಗಾರರ ವತಿಯಿಂದ ಈ ಕುರಿತು ಮನವಿ ಸಲ್ಲಿಸಲಾಗಿದೆ’ ಎಂದು ಅವರು ಹೇಳಿದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ರೈತರು ಸಹಕಾರಿ ಸಂಘಗಳಲ್ಲಿ ಮಾಡಿದ್ದ ₹50 ಸಾವಿರ ವರೆಗಿನ ಸಾಲ ಮನ್ನಾ ಮಾಡಿದ್ದರು. ಇದರಿಂದ ಜಿಲ್ಲೆಯ 25,146 ರೈತರಿಗೆ ಪ್ರಯೋಜನವಾಗಿತ್ತು. 2017–-18ನೇ ಸಾಲಿನಲ್ಲಿ ಕೆಸಿಸಿ ಬ್ಯಾಂಕ್ ಅಧೀನದ ಸಹಕಾರಿ ಸಂಘಗಳಿಂದ 15,642 ರೈತರು ಕೋಟಿಗಟ್ಟಲೆ ಸಾಲ ಪಡೆದಿದ್ದಾರೆ. ಇದರಲ್ಲಿ ಶೇ 25ರಷ್ಟೂ ಮರು ಪಾವತಿಯಾಗಿಲ್ಲ.

‘ಹಿಂದಿನ ಕಾಂಗ್ರೆಸ್‌ ಸರ್ಕಾರ ಸಾಲ ಮನ್ನಾ ಮಾಡಿದ ಬಳಿಕ ರೈತರಿಗೆ ಹೊಸ ಬೆಳೆ ಸಾಲ ನೀಡಲಾಗಿಲ್ಲ’ ಎಂದು ಪಿಎಲ್‌ಡಿ ಬ್ಯಾಂಕ್‌ ಮೂಲಗಳು ತಿಳಿಸಿವೆ.

ಜಿಲ್ಲೆಯ ಒಟ್ಟು ಕೃಷಿ ಸಾಲದ ಕುರಿತು ಆಯಾ ಬ್ಯಾಂಕ್‌ ಶಾಖೆಗಳಿಂದ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಬಜೆಟ್‌ ನಂತರವೇ ಸಾಲ ಮನ್ನಾದ ಸ್ಪಷ್ಟ ಚಿತ್ರಣ ಲಭಿಸಲಿದೆ
- ಕೆ. ಜಗದೀಶರಾವ್‌,ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.