
ಲಕ್ಷ್ಮೇಶ್ವರ: ‘ಶಿಕ್ಷಣ ಹಾಗೂ ಉತ್ತಮ ಸಂಸ್ಕಾರದಿಂದ ಮಾತ್ರ ಸಮಾಜದ ಅಭಿವೃದ್ಧಿ. ವಾಲ್ಮೀಕಿ ಸಮುದಾಯದವರು ತಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕು’ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.
ಪಟ್ಟಣದ ತೇರಿನ ಮನೆ ಆವರಣದಲ್ಲಿ ತಾಲ್ಲೂಕು ಮಹರ್ಷಿ ವಾಲ್ಮೀಕಿ ನಾಯಕ ವಿವಿದೋದ್ಧೇಶಗಳ ಸಂಘ ವತಿಯಿಂದ ಸೋಮವಾರ ಜರುಗಿದ ಮಹರ್ಷಿ ವಾಲ್ಮೀಕಿ ಹಾಗೂ ವೀರ ಮದಕರಿ ನಾಯಕ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದ ಅವರು, ‘ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನ ಭಾರತೀಯರ ಬದುಕಿನಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಿವೆ’ ಎಂದರು.
ಯಡಿಯೂರಪ್ಪನವರು ತಮ್ಮ ಅಧಿಕಾರವಧಿಯಲ್ಲಿ ಸರ್ಕಾರ ಮಟ್ಟದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಗೆ ಚಾಲನೆ ನೀಡಿದ್ದರು. ನಾನು ಸಚಿವನಾದ ವೇಳೆ ಎಸ್‍ಟಿ ಸಮುದಾಯ ಮೀಸಲಾತಿಯನ್ನು ಶೇ.7ಕ್ಕೆ ಹೆಚ್ಚಿಸಿದ್ದೇನೆ. ಇದಕ್ಕೆ ರಾಜನಹಳ್ಳಿ ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಅವರ ಬೆಂಬಲವಿತ್ತು. ‘ರಾಜ್ಯ ಸರ್ಕಾರ ವಾಲ್ಮೀಕಿ ನಿಗಮದ ₹187 ಕೋಟಿ ಹಣದಲ್ಲಿ ಭ್ರಷ್ಟಾಚಾರ ನಡೆಸಿದೆ’ ಎಂದು ಆರೋಪಿಸಿದರು.
ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ‘ಸಮಾಜದಲ್ಲಿ ಇನ್ನೂ ಬಾಲ್ಯ ವಿವಾಹ ನಡೆಯುತ್ತಿದ್ದು, ಇದಕ್ಕೆ ಶಿಕ್ಷಣದ ಕೊರತೆಯೇ ಪ್ರಮುಖ ಕಾರಣ. ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಸಮಾಜಕ್ಕೆ ಉಪಯೋಗ ಆಗುತ್ತಿಲ್ಲ. ರಾಜ್ಯ ಸರ್ಕಾರ ಸತೀಶ ಜಾರಕಿಹೊಳಿ ಅವರನ್ನು ಮುಖ್ಯಮಂತ್ರಿ ಮಾಡಿದರೆ ನಮ್ಮ ಸಮಾಜಕ್ಕೆ ಖುಷಿ ಆಗುತ್ತದೆ’ ಎಂದು ತಿಳಿಸಿದರು.
ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಮಾತನಾಡಿ, ‘ವಾಲ್ಮೀಕಿ ಸಮಾಜ ಧೈರ್ಯ, ಸಾಹಸ, ಶೌರ್ಯಕ್ಕೆ ಹೆಸರಾಗಿದೆ. ವಾಲ್ಮೀಕಿ ಸಮುದಾಯ ತಮ್ಮಲ್ಲಿನ ವೈಮನಸ್ಸುಗಳನ್ನು ಮರೆತು ಸಮಾಜ ಕಟ್ಟಲು ಮುಂದಾಗಬೇಕು. ರಾಜಕೀಯವಾಗಿ ಸಾಕಷ್ಟು ಪ್ರಬುದ್ಧತೆ ಪಡೆದ ನಾಯಕರು ವಾಲ್ಮೀಕಿ ಸಮಾಜದಲ್ಲಿದ್ದಾರೆ. ಅವರಿಗೆ ಸೂಕ್ತ ಪ್ರಾತಿನಿಧ್ಯ ಸಿಗದ ಕಾರಣ ಸಮುದಾಯದವರು ಒಗ್ಗಟ್ಟಾಗಿ ಹಕ್ಕುಗಳ ಪ್ರತಿಪಾದನೆಗೆ ಪ್ರಯತ್ನಿಸಬೇಕು’ ಎಂದು ಹೇಳಿದರು.
ತಾಲ್ಲೂಕು ಮಹರ್ಷಿ ವಾಲ್ಮೀಕಿ ನಾಯಕ ವಿವಿದೋದ್ಧೇಶಗಳ ಸಂಘದ ಅಧ್ಯಕ್ಷ ಭೀಮಣ್ಣ ಯಂಗಾಡಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಡಾ.ಚಂದ್ರು ಲಮಾಣಿ, ಮಾಜಿ ಶಾಸಕ ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಆನಂದಸ್ವಾಮಿ ಗಡ್ಡದೇವರಮಠ ಮಾತನಾಡಿದರು.
ಈ ವೇಳೆ ಸಣ್ಣವೀರಪ್ಪ ಹಳ್ಳೆಪ್ಪನವರ, ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರ್ಗಣ್ಣವರ, ಸುನಿಲ ಮಹಾಂತಶೆಟ್ಟರ, ಪಂಚ ಗ್ಯಾರಂಟಿ ಯೋಜನೆಗಳ ತಾಲ್ಲೂಕು ಅಧ್ಯಕ್ಷ ನಾಗರಾಜ ಮಡಿವಾಳರ, ಸಂಘದ ಕಾರ್ಯದರ್ಶಿ ಹನಮಂತ ಜಾಲಿಮರದ, ನಾಗರಾಜ ಕುಲಕರ್ಣಿ, ಫಕ್ಕೀರೇಶ ಮ್ಯಾಟಣ್ಣವರ, ರಾಜು ಓಲೇಕಾರ, ಮಂಜುನಾಥ ಮಾಗಡಿ ಮತ್ತಿತರರು ಇದ್ದರು. ಕೆ.ಎನ್. ಪ್ರಭುರಾಜ ಉಪನ್ಯಾಸ ನೀಡಿದರು. ಬಸವರಾಜ ಗಳಗನಾಥ, ದೊಡ್ಡಪ್ಪ ವಾಲ್ಮೀಕಿ ನಿರೂಪಿಸಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನೆಪಕ್ಕೆ ಮಾತ್ರ ಹಿಂದುಳಿದ ಸಮುದಾಯದ ವಿಷಯ ಮುನ್ನೆಲೆಗೆ ತಂದಿದ್ದಾರೆ. ಹಿಂದುಳಿದ ನಾಯಕರನ್ನೇ ಮುಖ್ಯಮಂತ್ರಿ ಮಾಡುವ ಉದ್ಧೇಶ ಇದ್ದರೆ ಸತೀಶ ಜಾರಕಿಹೊಳಿ ಅವರನ್ನು ಆಯ್ಕೆ ಮಾಡಲಿ.–ಬಿ. ಶ್ರೀರಾಮುಲು ಮಾಜಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.