ಗದಗ: ಪ್ರವಾದಿ ಮುಹಮ್ಮದ್ ಪೈಗಂಬರ್ ಜನ್ಮದಿನದ ಪ್ರಯುಕ್ತ ಗದಗ ಬೆಟಗೇರಿ ಅವಳಿ ನಗರದ ಮುಸ್ಲಿಮರು ಶುಕ್ರವಾರ ಈದ್ ಮಿಲಾದ್ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದರು.
ಶುಕ್ರವಾರ ಬೆಳಿಗ್ಗೆಯೇ ಮುಸ್ಲಿಮರು ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಯುವಕರು ಹಾಗೂ ಮಕ್ಕಳು ಹೊಸ ಬಟ್ಟೆ ಧರಿಸಿ, ಧಾರ್ಮಿಕ ಧ್ವಜಗಳನ್ನು ಹಿಡಿದು ಮೆರವಣಿಗೆ ಮಾಡಿದರು. ಮೆರವಣಿಗೆಯುದ್ದಕ್ಕೂ ಮಕ್ಕಳು, ಹಿರಿಯರು ಘೋಷಣೆಗಳನ್ನು ಕೂಗಿದರು.
ಈದ್ ಮಿಲಾದ್ ಅಂಗವಾಗಿ ನಗರದ ವಿವಿಧೆಡೆಗಳಲ್ಲಿ ಮುಸ್ಲಿಮರು ಸಾರ್ವಜನಿಕರಿಗೆ ಫಲೂದಾ, ಪಾಯಸ, ಬಾಳೆಹಣ್ಣು ಸೇರಿದಂತೆ ವಿವಿಧ ತಿನಿಸುಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಂಚುತ್ತಿದ್ದ ದೃಶ್ಯಗಳು ಕಂಡು ಬಂದವು.
ನಗರದ ಹಳೆ ಬಸ್ ನಿಲ್ದಾಣದ ಎದುರಿನಲ್ಲಿರುವ ಉರ್ದು ಶಾಲಾ ಮೈದಾನದಲ್ಲಿ ಈದ್ ಮಿಲಾದ್ ಸಭಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
‘ಜಗತ್ತಿಗೆ ಶಾಂತಿಯ ಸಂದೇಶ ಸಾರಿದ ಪ್ರವಾದಿ ಮಹ್ಮದ್ ಪೈಗಂಬರ ಅವರ ಜೀವನ ಆದರ್ಶಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಆಳವಡಿಸಿಕೊಳ್ಳಬೇಕು’ ಎಂದು ಮುಸ್ಲಿಂ ಧರ್ಮಗಳು ಸಂದೇಶ ನೀಡಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್‌ಸಾಬ ಬಬರ್ಚಿ ಕಾರ್ಯಕ್ರಮ ಉದ್ಘಾಟಿಸಿದರು. ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು ಸಾನ್ನಿಧ್ಯ ವಹಿಸಿದ್ದರು.
ಮೌಲಾನ ಮುಫ್ತಿ ಮಹಮ್ಮದ ನಿಜಾಮುದ್ದೀನ್ ಕಾಸ್ತಿ ಉಪನ್ಯಾಸ ನೀಡಿದರು. ಮೌಲಾನ ಇನಾಯಿತುಲ್ಲಾಸಾಬ ಪೀರ್‌ಜಾದೆ ಹಾಗೂ ರಜಾಕ್ ಡಕೇದ, ಮೌಲಾನ ಅಬ್ದುಲ್ ರಹೀಮ ಚಂದುನವರು ಪ್ರಾರ್ಥನೆ ಮಾಡಿದರು.
ಉಸ್ಮಾನ್ ಮಾಳೇಕೊಪ್ಪ, ಆರೀಫ್ ಹುನಗುಂದ, ಶೌಕತ್ ಅಣ್ಣಿಗೇರಿ, ಅಶ್ಪಾಕ್‌ಅಲಿ ಹೊಸಳ್ಳಿ, ಶೌಕತ್‌ಅಲಿ ಕಾತರಕಿ, ಇಮಾಮ್‌ಸಾಬ ನಮಾಜಿ, ತೌಸಿಫ್ ಢಾಲಾಯತ, ಜಾಕೀರ್ ಬಾಗಲಕೋಟ, ಅಕ್ಬರ್ ಅತ್ತಾರ, ಅಬ್ದುಲ್ ಉಮಚಗಿ, ಹನೀಫ್ ಮುಳಗುಂದ, ಮೆಹಬೂಬಸಾಬ ರೋಣ, ಅನ್ವರ್ ಈಟಿ, ಸಲೀಮ್ ಬಳ್ಳಾರಿ ಇದ್ದರು.
ಜನಾಬ ಮಹಮ್ಮದಶಫಿ ಯರಗುಡಿ ನಿರೂಪಣೆ ಮಾಡಿದರು. ಭಾಷಾಸಾಬ ಮಲ್ಲಸಮುದ್ರ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಬಡ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ವಿತರಣೆ, ಸಾಧಕರಿಗೆ ಸನ್ಮಾನ ಹಾಗೂ ರಕ್ತದಾನ ಶಿಬಿರ ನಡೆಯಿತು. ಬಳಿಕ ಅನ್ನ ಸಂತರ್ಪಣೆ ನಡೆಯಿತು.
ಪೊಲೀಸ್ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಕಲ್ಪಿಸುವ ಜತೆಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.