ನರಗುಂದ: ಅತಿವೃಷ್ಟಿ ಹಾಗೂ ಪ್ರವಾಹದಿಂದ ರೈತರು ತೀವ್ರ ತೊಂದರೆಗೆ ಒಳಗಾಗಿದ್ದಾರೆ. ಸಹಕಾರ ಬ್ಯಾಂಕ್ ಹಾಗೂ ಬ್ಯಾಂಕ್‌ಗಳಲ್ಲಿನ ರೈತರ ಬೆಳೆಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಹಸಿರು ಸೇನೆ ಸದಸ್ಯ ಬಸವರಾಜ ಸಾಬಳೆ ನೇತೃತ್ವದಲ್ಲಿ ಮಿನಿ ವಿಧಾನಸೌಧ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಶ್ರೀಶೈಲ ತಳವಾರ ಅವರಿಗೆ ಮನವಿ ಸಲ್ಲಿಸಿದರು.
ಬಸವರಾಜ ಸಾಬಳೆ ಮಾತನಾಡಿ, ‘ರೈತರ ಸಂಕಷ್ಟವನ್ನು ಸರ್ಕಾರಗಳು ಕೇಳುತ್ತಿಲ್ಲ. ಅತಿವೃಷ್ಟಿಯಿಂದಾಗಿ ರೈತರ ಬದುಕು ಬೀದಿಗೆ ಬಂದಿದೆ. ಹೆಸರು ಬೆಳೆಗೆ ಅಪಾರ ಪ್ರಮಾಣದ ಹಾನಿಯಾಗಿದ್ದು, ಗೋವಿನಜೋಳ, ಹತ್ತಿ ಬೆಳೆಗಳಿಗೂ ಹಾನಿಯಾಗುವ ಭೀತಿ ರೈತರನ್ನು ಕಾಡುತ್ತಿದೆ. ಆದ್ದರಿಂದ ರೈತರ ಬೆಳೆ ಸಾಲವನ್ನು ಸಂಪೂರ್ಣ ಮನ್ನಾ ಹಾಗೂ ಬೆಳೆವಿಮೆ ಹಣವನ್ನು ರೈತರ ಖಾತೆಗಳಿಗೆ ಜಮಾ ಮಾಡಬೇಕು. ಬೆಳೆಹಾನಿ ಪರಿಹಾರವಾಗಿ ಎಕರೆಗೆ ಕನಿಷ್ಠ ₹50 ಸಾವಿರ ನೀಡಬೇಕು. ಇಲ್ಲವಾದರೆ ಅಹೋರಾತ್ರಿ ಹೋರಾಟ ಆರಂಭಿಸಬೇಕಾಗುತ್ತದೆ’ ಎಂದು ಹೇಳಿದರು.
ಈ ವೇಳೆ ಚನ್ನು ನಂದಿ, ಮನೋಹರ ಹುಯಿಲಗೋಳ, ವಿಠ್ಠಲ ಜಾಧವ, ಎಸ್.ಎಸ್. ಪಾಟೀಲ, ಮೈಲಾರಪ್ಪ ಬಾರಕೇರ, ನಬೀಸಾಬ ಕಿಲ್ಲೆದಾರ ಹಾಗೂ ರೈತ ಸಂಘದ ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.