
ಲಕ್ಷ್ಮೇಶ್ವರ (ಆದಿಕವಿ ಪಂಪ ವೇದಿಕೆ): ಕನ್ನಡ ನಾಡಿಗೆ ಕರ್ನಾಟಕ ಎಂದು ನಾಮಕರಣವಾಗಲು ಗದಗ ಜಿಲ್ಲೆಯ ಕೊಡುಗೆ ಅಪಾರವಾಗಿದ್ದು, ರೋಣ ತಾಲೂಕಿನ ಹಿರಿಯ ಸ್ವಾತಂತ್ರ ಹೋರಾಟಗಾರ ಅಂದಾನೆಪ್ಪ ದೊಡ್ಡಮೇಟಿಯವರ ಕರ್ನಾಟಕ ಎಂದು ನಾಮಕರಣ ಮಾಡುವ ನಿಟ್ಟಿನಲ್ಲಿ ಪ್ರಮುಖ ರೂವಾರಿಗಳಾಗಿದ್ದರು ಎಂದು ಶಿರಹಟ್ಟಿ-ಬಾಲೇಹೊಸೂರು ಸಂಸ್ಥಾನಪೀಠದ ಜ.ಫಕೀರ ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ಯಳವತ್ತಿ ಗ್ರಾಮದಲ್ಲಿ ಶನಿವಾರ ಲಕ್ಷ್ಮೇಶ್ವರ ತಾಲ್ಲೂಕು ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದರು.
ಈಚಿನ ದಿನಗಳಲ್ಲಿ ಕನ್ನಡ ಮಾತನಾಡವವರ ಸಂಖ್ಯೆ ಕಡಿಯಾಗುತ್ತಿದೆ. ಆಳುವ ಸರಕಾರಗಳು ಕನ್ನಡ ಕಲಿತ ವಿದ್ಯಾರ್ಥಿಗಳಿಗೆ ಸರ್ಕಾರಿ ಉದ್ಯೋಗದಲ್ಲಿ ಪ್ರಥಮ ಆದ್ಯತೆ ನೀಡುವ ಕಾರ್ಯವಾಗಬೇಕು. ಅಂದಾಗ ಮಾತ್ರ ಕನ್ನಡ ಕಲಿಯುವವರ ಸಂಖ್ಯೆ ಹೆಚ್ಚುತ್ತದೆ. ಕನ್ನಡ ನಾಡಿನಲ್ಲಿ ಕನ್ನಡ ನಾಶವಾಗುತ್ತಿರುವುದು ನೋವಿನ ಸಂಗತಿಯಾಗಿದೆ ಎಂದರು.
ಮೊದಲು ಕನ್ನಡದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು, ಸಂಸತ್ತಿನಲ್ಲಿ ಮೊದಲು ಕನ್ನಡ ಭಾಷೆಯಲ್ಲಿ ಮಾತನಾಡಿದ ಕೀರ್ತಿ ಜೆ.ಎಚ್.ಪಟೇಲರಿಗೆ ಸಲ್ಲುತ್ತದೆ. ಅಲ್ಲದೇ ದಿ.ಇಂದಿರಾಗಾಂಧಿ ಅವರ ಎದುರಿಗೆ ಕುಳಿತು ಕನ್ನಡದಲ್ಲಿಯೆ ತನ್ನ ಅಭಿಪ್ರಾಯ ಮಂಡಿಸಿದ ಕೀರ್ತಿಯೂ ಸಹ ಏನು ಕಲಿಯಲಾರದ ವ್ಯಕ್ತಿ ದಿ.ಗೂಳಪ್ಪ ಉಪನಾಳ ಅವರದ್ದಾಗಿದೆ. ಇದು ಕನ್ನಡದ ಶಕ್ತಿಯಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಹಾಗೂ ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ ಚಂದ್ರು ಲಮಾಣಿ ಮಾತನಾಡಿ, ಕನ್ನಡ ಉಳಿದಿರುವುದು ಗ್ರಾಮೀಣ ಭಾಗದಲ್ಲಿ ಮಾತ್ರ. ಸಾವಿರಾರು ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಕನ್ನಡ ಭಾಷೆಯ ಬಗ್ಗೆ ಜನರಲ್ಲಿ ಇರುವ ಕೀಳುರಿಮೆ ಕಡಿಮೆಯಾಗಬೇಕು. ಕನ್ನಡ ಭಾಷೆ ಬಗ್ಗೆ ಅಭಿಮಾನವಿರಬೇಕು. ಕನ್ನಡ ಸಮ್ಮೇಳನ ಮಾಡುವ ಉದ್ದೇಶ ಕನ್ನಡದ ಮಹತ್ವವನ್ನು ಪ್ರತಿಯೊಬ್ಬರಿಗೆ ತಿಳಿಯುವಂತೆ ಮಾಡುವುದು. ಪ್ರತಿ ವರ್ಷ ಸಮ್ಮೇಳನ ನಡೆಯುವಂತಾಗಬೇಕು. ಇದಕ್ಕೆ ಪ್ರತಿಯೊಬ್ಬ ಕನ್ನಡಿಗರು ಕೈಜೋಡಿಸಬೇಕಾಗಿದೆ ಎಂದರು.
ತಾಲ್ಲೂಕು ವ್ಯಾಪ್ತಿಯಲ್ಲಿ ಗ್ರಾಮೀಣ ಭಾಗದಲ್ಲಿ ಸಮ್ಮೇಳನಗಳು ಪ್ರತಿವರ್ಷ ನಡೆದು ಮಹತ್ವ ತಿಳಿಸುವ ಕಾರ್ಯವಾಗಲಿ. ಲಕ್ಷ್ಮೇಶ್ವರದಲ್ಲಿ ಕಸಾಪ ಭವನ ಅರ್ಧಕ್ಕೆ ನಿಂತಿದೆ. ಅದನ್ನು ಪೂರ್ಣಗೊಳಿಸಲು ಎಲ್ಲ ಪ್ರಯತ್ನ ಮಾಡಲಾಗುವುದು ಎಂದರು.
ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ ಮಾತನಾಡಿ, ಎಲ್ಲಿ ಕನ್ನಡ ಉಳಿಯಬೇಕಾಗಿದೆಯೋ ಅಲ್ಲಿ ಕನ್ನಡ ಉಳಿಯುತ್ತಿಲ್ಲ. ಅಡುಗೆ ಮನೆಯಿಂದ ಆಡಳಿತವರೆಗೂ ಕನ್ನಡ ಉಳಿಸಿದವರು ಹೆಣ್ಣುಮಕ್ಕಳು. ಕನ್ನಡ ಭಾಷೆ ಉಳಿಯಬೇಕು ನಮ್ಮ ಸಂಸ್ಕೃತಿ ಉಳಿಯಬೇಕಾಗಿದೆ. ಗದಗ ಜಿಲ್ಲೆಯು ಕನ್ನಡ ನಾಡಿಗೆ ನೀಡಿದ ಕೊಡುಗೆಯಲ್ಲಿ ಕುಮಾರವ್ಯಾಸ, ಪಂಪ, ಪಂ.ಭೀಮಸೇನ ಜೋಶಿ, ಪಂ.ಪುಟ್ಟರಾಜ ಕವಿಗವಾಯಿಗಳು ಹೀಗೆ ಜಿಲ್ಲೆಯ ಕೊಡುಗೆ ಕನ್ನಡಕ್ಕೆ ಅಪಾರವಾಗಿದೆ ಎಂದು ಹೇಳಿದರು. ವಿಧಾನಪರಿಷತ ಸದಸ್ಯ ಪ್ರೊ.ಎಸ್.ವಿ.ಸಂಕನೂರ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಆಶಯ ನುಡಿ ನುಡಿದರು. ನಿಕಟಪೂರ್ವ ಅಧ್ಯಕ್ಷ ನೀಲಗಿರಿ ತಳವಾರ, ಟಿ ಈಶ್ವರ, ಪಕ್ಷಿ ಪ್ರೇಮಿ ಪ್ರಕಾಶ ಗೌಡರ, ಗ್ಯಾರಂಟಿ ಸಮಿತಿ ಅಧ್ಯಕ್ಷ ನಾಗರಾಜ ಮಡಿವಾಳರ, ಮಾತನಾಡಿದರು. ಸರ್ವಾಧ್ಯಕ್ಷೆ ಲಲಿತಕ್ಕ ಕೆರಿಮನಿ ಮಾತನಾಡಿದರು.
ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಗೀತಾ ಭೀರಣ್ಣವರ, ಎಸ್.ಪಿ.ಬಳಿಗಾರ, ಎಂ.ಎಸ್.ದೊಡ್ಡಗೌಡ್ರ, ರಾಜು ಕುರಡಗಿ, ಪ್ರೋ ಎಸ್ ಬಿ ಕರಿಭರಮಗೌಡರ, ಶಿವಪ್ರಕಾಶ ಲಿಂಬಯ್ಯಸ್ವಾಮಿಮಠ, ಬಸವೇಶ ಮಹಾಂತಶೆಟ್ಟರ, ಕೆ.ಎಸ್.ಕೊಡ್ಲಿವಾಡ, ಎಸ್ ಎಫ್ ಶಿಗ್ಲಿ, ಅಶೋಕ ಸೊರಟೂರ, ಎಸ್ ಪಿ ಬಳಿಗಾರ, ಶರಣು ಗೋಡಿ, ಮಂಜುನಾಥ ಮಾಗಡಿ, ಪುಲಿಕೆಶಿ ಉಪನಾಳ, ಡಿ.ಬಿ.ಬಳಿಗಾರ, ಫಕ್ಕೀರೇಶ ರಟ್ಟೀಹಳ್ಳಿ, ಫಕ್ಕೀರಗೌಡ್ರ ಪಾಟೀಲ, ಬಿಇಓ ಎಚ್ ನಾಣಕಿ ನಾಯ್ಕ, ಸಿಡಿಪಿಓ ಮೃತ್ಯುಂಜಯ ಗುಡ್ಡದಅನ್ವೇರಿ, ಎಸ್.ಎಫ್.ಶಿಗ್ಲಿ, ಲೋಹಿತ ನೆಲವಿಗಿ, ಮುಂತಾದವರಿದ್ದರು. ಕಸಾಪ ತಾಲೂಕ ಅಧ್ಯಕ್ಷ ಈಶ್ವರ ಮೆಡ್ಲೇರಿ ಸ್ವಾಗತಿಸಿದರು, ರತ್ನಾ ಕುಂಬಾರ, ಸೋಮಶೇಖರ ಪಾಟೀಲ್, ಆರ್.ಎಸ್.ಗಾಣಗೇರ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.