
ನೂತನ ರೈಲು ಮಾರ್ಗ ಮಂಜೂರಾತಿಗೆ ಆಗ್ರಹಿಸಿ ಡಿ.9ರಂದು ಮುಂಡರಗಿಯಿಂದ ಕೈಗೊಂಡಿರುವ ದೆಹಲಿ ಚಲೋ ಪ್ರತಿಭಟನೆಯ ಮನವಿ ಪತ್ರವನ್ನು ಕಾರ್ಯಕರ್ತರು ತಹಶೀಲ್ದಾರರಿಗೆ ನೀಡಿದರು
ಮುಂಡರಗಿ: ‘ದೆಹಲಿ ರೈಲ್ವೆ ಬೋರ್ಡಿನವರ ಅವೈಜ್ಞಾನಿಕ ಸಮೀಕ್ಷೆಯಿಂದ ಗದಗ, ಮುಂಡರಗಿ, ಹೂವಿನಹಡಗಲಿ, ಹರಪನಹಳ್ಳಿ ನೂತನ ರೈಲು ಮಾರ್ಗ ಮಂಜೂರಾತಿಯು ವಿಳಂಬವಾಗುತ್ತಿದೆ. ಕೂಡಲೇ ದೆಹಲಿ ರೈಲ್ವೆ ಬೋರ್ಡ್ ತನ್ನ ತಮ್ಮ ಆಕ್ಷೇಪಣೆಯನ್ನು ಹಿಂದಕ್ಕೆ ಪಡೆಯಬೇಕು’ ಎಂದು ಗದಗ-ಹರಪನಹಳ್ಳಿ ರೈಲ್ವೆ ಮಾರ್ಗ ರಚನೆ ಜಂಟಿ ಕ್ರಿಯಾ ಸಮಿತಿಯ ಮುಖಂಡರಾದ ಬಸವರಾಜ ದೇಸಾಯಿ ಒತ್ತಾಯಿಸಿದರು.
ನೂತನ ರೈಲು ಮಾರ್ಗ ಮಂಜೂರಾತಿಗೆ ಆಗ್ರಹಿಸಿ ಡಿ.9ರಂದು ಕೈಗೊಂಡಿರುವ ದೆಹಲಿ ಚಲೋ ಪ್ರತಿಭಟನೆಯ ಮನವಿ ಪತ್ರವನ್ನು ತಹಶೀಲ್ದಾರ್ ಎರ್ರಿಸ್ವಾಮಿ.ಪಿ.ಎಸ್. ಅವರಿಗೆ ಗುರುವಾರ ಸಲ್ಲಿಸಿ ಅವರು ಮಾತನಾಡಿದರು.
2014ರ ಬಜೆಟ್‌ನಲ್ಲಿ ಗದಗ-ಹರಪನಹಳ್ಳಿ ನೂತನ ರೈಲ್ವೆ ಮಾರ್ಗ ಸಮೀಕ್ಷೆಗೆ ಮಂಜೂರಾತಿ ದೊರೆತಿತ್ತು. ಆದರೆ ದೆಹಲಿ ರೈಲ್ವೆ ಬೋರ್ಡಿನವರು ಗದಗ-ಹರಪನಹಳ್ಳಿ ಮಾರ್ಗಮಧ್ಯದಲ್ಲಿ ಕೇವಲ 94ಕೀ.ಮೀ. ಸಮೀಕ್ಷೆ ನಡೆಸಿ, ಅದಕ್ಕೆ ₹813.14ಕೋಟಿ ಖರ್ಚಾಗುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ತಿಳಿಸಿದ್ದರು. ಇಷ್ಟೊಂದು ಹಣ ವ್ಯಯಿಸುವುದು ಸಮಂಜಸವಲ್ಲ ಎಂದು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಇದರಿಂದ ಯೋಜನೆ ನನೆಗುದಿಗೆ ಬೀಳುವಂತಾಗಿದೆ ಎಂದು ಆರೋಪಿಸಿದರು.
ಮುಖಂಡ ಬಸವರಾಜ ನವಲಗುಂದ ಮಾತನಾಡಿ, ನೂತನ ರೈಲ್ವೆ ಯೋಜನೆಯಿಂದ ರೈಲ್ವೆ ಬೋರ್ಡಿಗೆ ನಷ್ಟವಾಗುತ್ತಿದೆ ಎಂಬ ವರದಿಯು ಸತ್ಯಕ್ಕೆ ದೂರವಾಗಿದ್ದು, ನೂತನ ರೈಲು ಮಾರ್ಗವು ಕೇವಲ ಗದಗ-ಹರಪನಹಳ್ಳಿಗೆ ಸಂಪರ್ಕ ಕಲ್ಪಿಸದೆ ಮುಂದೆ ಅದು ಅರಕೇರಿ ಮಾರ್ಗವಾಗಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸುತ್ತದೆ. ದೆಹಲಿ ರೈಲ್ವೆ ಬೋರ್ಡಿನವರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂ ದರು.
ಹಾವೇರಿಯ ಮಾಜಿ ಸಂಸದ ಶಿವಕುಮಾರ ಉದಾಸಿಯವರು ರೈಲು ಮಾರ್ಗ ಸಮೀಕ್ಷೆಯ ವರದಿಯನ್ನು ಮರು ಪರಿಶೀಲಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಈ ಹಿಂದೆ ಮನವಿ ಮಾಡಿಕೊಂಡಿದ್ದರು. ಆದರೂ ಸಮೀಕ್ಷಾ ವರದಿಯನ್ನು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಮೀನ, ಮೇಷ ಎಣಿಸುತ್ತಿದೆ ಎಂದು ಹರಿಹಾಯ್ದರು.
ಮುಖಂಡರಾದ ದ್ರುವಕುಮಾರ ಹೂಗಾರ, ನಜೀರಸಾಬ ಬೇಟಗೇರಿ, ಗಣೇಶ ಭರಮಕ್ಕನವರ, ದ್ಯಾಮಣ್ಣ ಮುಂಡವಾಡ ಉಪಸ್ಥಿತರಿದ್ದರು.
ದೆಹಲಿಯಲ್ಲಿ ಪ್ರತಿಭಟನೆ ಡಿ.11ರಂದು
ಗದಗ- ಹರಪನಹಳ್ಳಿ ನೂತನ ರೈಲು ಮಾರ್ಗದ ಸಮೀಕ್ಷೆಯನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿ ಡಿ.9ರಂದು ಮುಂಡರಗಿಯಿಂದ ಟಿಕೆಟ್ ರಹಿತ ದೆಹಲಿ ಚಲೋ ಪ್ರತಿಭಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ತಾಲ್ಲೂಕು ರೈಲ್ವೆ ಹೋರಾಟ ಸಮಿತಿ ಹಾಗೂ ಗದಗ-ಹರಪನಹಳ್ಳಿ ರೈಲ್ವೆ ಮಾರ್ಗ ರಚನೆಯ ಜಂಟಿ ಕ್ರಿಯಾ ಸಮೀತಿಗಳ ನೇತೃತ್ವದಲ್ಲಿ ಡಿ.11ರಂದು ಬೆಳ್ಳಿಗೆ 11ಗಂಟೆಗೆ ದೆಹಲಿಯ ಜಂತರ ಮಂತರನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ವಿವಿಧ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.