ADVERTISEMENT

ನೂಲುವ ಪುಳಕ; ಸೆಲ್ಫಿಯ ಸಂಭ್ರಮ

ಗ್ರಾಮೀಣಾಭಿವೃದ್ಧಿ, ಪಂಚಾಯತ್‌ ರಾಜ್‌ ವಿ.ವಿ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಕೃಷಿ ಪಾಠ, ಗಾಂಧಿ ಚಿಂತನೆ

ಸತೀಶ ಬೆಳ್ಳಕ್ಕಿ
Published 19 ಫೆಬ್ರುವರಿ 2021, 6:29 IST
Last Updated 19 ಫೆಬ್ರುವರಿ 2021, 6:29 IST
ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯದ ಸಾಬರಮತಿ ಆಶ್ರಮದಲ್ಲಿ ಚರಕದಲ್ಲಿ ನೂಲು ಮಾಡಿ ಸಂಭ್ರಮಿಸಿದ ವಿದ್ಯಾರ್ಥಿಗಳು
ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯದ ಸಾಬರಮತಿ ಆಶ್ರಮದಲ್ಲಿ ಚರಕದಲ್ಲಿ ನೂಲು ಮಾಡಿ ಸಂಭ್ರಮಿಸಿದ ವಿದ್ಯಾರ್ಥಿಗಳು   

ಗದಗ: ನಾಗಾವಿ ಗುಡ್ಡದ ಸೆರಗಿನ ಬೃಹತ್‌ ಜಾಗದಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯದ ಹೊಸ ಆವರಣ ನಿರ್ಮಾಣಗೊಳ್ಳುತ್ತಿದೆ. ಅಲ್ಲಿರುವ ಸಾಬರಮತಿ ಆಶ್ರಮ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗೆ ನೆರವಾಗುವುದರ ಜತೆಗೆ, ಸಾರ್ವಜನಿಕರಿಗೆ ಗಾಂಧಿ ಚಿಂತನೆ, ತತ್ವಾದರ್ಶಗಳ ಹುಗ್ಗಿಯನ್ನೂ ಉಣಬಡಿಸುತ್ತಿದೆ.

ಒಂದೂವರೆ ತಿಂಗಳ ಹಿಂದಿನಿಂದ ಇಲ್ಲಿ ‘ದೇಸಿ ಚಟುವಟಿಕೆ’ ನಡೆಯುತ್ತಿದೆ. ಕೈಮುಟ್ಟಿ ಕೆಲಸ ಮಾಡುವ ಪರಿಕಲ್ಪನೆಯೊಂದಿಗೆ ಕೃಷಿ ಪಾಠ, ಚರಕದಿಂದ ನೂಲುವ, ಗಾಂಧೀಜಿ ಅವರ ಪುಸ್ತಕಗಳನ್ನು ಅಧ್ಯಯನ ಮಾಡಿ ಪರಾಮರ್ಶಿಸುವ, ಚರ್ಚಿಸುವ ಅವಕಾಶಗಳನ್ನು ಕಲ್ಪಿಸಿ ಕೊಡಲಾಗುತ್ತಿದೆ.

‘ಆಶ್ರಮಕ್ಕೆ ಬರುವವರಿಗೆ ಚರಕದಿಂದ ನೂಲು ತೆಗೆಯುವಂತೆ ಪ್ರೋತ್ಸಾಹಿಸಲಾಗುತ್ತದೆ. ಸಾಬರಮತಿ ಆಶ್ರಮದಲ್ಲಿ ನಾಲ್ಕು ಚರಕಗಳು ಇದ್ದು, ಪ್ರತಿ ಶನಿವಾರ ಇಲ್ಲಿಗೆ ಬರುವ ವಿದ್ಯಾರ್ಥಿಗಳು ಅರ್ಧ ಗಂಟೆ ಕಾಲ ನೂಲುತ್ತಾರೆ. ಆಸಕ್ತಿ ಇರುವ ಸಾರ್ವಜನಿಕರಿಗೂ ನೂಲು ತೆಗೆಯಲು ಅವಕಾಶ ಮಾಡಿಕೊಡುತ್ತೇವೆ’ ಎನ್ನುತ್ತಾರೆ ಸಾಬರಮತಿ ಆಶ್ರಮದ ಸಂಚಾಲಕ ಪ್ರಕಾಶ್‌ ಮಾಚೇನಹಳ್ಳಿ.

ADVERTISEMENT

ದೇಸಿ ಚಟುವಟಿಕೆ ಪ್ರತಿ ಶನಿವಾರ ಬೆಳಿಗ್ಗೆ 10ರಿಂದ ಮಧ್ಯಾಹ್ನ 3.30ರವರೆಗೆ ನಡೆಯುತ್ತದೆ. ವಿಶ್ವವಿದ್ಯಾಲಯದ 25ರಿಂದ 30 ವಿದ್ಯಾರ್ಥಿಗಳು ಪ್ರತಿವಾರ ಭಾಗವಹಿಸುತ್ತಾರೆ. ಆಶ್ರಮಕ್ಕೆ ಬಂದ ವಿದ್ಯಾರ್ಥಿಗಳಿಗೆ ಗಾಂಧಿ ಪುಸ್ತಕವನ್ನು ಓದಲು ನೀಡಲಾಗುತ್ತದೆ. ಅದನ್ನು ಓದಿದ ವಿದ್ಯಾರ್ಥಿಗಳು ತಮ್ಮ ಬೌದ್ಧಿಕ ಮಟ್ಟಕ್ಕೆ ಅನುಗುಣವಾಗಿ ಪರಾಮರ್ಶಿಸುತ್ತಾರೆ. ಜತೆಗೆ ಗಾಂಧಿ ವಿಚಾರಧಾರೆಗಳಿಗೆ ಸಂಬಂಧಿಸಿದ ಒಂದು ವಿಷಯ ಸೂಚಿಸಿ, ಅದರ ಮೇಲೆ 40 ನಿಮಿಷ ಚರ್ಚೆ ನಡೆ
ಸುವ ಅವಕಾಶ ಮಾಡಿಕೊಡಲಾಗುತ್ತದೆ.

ಅಧ್ಯಯನ, ಪರಾಮರ್ಶೆ, ಶ್ರಮದಾನ, ಸ್ವಚ್ಛತೆ ದೇಸಿ ಚಟುವಟಿಕೆಯ ಪ್ರಮುಖ ಅಂಶಗಳಾಗಿವೆ. ಇಲ್ಲಿಗೆ ಬರುವ ವಿದ್ಯಾರ್ಥಿಗಳು ವಿಷಯ ಜ್ಞಾನ ಪಡೆದುಕೊಳ್ಳುವುದರ ಜತೆಗೆ ಶ್ರಮದಾನವನ್ನೂ ಮಾಡುತ್ತಾರೆ. ಉದ್ಯಾನಕ್ಕೆ ನೀರು ಹಾಯಿಸುವುದು, ಕಳೆ ತೆಗೆಯುವುದು, ಆಶ್ರಮದ ಒಳಗೆ ಪರಿಕರಗಳನ್ನು ಒಪ್ಪವಾಗಿ ಜೋಡಿಸಿಡುವುದನ್ನು ಮಾಡುತ್ತಾರೆ.

ಸೆಲ್ಫಿ ವಿತ್ ಆಶ್ರಮ

ಓದು, ಸಂವಾದ, ಶ್ರಮದಾನ ಮುಗಿದ ಬಳಿಕ ವಿದ್ಯಾರ್ಥಿಗಳು ಕಪ್ಪತಗುಡ್ಡದ (ನಾಗಾವಿ ಗುಡ್ಡ) ಚೆಲುವು ಆಸ್ವಾದಿಸುತ್ತಾರೆ. ಸ್ನೇಹಿತರೊಟ್ಟಿಗೆ ಸಂತಸದ ಕಾಲ ಕಳೆದು ಇಲ್ಲಿ ಕಾಣಿಸುವ ಸೂರ್ಯಾಸ್ತವನ್ನು ಎದೆಗಿಳಿಸಿಕೊಳ್ಳುತ್ತಾರೆ. ಸೂರ್ಯನ ಜತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಾರೆ.

‘ದೇಸಿ’ ಪ್ರಯೋಗದ ತಾಣ

‘ದೇಸಿ ಚಟುವಟಿಕೆಯ ಪ್ರಮುಖ ಭಾಗವಾಗಿ ವಿದ್ಯಾರ್ಥಿಗಳಿಗೆ ಕೃಷಿ, ಹೈನುಗಾರಿಕೆ, ಕರಕುಶಲತೆ ಬಗ್ಗೆ ತಿಳಿಸಿ ಕೊಡಲಾಗುತ್ತದೆ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳನ್ನು ಕೃಷಿಯೊಂದಿಗೆ ಸಮನ್ವಯಗೊಳಿಸುವುದು ಇದರ ಮೂಲ ಉದ್ದೇಶ. ವಿದ್ಯಾರ್ಥಿಗಳು ಪಡೆದಿರುವ ಗ್ರಾಮೀಣ ಪರಿಸರದ ಅನುಭವ ಹಾಗೂ ಕಂಡುಕೊಂಡಿರುವ ಪ್ರಯೋಗಗಳನ್ನು ಇಲ್ಲಿ ಅನುಷ್ಠಾನಗೊಳಿಸುತ್ತಾರೆ’ ಎಂದು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಬಸವರಾಜ ಎಲ್‌. ಲಕ್ಕಣ್ಣನವರ ತಿಳಿಸಿದರು.

ತಣಿದ ಕುತೂಹಲ; ಮೂಡಿದ ಒಗ್ಗಟ್ಟು

‘ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳಿಗಿಂತ ಗ್ರಾಮೀಣಾಭಿವೃದ್ಧಿ ವಿವಿ ಭಿನ್ನವಾಗಿದೆ. ನನಗೆ ಕೃಷಿ ಬಗ್ಗೆ ಆಸಕ್ತಿ ಇತ್ತು. ಅದರಲ್ಲೂ ಕಿಚನ್‌ ಗಾರ್ಡನಿಂಗ್‌ ಬಗ್ಗೆ ತಣಿಯದ ಕುತೂಹಲ. ಆದರೆ, ಮಾಹಿತಿ ಸಿಗುತ್ತಿರಲಿಲ್ಲ. ದೇಸಿ ಚಟುವಟಿಕೆ ನಮಗೆ ಪ್ರಾಯೋಗಿಕ ಅನುಭವದ ಜತೆಗೆ ಭರಪೂರ ಮಾಹಿತಿ ನೀಡುತ್ತಿದೆ. ತಂಡವಾಗಿ ಕೆಲಸ ಮಾಡುವುದರಿಂದ ವಿದ್ಯಾರ್ಥಿಗಳ ನಡುವೆ ಒಗ್ಗಟ್ಟು ಮೂಡಿದೆ’ ಎನ್ನುತ್ತಾರೆ ವಿದ್ಯಾರ್ಥಿನಿ ಅಶ್ವಿನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.