ADVERTISEMENT

ರಾಜೂರು ಗ್ರಾ.ಪಂ: ಪತ್ನಿ ಅಧ್ಯಕ್ಷೆಯಾದಾಗಿನಿಂದ ‘ನೀರುಗಂಟಿ’ ಆದ ಪತಿ..!

ರಾಜೂರು ಗ್ರಾಮ ಪಂಚಾಯ್ತಿಯ ಶೇಖಪ್ಪ ಮಳಗಿಯಿಂದ ಮಾದರಿ ಕಾರ್ಯ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2018, 13:07 IST
Last Updated 29 ನವೆಂಬರ್ 2018, 13:07 IST
ಗಜೇಂದ್ರಗಡ ಸಮೀಪದ ರಾಜೂರು ಗ್ರಾಮದಲ್ಲಿ ಕುಡಿಯುವ ನೀರು ಪೂರೈಸುವ ಪೈಪ್‌ಲೈನ್‌ ಒಡೆದಿರುವುದನ್ನು ಗ್ರಾಮ ಪಂಚಾಯ್ತಿ ಸಿಬ್ಬಂದಿ ಜತೆ ಸರಿಪಡಿಸುತ್ತಿರುವ ಶೇಖಪ್ಪ ಮಳಗಿ
ಗಜೇಂದ್ರಗಡ ಸಮೀಪದ ರಾಜೂರು ಗ್ರಾಮದಲ್ಲಿ ಕುಡಿಯುವ ನೀರು ಪೂರೈಸುವ ಪೈಪ್‌ಲೈನ್‌ ಒಡೆದಿರುವುದನ್ನು ಗ್ರಾಮ ಪಂಚಾಯ್ತಿ ಸಿಬ್ಬಂದಿ ಜತೆ ಸರಿಪಡಿಸುತ್ತಿರುವ ಶೇಖಪ್ಪ ಮಳಗಿ   

ಗಜೇಂದ್ರಗಡ: ಪತ್ನಿ ಅಧಿಕಾರದಲ್ಲಿದ್ದರೆ ಸಾಕು, ಅವರ ಹೆಸರಿನಲ್ಲಿ ಅಧಿಕಾರ ನಡೆಸುವ ಪತಿಯಂದಿರೇ ಹೆಚ್ಚು. ಆದರೆ, ಪತ್ನಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆಯಾದಾಗಿನಿಂದ, ಪತಿಯು ಗ್ರಾಮದ ‘ನೀರುಗಂಟಿ’ಯಾಗಿ ಹಾಗೂ ಬೀದಿದೀಪಗಳನ್ನು ನಿರ್ವಹಿಸುವ ‘ಲೈನ್‌ಮನ್‌’ಆಗಿ ಜನಸೇವೆ ಮಾಡುತ್ತಿದ್ದಾರೆ.

ಗಜೇಂದ್ರಗಡ ಸಮೀಪದ ರಾಜೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಲಲಿತಾ ಶೇಖಪ್ಪ ಮಳಗಿ ಅವರ ಪತಿ ಶೇಖಪ್ಪ ಮಳಗಿ ಅವರು, ಕಳೆದ 9 ತಿಂಗಳಿಂದ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನಿತ್ಯವೂ ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಶೇಖಪ್ಪ ಅವರು ಪಂಚಾಯ್ತಿ ಸಿಬ್ಬಂದಿಯೂ ಅಲ್ಲ ಸದಸ್ಯರೂ ಅಲ್ಲ. 2018ರ ಫೆಬ್ರುವರಿಯಲ್ಲಿ ಅವರ ಪತ್ನಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆಯಾಗಿ ಆಯ್ಕೆಯಾದರು.ಮರುದಿನದಿಂದಲೇ ಶೇಖಪ್ಪ ಅವರು ಗ್ರಾಮದ ಜನರ ಮೂಲಸೌಕರ್ಯ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸಲು ಮುಂದಾದರು.

ಗ್ರಾಮ ಪಂಚಾಯ್ತಿ ಸಿಬ್ಬಂದಿ ಇದ್ದರೂ, ಶೇಖಪ್ಪ ಅವರು ಪ್ರತಿ ದಿನ ಬೆಳಿಗ್ಗೆ ಬೈಕ್‌ ಏರಿ ಗ್ರಾಮದ ಎಲ್ಲ ಓಣಿಗಳಿಗೆ ಭೇಟಿ ನೀಡಿ, ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿದೆಯೇ ಎನ್ನುವುದನ್ನು ಪರಿಶೀಲಿಸುತ್ತಾರೆ. ಬೀದಿ ದೀಪಗಳ ನಿರ್ವಹಣೆ ಮಾಡಿಸುತ್ತಿದ್ದಾರೆ. ಪೌರಕಾರ್ಮಿರ ಜತೆಗೆ ತಾವೂ ಗಟಾರಗಳನ್ನು ಸ್ವಚ್ಚಗೊಳಿಸುತ್ತಾರೆ. ಗುತ್ತಿಗೆದಾರರು ಸಿಮೆಂಟ್‌ ರಸ್ತೆಗಳಿಗೆ ನೀರು ಹಾಕದಿದ್ದರೆ, ತಾವೇ ಸ್ವತಃ ಕೊಡ ಹಿಡಿದು ನೀರು ಹಾಕುತ್ತಾರೆ. ಮನೆ ಮನೆಗಳಿಗೆ ತೆರಳಿ, ನೀರಿನ ಅಪವ್ಯಯ ತಡೆಯುವಂತೆ ಜಾಗೃತಿ ಮೂಡಿಸುತ್ತಾರೆ.

ADVERTISEMENT

ಗ್ರಾಮದ ಬೀದಿ ದೀಪಗಳಿಗೆ ಎಲ್‌ಇಡಿ ಅಳವಡಿಸಿ, ಅವು ರಾತ್ರಿ ಮಾತ್ರ ಉರಿಯುವಂತೆ ಸ್ವಯಂಚಾಲಿತ ವ್ಯವಸ್ಥೆ ಅಳವಡಿಸಿದ್ದಾರೆ. ಇದರಿಂದ ಗ್ರಾಮ ಪಂಚಾಯ್ತಿಗೆ ವಿದ್ಯುತ್ ಶುಲ್ಕದ ಹೊರೆಯೂ ಗಣನೀಯವಾಗಿ ಕಡಿಮೆಯಾಗಿದೆ.

‘ನಾನು ಗ್ರಾಮ ಪಂಚಾಯ್ತಿ ಅಧ್ಯಕ್ಷೆಯಾದಾಗಿನಿಂದಲೂ ನಮ್ಮ ಯಜಮಾನರು ಗ್ರಾಮದಲ್ಲಿ ಬೀದಿ ದೀಪಗಳನ್ನು ನಿರ್ವಹಣೆ ಮಾಡಿಸುತ್ತಾ, ನೀರಿನ ಸಮಸ್ಯೆಯಾಗದಂತೆ ನೋಡಿಕೊಂಡು ಅಭಿವೃದ್ಧಿ ಕೆಲಸಗಳಿಗೆ ಸಹಕಾರ, ಸಲಹೆ ನೀಡುತ್ತಿದ್ದಾರೆ’ ಎಂದು ಎಂದು ಲಲಿತಾ ಶೇಖಪ್ಪ ಮಳಗಿ ಸಂತತ ವ್ಯಕ್ತಪಡಿಸಿದರು.

‘ಶೇಖಪ್ಪ ಅವರು ಗ್ರಾಮದ ಅಭಿವೃದ್ಧಿಗೆ ಮುತುವರ್ಜಿ ವಹಿಸಿದ್ದಾರೆ. ಗ್ರಾಮ ಪಂಚಾಯ್ತಿಗೆ ಹೆಚ್ಚಿನ ಅನುದಾನ ಲಭಿಸಿ, ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದರೆ ಇನ್ನೂ ಒಳ್ಳೆಯದಾಗುತ್ತದೆ’ ಎಂದು ಗ್ರಾಮಸ್ಥರಾದ ಕಳಕಪ್ಪ ಕಾತ್ರಾಳ, ಲಾಡಸಾಬ ವಸ್ತದ, ಜಗದೀಶ ಕಟ್ಟಿಮನಿ, ಗೈಬುಸಾಬ ರೋಣದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.