ADVERTISEMENT

ಚಾಕೊಲೆಟ್‌ ನಿಧಿ ಕಥೆ ಬಹಿರಂಗ; ಚಿನ್ನ ಹುಡುಕಿಕೊಂಡು ಹೋದವರಿಗೆ ಸಿಕ್ಕಿದ್ದು ಏನು?

ಚಿನ್ನ ಹುಡುಕಿಕೊಂಡು ಹೋದ ಪೊಲೀಸರಿಗೆ ಸಿಕ್ಕಿದ್ದು ಚಾಕೊಲೆಟ್‌!

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 3:16 IST
Last Updated 21 ಫೆಬ್ರುವರಿ 2026, 3:16 IST
ಚಿನ್ನದ ಬಣ್ಣದ ಹಾಳೆಯ ಚಾಕೊಲೆಟ್‌
ಚಿನ್ನದ ಬಣ್ಣದ ಹಾಳೆಯ ಚಾಕೊಲೆಟ್‌   

ಗದಗ: ‘ನಿಧಿ ಹುಡುಕಿಕೊಡುವುದಾಗಿ ಹೇಳಿ ಜನರನ್ನು ನಂಬಿಸಿ, ಹಣ ಪಡೆದು ಮೋಸ ಮಾಡಿ ಪರಾರಿಯಾಗಿದ್ದ ಹಜರತ್‌ ಮೌಲ್ವಿ ಎಂಬುವವನ್ನು ಉತ್ತರಾಖಂಡದ ಕಾಶಿಪುರದಿಂದ ಬಂಧಿಸಿ, ಕರೆತರಲಾಗಿದೆ’ ಎಂದು ಗದಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರೋಹನ್‌ ಜಗದೀಶ್‌ ತಿಳಿಸಿದ್ದಾರೆ.

ಧಾರವಾಡದ ಬಷೀರಾ ಬಾನು ಎಂಬುವವರಿಗೆ ಹಜರತ್‌ ಮೌಲ್ವಿ ನಿಧಿ ಆಸೆ ತೋರಿಸಿ ಅವರಿಂದ ಹಂತ ಹಂತವಾಗಿ ₹22 ಲಕ್ಷ ಪಡೆದು ವಂಚಿಸಿದ್ದಾನೆ ಎಂದು ಗದಗ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಫೆ.12ರಂದು ಪ್ರಕರಣ ದಾಖಲಾಗಿತ್ತು.

ಇದರ ಜಾಡು ಹಿಡಿದು ಹೊರಟ ಪೊಲೀಸರಿಗೆ ಜನರ ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಂಡು ಮೋಸ ಮಾಡುವ ಹಜರತ್‌ ಮೌಲ್ವಿ ಸಿಕ್ಕಿಬಿದ್ದಿದ್ದಾನೆ. ವಂಚಕನ ಚತುರ ನಡೆಗಳು ಪೊಲೀಸರನ್ನೇ ಚಕಿತಗೊಳಿಸಿವೆ.

ADVERTISEMENT

ಪ್ರಕರಣದ ಹಿನ್ನೆಲೆ: ಧಾರವಾಡದ ಬಷೀರಾ ಬಾನು ತನಗೆ ನಿಧಿ ಆಸೆ ತೋರಿಸಿ ಹಣ ಪಡೆದು ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ 2022ರ ಸೆಪ್ಟೆಂಬರ್‌ನಲ್ಲಿ ದೂರು ದಾಖಲಿಸಿದ್ದರು. ಆದರೆ, ಸಾಕ್ಷ್ಯಾಧಾರಗಳ ಕೊರತೆಯಿಂದ ಪ್ರಕರಣ ಅರ್ಧಕ್ಕೆ ನಿಂತುಹೋಗಿತ್ತು. ಅದಾದ ನಾಲ್ಕು ವರ್ಷಗಳ ಬಳಿಕ ಬಷೀರಾ ಬಾನು ಗದಗ ನಗರದ ಸಾಮಾಜಿಕ ಕಾರ್ಯಕರ್ತರೊಬ್ಬರ ಬಳಿ ಅಳಲು ತೋಡಿಕೊಂಡಿದ್ದರು.

ಆಗ ಅವರು, ‘ಸರ್ಕಾರಕ್ಕೆ ಸೇರಬೇಕಿದ್ದ ನಿಧಿ ಕಂಡವರ ಪಾಲಾಗಿದೆ. ತನಿಖೆ ನಡೆಸಿ’ ಎಂದು ಫೆ.12ರಂದು ಮತ್ತೊಂದು ದೂರು ದಾಖಲಿಸಿದ್ದರು. ಈ ವೇಳೆ ದೂರುದಾರರು, ಹಂಡೆಯಲ್ಲಿ ಚಿನ್ನ ಇರುವ ವಿಡಿಯೊವನ್ನು ಪೊಲೀಸರಿಗೆ ಸಾಕ್ಷ್ಯವಾಗಿ ನೀಡಿದ್ದರು. ಬಳಿಕ, ಮತ್ತೊಮ್ಮೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ಆರಂಭಿಸಿದ್ದರು.

ಪೊಲೀಸರು ಎಲ್ಲ ಮಾಹಿತಿ ಕಲೆಹಾಕಿ, ಅಂತಿಮವಾಗಿ ಹೋಗಿ ನಿಂತಿದ್ದು ಉತ್ತರಾಖಂಡದ ಹಜರತ್ ಮೌಲ್ವಿ ಎಂಬ ಚಾಣಾಕ್ಷ ವಂಚಕನ ಮನೆಮುಂದೆ. ಅವನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅದು ನಕಲಿ ಚಿನ್ನ ಎನ್ನುವ ಸತ್ಯ ಬಹಿರಂಗವಾಗಿದೆ.

ಶಾದಿ ಡಾಟ್‌ ಕಾಮ್‌ನಲ್ಲಿ ಪರಿಚಯ: ಹಜರತ್‌ ಮೌಲ್ವಿ ಮತ್ತು ಬಷೀರಾ ಬಾನುಗೆ ಹತ್ತು ವರ್ಷಗಳ ಹಿಂದೆ ಶಾದಿ ಡಾಟ್‌ ಕಾಮ್‌ನಲ್ಲಿ ಪರಿಚಯವಾಗಿತ್ತು.

ಹಜರತ್‌ ಮೌಲ್ವಿ ತನಗೆ ಅಲೋಪಥಿ, ಮಾಟ–ಮಂತ್ರ ತಿಳಿದಿದೆ. ನಿಧಿ ಪತ್ತೆಹಚ್ಚುವ ಪರಿಣತಿ ಇದೆ ಎಂದು ಬಷೀರಾಳನ್ನು ನಂಬಿಸಿದ್ದ. ಈ ವಿಷಯವನ್ನು ಬಷೀರಾ ತನ್ನ ಸ್ನೇಹಿತ ಇಕ್ಬಾಲ್‌ ಬಳಿ ಹಂಚಿಕೊಂಡಿದ್ದಳು. ಗದಗ ತಾಲ್ಲೂಕಿನ ಇಕ್ಬಾಲ್‌ಗೆ ಗೂಳಪ್ಪ ಪರಿಚಯವಿದ್ದರು. ಗೂಳಪ್ಪನಿಗೆ ಲಕ್ಕುಂಡಿಯ ಸಣ್ಣಬಸಪ್ಪ ಮತ್ತು ದೊಡ್ಡಬಸಪ್ಪ ಸ್ನೇಹಿತರು. ಹೀಗೆ ಸಂಬಂಧಗಳ ಸರಪಳಿ ಮೂಲಕ ಹಜರತ್‌ ಮೌಲ್ವಿ ನಿಧಿಯ ನಾಟಕ ಕಟ್ಟಿ ವಂಚನೆಯ ಜಾಲ ಹೆಣೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕಪ್ಪು ಮೆಣಸು ಎರಚಿ ನಿಧಿ ಜಾಗ ಗುರುತಿಸಿದ್ದ ಚಾಲಾಕಿ: 2022ರ ಸೆಪ್ಟೆಂಬರ್‌ನಲ್ಲಿ ಹಜರತ್‌ ಮೌಲ್ವಿ ಲಕ್ಕುಂಡಿಗೆ ಬಂದು ಸಣ್ಣಬಸಪ್ಪ ಹಾಗೂ ದೊಡ್ಡಬಸಪ್ಪ ಅವರ ಜಮೀನಿನಲ್ಲಿ ಕಪ್ಪು ಮೆಣಸು ಹಾಗೂ ಕೆಲವು ವಸ್ತುಗಳನ್ನು ಎಸೆದು ‘ಇಲ್ಲೇ ನಿಧಿ ಇದೆ’ ಎಂದು ಜಾಗ ಗುರುತಿಸಿ, ಒಂದು ತಿಂಗಳ ನಂತರ ಬರುವುದಾಗಿ ಹೇಳಿ ಹೋಗಿದ್ದ. ಬಳಿಕ, ಮಂಜುನಾಥ ರೆಸಿಡೆನ್ಸಿ ಸಮೀಪದ ಅಂಗಡಿಯಲ್ಲಿ ₹80ಕ್ಕೆ 80 ಚಾಕೊಲೆಟ್‌ ಕಾಯಿನ್ಸ್‌ ಖರೀದಿಸಿ, ಹಂಡೆಯ ತುಂಬ ಮಣ್ಣು ತುಂಬಿ, ಮೇಲೆ ಚಾಕೊಲೆಟ್‌ ಇಟ್ಟು ಯಾರಿಗೂ ಗೊತ್ತಾಗದಂತೆ ಜಮೀನಿನಲ್ಲಿ ಮುಂಚಿತವಾಗಿ ಹೂತಿಟ್ಟಿದ್ದ. ಬಳಿಕ ವಂಚನೆಗೆ ಸಂಚು ರೂಪಿಸಲು ಸಿದ್ಧತೆ ಮಾಡಿಕೊಂಡಿದ್ದ.

ಗದಗ ನಗರದ ಮಹೇಂದ್ರಕರ ಸರ್ಕಲ್‌ ಬಳಿ ಇರುವ ಸ್ಟೀಲ್‌ ಅಂಗಡಿಯಲ್ಲಿ ₹6,800 ಕೊಟ್ಟು ಹಳೆಯ ಹಂಡೆ ಖರೀದಿಸಿದ್ದ. ಅದಕ್ಕೆ ಬಟ್ಟೆ ಸುತ್ತಿ, ಪೂಜೆ ಸಾಮಾನು ಎಂದು ಹೇಳಿ ಜುಬೇರ್‌ನನ್ನು ಕರೆದುಕೊಂಡು ಲಕ್ಕುಂಡಿಗೆ ಹೋಗಿದ್ದ. ಮೊದಲೇ ಹೂತಿಟ್ಟಿದ್ದ ಜಾಗದಲ್ಲಿ ಆರು ಅಡಿ ಗುಂಡಿ ತೆಗೆದಾಗ ಅಲ್ಲಿ ಹಂಡೆ ಪತ್ತೆಯಾಗಿದೆ. ಅದರ ಮೇಲೆ ಚಿನ್ನದ ಬಣ್ಣ ಹಾಳೆ ಸುತ್ತಿದ ಚಾಕೊಲೆಟ್‌ ಕಾಯಿನ್ ಕಾಣಿಸಿವೆ. ಮೌಲ್ವಿ ವಂಚಿಸುವ ಉದ್ದೇಶದಿಂದ ಈ ಸನ್ನಿವೇಶವನ್ನು ಜುಬೇರ್‌ ಮೂಲಕ ವಿಡಿಯೊ ಚಿತ್ರೀಕರಣ ಮಾಡಿಸಿಕೊಂಡಿದ್ದ.

ಬಳಿಕ ಜಮೀನಿನಲ್ಲಿ ಹೂತಿಟ್ಟಿದ್ದ ಹಂಡೆಯನ್ನು ಹೊರತೆಗೆದು, ‘ನಿಮ್ಮ ಪೂರ್ವಜರ ನಿಧಿ ನನಗೆ ದಕ್ಕದು. ಹಣ ಕೊಟ್ಟರೆ ಈ ಚಿನ್ನದ ಹಂಡೆ ನಿಮ್ಮದು’ ಎಂದು ಸಣ್ಣಬಸಪ್ಪ, ದೊಡ್ಡಬಸಪ್ಪ ಅವರನ್ನು ನಂಬಿಸಿದ್ದಾನೆ. ಆದರೆ, ಅವರ ಬಳಿ ಮೌಲ್ವಿ ಕೇಳಿದಷ್ಟು ಹಣ ಇರಲಿಲ್ಲವಾದ್ದರಿಂದ ಸಿಟ್ಟಿಗೆದ್ದ ಮೌಲ್ವಿ, ‘ಇದು ಯಾರಿಗೂ ದಕ್ಕದು. ನಿಧಿ ಮಣ್ಣಾಗಲಿ’ ಎಂದು ಹೇಳಿ ಹಂಡೆಯನ್ನು ಒದ್ದು ಹೋಗಿದ್ದ.

ವೃದ್ಧ ಬಿಜ್ಜು ನೋಯ್ಡಾದ ಮರಿಯಂಳಿಗೂ ವಂಚನೆ

ಹಜರತ್‌ ಮೌಲ್ವಿ ತಮಿಳುನಾಡಿನ ಗುಡ್ಲೂರಿನ ಬಿಜ್ಜು ಎಂಬ ವ್ಯಕ್ತಿಯ ಮಗನ ಆರೋಗ್ಯ ಸರಿಪಡಿಸುವುದಾಗಿ ಹೇಳಿ ₹1 ಲಕ್ಷ ಪಡೆದು ಮೋಸ ಮಾಡಿದ್ದ. ಅದೇರೀತಿ ದೆಹಲಿಯ ನೋಯ್ಡಾದ ಮರಿಯಂಳಿಗೂ ವಂಚಿಸಿದ್ದ. ಹೀಗೆ ಹಜರತ್‌ ಮೌಲ್ವಿ ಜನರ ಅಸಹಾಯಕತೆಯನ್ನು ದಾಳವಾಗಿ ಬಳಸಿಕೊಂಡು ಎಲ್ಲರನ್ನೂ ತನ್ನ ಸಂಚಿನ ಜಾಲದೊಳಕ್ಕೆ ಸಿಲುಕಿಸಿದ್ದ. ನಿಧಿಯ ಕತೆಗೆ ಅವರಿಗೆ ಗೊತ್ತಿಲ್ಲದಂತೆ ಚಾಣಾಕ್ಷತನದಿಂದ ಬಳಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಹಜರತ್‌ ಮೌಲ್ವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.