
ಗದಗ: ಆಸ್ತಿ ಸಲುವಾಗಿ ಪತಿಯನ್ನು ಗೃಹಬಂಧನದಲ್ಲಿದ್ದಾರೆ ಎಂದು ಸಾರ್ವಜನಿಕರು ಆರೋಪ ಮಾಡಿದ ಹಿನ್ನಲೆಯಲ್ಲಿ ಬೆಟಗೇರಿಯ ವೀರಾಂಜನೇಯ ದೇವಸ್ಥಾನ ಸಮೀಪದ ಕಲಬುರಗಿ ಓಣಿಯಲ್ಲಿರುವ ಮನೆಗೆ ಭೇಟಿ ನೀಡಿ, ಪರಿಶೀಲಿಸಿದ ಪೊಲೀಸರು ವ್ಯಕ್ತಿಯನ್ನು ಬಂಧ ಮುಕ್ತಗೊಳಿಸಿದ ಘಟನೆ ಗುರುವಾರ ನಡೆದಿದೆ.
ಗಜಾನನಸಾ ಬಸವಾ (54) ಅವರನ್ನು ಪತ್ನಿ ಶೋಭಾ 15 ದಿನಗಳಿಂದ ತಗಡಿನ ಕೊಠಡಿಯಲ್ಲಿ ಕೂಡಿಹಾಕಿದ್ದರು ಎಂದು ಸ್ಥಳೀಯರು ದೂರಿದ್ದರು. ಈ ಹಿನ್ನಲೆಯಲ್ಲಿ ಬೆಟಗೇರಿ ಠಾಣೆಯ ಪಿಎಸ್‌ಐ ರಾಜೇಶ್ ಬಟಕುರ್ಕಿ ಮತ್ತು ಸಿಬ್ಬಂದಿ ಗಜಾನಾನಸಾ ಅವರ ಮನೆಗೆ ಭೇಟಿ ನೀಡಿ, ಶೋಭಾ ಅವರನ್ನು ವಿಚಾರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶೋಭಾ, ‘ಪತಿ ಗಜಾನನ ಅವರನ್ನು ಕೂಡಿ ಹಾಕಿಲ್ಲ. ಮಾನಸಿಕವಾಗಿ ಅಸ್ವಸ್ಥರಾಗಿದ್ದರಿಂದ ಪ್ರತ್ಯೇಕ ಕೋಣೆಯಲ್ಲಿ ಇರಿಸಿದ್ದೇವೆ. ಅಲ್ಲದೇ, ಪತಿಯ ಸಹೋದರಿ ಇಲ್ಲಿಗೆ ಬಂದಾಗಲೆಲ್ಲಾ ಅವರಿಂದ ಹಣ ಪಡೆದುಕೊಂಡು ಹೋಗುತ್ತಾರೆ. ಈ ಕಾರಣಕ್ಕೆ ಸ್ವಲ್ಪ ದಿನಗಳಿಂದ ಪ್ರತ್ಯೇಕವಾಗಿರಿಸಿದ್ದೇವೆ’ ಎಂದು ಹೇಳಿದರು.
ಬಳಿಕ ಶೋಭಾ ಅವರಿಗೆ ತಿಳಿಹೇಳಿದ ಪೊಲೀಸರು ಕೊಠಡಿಯ ಬೀಗ ತೆಗೆಸಿ, ಗಜಾನನಸಾ ಅವರನ್ನು ಬಂಧಮುಕ್ತಗೊಳಿಸಿದರು. ಜತೆಯಲ್ಲೇ ಇರಿಸಿಕೊಂಡು ಕಾಳಜಿ ಮಾಡುವಂತೆ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.