ಗದಗ: ‘ಸಹಕಾರಿ ಕ್ಷೇತ್ರದಲ್ಲಿ ಮಹತ್ವದ ಪಾತ್ರ ವಹಿಸಿದ ಕೆ.ಎಚ್.ಪಾಟೀಲ ಅವರು ಸಮಗ್ರ ಕರ್ನಾಟಕದ ಅಭಿವೃದ್ಧಿಯ ದೂರದೃಷ್ಟಿ ಹೊಂದಿದ್ದರು. ಅರಣ್ಯ ಸಚಿವರಾಗಿದ್ದ ಅವರು ಕೈಗೊಂಡ ದಿಟ್ಟ ನಿಲುವಿನಿಂದ ಇಂದು ನಮ್ಮ ರಾಜ್ಯದಲ್ಲಿ ಪರಿಸರ ಮತ್ತು ಅರಣ್ಯ ಭೂಮಿ ಉಳಿದಿದೆ’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.
ನಗರದಲ್ಲಿ ಭಾನುವಾರ ನಡೆದ ಕೆ.ಎಚ್.ಪಾಟೀಲ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕೆ.ಎಚ್.ಪಾಟೀಲರ ಸಂಕಲ್ಪ, ಸಿದ್ಧಾಂತದ ಕಾರಣಕ್ಕೆ ಗದಗ ಜಿಲ್ಲೆ ಮಾದರಿಯಾಗಿದೆ’ ಎಂದರು.
ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ‘ಗದಗ ಜಿಲ್ಲೆಯನ್ನು ಸಹಕಾರಿ ಜಿಲ್ಲೆಯನ್ನಾಗಿಸಿದ ಕೀರ್ತಿ ಕೆ.ಎಚ್.ಪಾಟೀಲರಿಗೆ ಸಲ್ಲುತ್ತದೆ. ಸರ್ವರ ಅಭಿವೃದ್ಧಿಗೆ ನೆರವಾಗುವ ಸಹಕಾರ ಕ್ಷೇತ್ರವನ್ನು ಉಳಿಸಲು ರಾಜ್ಯ ಸರ್ಕಾರ ಕ್ರಮ ವಹಿಸಬೇಕು. ಗ್ಯಾರಂಟಿ ಯೋಜನೆಗಳ ಜೊತೆಗೆ ರಾಜ್ಯದ ಅಭಿವೃದ್ಧಿಗೆ ಒತ್ತು ಕೊಡಬೇಕು’ ಎಂದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ‘ಕೆ.ಎಚ್.ಪಾಟೀಲ ಅವರು ಗ್ರಾಮ ಪಂಚಾಯಿತಿಯಿಂದ ಸಚಿವ ಸ್ಥಾನದವರೆಗೆ ತಮಗೆ ಸಿಕ್ಕ ಅವಕಾಶವನ್ನು ಜನರ ಬದುಕಿನ ಬದಲಾವಣೆಗೆ ಶ್ರಮಿಸಿದರು’ ಎಂದರು.
ಸಚಿವ ಎಚ್.ಕೆ.ಪಾಟೀಲ ಮಾತನಾಡಿ, ‘ಕೆ.ಎಚ್.ಪಾಟೀಲ ಅವರು ಕುಟುಂಬದ ಆಸ್ತಿಯಾಗಿರಲಿಲ್ಲ; ಸಾರ್ವಜನಿಕ ಆಸ್ತಿಯಾಗಿದ್ದರು. ಅವರ ಸಿದ್ಧಾಂತಗಳು ಹತ್ತು ಹಲವು ರೀತಿಯಲ್ಲಿ ಅನುಷ್ಠಾನಗೊಳ್ಳುತ್ತಿದೆ’ ಎಂದರು.
ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್, ಸಭಾಪತಿ ಬಸವರಾಜ ಹೊರಟ್ಟಿ, ಶಾಸಕರಾದ ಸಿ.ಸಿ.ಪಾಟೀಲ, ಎಸ್.ವಿ.ಸಂಕನೂರ, ಎನ್.ಎಚ್.ಕೋನರಡ್ಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.