
ಗದಗ: ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ನಡೆದಿರುವ ಉತ್ಖನನದ ವೇಳೆ ಶನಿವಾರ ಪ್ರಾಚೀನ ಕಾಲದ ಶಿಲೆ ಪತ್ತೆಯಾಗಿದ್ದು, ಅರ್ಧದಷ್ಟು ಗೋಚರಿಸಿದೆ. ‘ಉತ್ಖನನ ಇನ್ನಷ್ಟು ಆಳಕ್ಕೆ ಇಳಿದರೆ, ಅದು ಏನು ಎಂಬುದರ ನಿಖರ ಮಾಹಿತಿ ಲಭ್ಯವಾಗಲಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಶನಿವಾರ ಸಿಕ್ಕ ಪ್ರಾಚ್ಯ ಅವಶೇಷವು ದೇವಸ್ಥಾನಗಳಲ್ಲಿ ದೈವಕ್ಕೆ ಅಭಿಷೇಕ ನಡೆಸಿದ ಸಂದರ್ಭದಲ್ಲಿ ನೀರು ಹರಿದು ಹೋಗಲು ಇರುವ ಪಾಣಿಪೀಠದಂತಿದೆ. ಅದರ ಕೆಳಗೆ ಏನಿದೆ ಎಂಬುದು ಗೊತ್ತಾಗಿಲ್ಲ. ಸದ್ಯ ಎರಡೂವರೆ ಅಡಿ ಉತ್ಖನನ ನಡೆದಿದೆ. ಹಂತ ಹಂತವಾಗಿ ಅದರ ಮಾಹಿತಿ ಲಭ್ಯವಾಗಲಿದೆ’ ಎಂದು ಲಕ್ಕುಂಡಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ ತಿಳಿಸಿದ್ದಾರೆ.
ಉತ್ಖನನ ಸ್ಥಳದ ಸುತ್ತಮುತ್ತ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧವಿದೆ. ಫೋಟೊಗ್ರಫಿ ಮತ್ತು ವಿಡಿಯೊಗ್ರಫಿ ನಿಷೇಧಿಸಲಾಗಿದೆ. ಇದಕ್ಕೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
‘ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಜಾತ್ರೆಯನ್ನು 47 ವರ್ಷಗಳಿಂದ ಅದ್ದೂರಿಯಾಗಿ ನಡೆಸುತ್ತಿದ್ದೇವೆ. ಈಗ ಉತ್ಖನನದ ಕಾರಣ ಜಿಲ್ಲಾಡಳಿತ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಿದೆ.ಇದರಿಂದ ಮಾರ್ಚ್‌ನಲ್ಲಿ ಜಾತ್ರೆ ನಡೆಸುವುದಾದರೂ ಹೇಗೆ? ನಿರ್ಬಂಧ ಆದೇಶ ಹಿಂಪಡೆಯಲಿ’ ಎಂದು ದೇವಸ್ಥಾನದ ಸಮಿತಿಯವರು ಆಗ್ರಹಿಸಿದ್ದಾರೆ.
‘ಲಕ್ಕುಂಡಿಯ ಗತವೈಭವವನ್ನು ಪುನಃ ಸ್ಥಾಪಿಸಲು ಉತ್ಖನನ ನಡೆದಿದೆಯೇ ಹೊರತು ಜಾತ್ರೆಗೆ ಅಡ್ಡಿಪಡಿಸುವ ಉದ್ದೇಶದಿಂದ ಅಲ್ಲ. ಈ ವರ್ಷವೂ ಜಾತ್ರಾ ಮಹೋತ್ಸವವನ್ನು ಅದ್ದೂರಿಯಾಗಿಯೇ ನಡೆಸಲಾಗುವುದು’ ಎಂದು ಲಕ್ಕುಂಡಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಸದಸ್ಯ ಸಿದ್ದು ಪಾಟೀಲ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.