
ಲಕ್ಷ್ಮೇಶ್ವರ ತಾಲ್ಲೂಕು ಯಳವತ್ತಿಯಲ್ಲಿ ಶನಿವಾರ ಜರುಗಿದ ದ್ವಿತೀಯ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿರುವ ಲಲಿತಕ್ಕ ಕೆರಿಮನಿ
ಲಕ್ಷ್ಮೇಶ್ವರ: ‘ನಮ್ಮೆಲ್ಲರ ಅಭಿಮಾನದ ಕನ್ನಡ ಭಾಷೆ ಉಳಿದು ಬೆಳೆಯಬೇಕಾದರೆ ಪ್ರಾಥಮಿಕ ಶಿಕ್ಷಣ ಕನ್ನಡದಲ್ಲಿರಬೇಕು. ಮಾತೃ ಭಾಷೆಯಲ್ಲಿ ಶಿಕ್ಷಣ ದೊರೆತಾಗ ಮಾತ್ರ ಕನ್ನಡ ಉಳಿಸಲು ಸಾಧ್ಯ’ ಎಂದು ಲಕ್ಷ್ಮೇಶ್ವರ ತಾಲ್ಲೂಕಾ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಲಲಿತಕ್ಕ ಕೆರಿಮನಿ ತಿಳಿಸಿದರು.
ತಾಲ್ಲೂಕಿನ ಯಳವತ್ತಿ ಗ್ರಾಮದಲ್ಲಿ ಶನಿವಾರ ಜರುಗಿದ ಸಮ್ಮೇಳನದಲ್ಲಿ ಮಾತನಾಡಿದರು.
‘ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿಯೇ ಮೆರೆಯಬೇಕು. ಏಕೆಂದರೆ ಕನ್ನಡ ಭಾಷೆಗೆ ಆ ತಾಕತ್ತು, ಸಾಮರ್ಥ್ಯ ಇದೆ. ಕನ್ನಡ ಕೇವಲ ಭಾಷೆಯಲ್ಲ. ಅದು ನಮ್ಮ ಸಂಸ್ಕೃತಿ, ಪರಂಪರೆಯ ದ್ಯೋತಕವಾಗಿದೆ. ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡಿಗವಾಗಿರು ಎಂಬ ಕುವೆಂಪು ಅವರ ಕವಿವಾಣಿಯಂತೆ ಪ್ರತಿಯೊಬ್ಬ ಕನ್ನಡಿಗನ ಮನದಾಳದಲ್ಲಿ ಕನ್ನಡ ಮಿಡಿಯಬೇಕು. ಕನ್ನಡ ಪ್ರೀತಿಸುವುದು ಬೆಳೆಸುವುದು ಗೌರವಿಸುವುದು ನಮ್ಮ ನಿಜವಾದ ನಾಡ ಭಕ್ತಿಯಾಗಿದೆ ಎಂದು ಪ್ರತಿಪಾದಿಸಿದರು.
ಕನ್ನಡ ಮಾಧ್ಯಮ ಶಾಲೆಗಳಿಗೆ ಎಲ್ಲಾ ಅನುಕೂಲತೆಗಳನ್ನು ಒದಗಿಸಿ ಅರ್ಹ ಶಿಕ್ಷಕರನ್ನು ನೇಮಿಸುವ ಮೂಲಕ ಶೈಕ್ಷಣಿಕ ಪ್ರಗತಿ, ಬೆಳವಣಿಗೆಗೆ ಸರ್ಕಾರ ಮುಂದಾಗಬೇಕು. ಸಾಹಿತ್ಯ ಭವನ, ರಂಗಮಂದಿರ, ಕ್ರೀಡಾ ಮೈದಾನ, ಪ್ರವಾಸಿ ತಾಣಗಳ ಅಭಿವೃದ್ಧಿ, ನೀರಾವರಿ ಯೋಜನೆಗಳ ಜೊತೆಗೆ ಹಳ್ಳಿಯ ಸಂಸ್ಕøತಿ ಉಳಿವಿಗಾಗಿ ಭಜನಾ ಮಂಡಳಿ, ಕಲಾ ತಂಡಗಳಿಗೂ ಸರ್ಕಾರ ಸೂಕ್ತ ಧನ ಸಹಾಯ ನೀಡಿ ಪ್ರೋತ್ಸಾಹ ನೀಡಬೇಕು ಎಂದು ಆಗ್ರಹಿಸಿದರು.
’ಚಿಕ್ಕ ಮಕ್ಕಳಲ್ಲಿ ಕನ್ನಡ ಪುಸ್ತಕ ಓದುವ ಹವ್ಯಾಸ ಬೆಳೆಸಬೇಕು. ಶಾಲೆಗಳಲ್ಲಿ ಕಡ್ಡಾಯವಾಗಿ ಗ್ರಂಥಾಲಯಗಳನ್ನು ತೆರೆಯಬೇಕು. ಆಡಳಿತ, ಶಿಕ್ಷಣ ವ್ಯವಹಾರ, ಸೇರಿದಂತೆ ಎಲ್ಲ ರಂಗಗಳಲ್ಲಿ ಕನ್ನಡ ಬಳಕೆ ಹೆಚ್ಚಾಗಬೇಕು. ಭಾಷೆಯನ್ನು ಉಳಿಸುವುದು ಎಂದರೆ ನಮ್ಮ ಗುರುತನ್ನು, ಆತ್ಮ ಗೌರವವನ್ನು, ಭವಿಷ್ಯವನ್ನು ಉಳಿಸಿದಂತೆ’ ಎಂದು ಹೇಳಿದರು. ‘ಕನ್ನಡ ಶಾಲೆಗಳನ್ನು ಮುಚ್ಚದೆ ಅವುಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ವಿಶೇಷ ಆದ್ಯತೆ ನೀಡಬೇಕಾದ ಅಗತ್ಯ ಇದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.