ADVERTISEMENT

ಮಹದಾಯಿ ಹೋರಾಟ: ಏಳನೇ ವರ್ಷಕ್ಕೆ ಪದಾರ್ಪಣೆ, ರೈತರ ಬೃಹತ್‌ ಪ್ರತಿಭಟನೆ

ಕರಾಳ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2021, 12:04 IST
Last Updated 16 ಜುಲೈ 2021, 12:04 IST
ರೈತರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
ರೈತರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.    

ನರಗುಂದ (ಗದಗ ಜಿಲ್ಲೆ): ಮಹದಾಯಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ನಡೆಯುತ್ತಿರುವ ರೈತ ಸೇನೆ ಹಾಗೂ ಮಹದಾಯಿ ಹೋರಾಟ ಸಮಿತಿಯ ಹೋರಾಟ ಶುಕ್ರವಾರದಂದು ಏಳನೇ ವರ್ಷಕ್ಕೆ ಪದಾರ್ಪಣೆ ಮಾಡಿತು.

ಈ ಹಿನ್ನಲೆಯಲ್ಲಿ ರೈತ ಸೇನೆ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ನೇತೃತ್ವದಲ್ಲಿ ಈ ದಿನವನ್ನು ಕರಾಳ ದಿನಾಚರಣೆಯನ್ನಾಗಿ ಆಚರಿಸಲಾಯಿತು.

ಇಲ್ಲಿನ ಪುರಸಭೆ ಆವರಣದಲ್ಲಿರುವ ಭಾಸ್ಕರರಾವ್ ರಾವ್ ಭಾವೆ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ರೈತರು ಕಪ್ಪು ಬಾವುಟ ಪ್ರದರ್ಶಿಸಿ ಮೌನ ಪ್ರತಿಭಟನೆ ಆರಂಭಿಸಿದರು. ಬಳಿಕ ಕಪ್ಪು ಪಟ್ಟಿ ಧರಿಸಿ ಮಳೆಯಲ್ಲಿಯೇ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು. ನೂರಾರು ಮಹಿಳೆಯರು ರೈತಸೇನೆ ಸಮವಸ್ತ್ರ, ಹಸಿರು ಶಾಲು ಧರಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ADVERTISEMENT

ಈ ಸಂದರ್ಭದಲ್ಲಿಒ ರೈತ ಮುಖಂಡ ವೀರೇಶ ಸೊಬರದಮಠ, ‘ಮಹದಾಯಿ ಯೋಜನೆ ಅನುಷ್ಠಾನಕ್ಕೆ ಮಧ್ಯಪ್ರವೇಶಿಸುವಂತೆ ಆಗ್ರಹಿಸಿ ಸುಪ್ರೀಂಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವುದು, ಮಲಪ್ರಭಾ ಬಲದಂಡೆ ನೀರಾವರಿ ಕಾಲುವೆಗಳ ಪುನರ್ ನಿರ್ಮಾಣ ಕಾಮಗಾರಿ ಕಳಪೆಯಾಗಿದ್ದು ಸಿಬಿಐ ತನಿಖೆ ಒಪ್ಪಿಸಬೇಕು, ಮಹದಾಯಿ ಹೋರಾಟದಲ್ಲಿ ಮೃತಪಟ್ಟ 11 ರೈತರಿಗೆ ಕೂಡಲೇ ಪರಿಹಾರ ನೀಡಬೇಕು, ಶಾಶ್ವತ ಬೆಂಬಲ ಬೆಲೆ ಖರೀದಿ ಕೇಂದ್ರ ಸ್ಥಾಪಿಸಬೇಕು ಹಾಗೂ ಮಹದಾಯಿ ಯೋಜನೆ ಅನುಷ್ಠಾನ ಹಾಗೂ ರೈತರ ಸಮಸ್ಯೆ ಚರ್ಚಿಸಲು ರಾಜ್ಯಪಾಲರ ಭೇಟಿಗೆ ಅವಕಾಶ ನೀಡಬೇಕು’ ಎಂಬ ಐದು ನಿರ್ಣಯಗಳನ್ನು ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.