
ಗದಗ: ಬೆಂಬಲ ಬೆಲೆ ಯೋಜನೆ ಅಡಿ ಪ್ರತಿ ರೈತನಿಂದ 5 ಕ್ವಿಂಟಲ್ ಮೆಕ್ಕೆಜೋಳವನ್ನು ಖರೀದಿ ಮಾಡಲು ನಿರ್ಧರಿಸಿತ್ತು. ಈ ಆದೇಶವನ್ನು ಪರಿಷ್ಕರಣೆ ಮಾಡಿ ರಾಜ್ಯ ಸರ್ಕಾರ ಕನಿಷ್ಠ 12 ಕ್ವಿಂಟಲ್; ಗರಿಷ್ಠ 20 ಕ್ವಿಂಟಲ್ ಮೆಕ್ಕೆಜೋಳವನ್ನು ಬೆಂಬಲ ಬೆಲೆಯಡಿ ಪ್ರತಿ ಕ್ವಿಂಟಲ್‌ಗೆ ₹2,400ರಂತೆ ಖರೀದಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಹೇಳಿದರು.
ತಾಲ್ಲೂಕಿನ ಕಣವಿ ಗ್ರಾಮದಲ್ಲಿ ಮಂಗಳವಾರ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
‘ಈಗಾಗಲೇ ಗದಗ ತಾಲ್ಲೂಕಿನ ಮಲ್ಲಸಮುದ್ರ ಗ್ರಾಮದಲ್ಲಿ ಧಾರವಾಡ ಹಾಲು ಒಕ್ಕೂಟದ ಹಾಲು ಸಂಗ್ರಹಣ ಕೇಂದ್ರದಲ್ಲಿ ಮೆಕ್ಕೆಜೋಳ ಖರೀದಿ ನೋಂದಣಿ ಪ್ರಕ್ರಿಯೆಯನ್ನು ಮಂಗಳವಾರದಿಂದ ಪ್ರಾರಂಭಿಸಲಾಗಿದೆ’ ಎಂದರು.
‘ಪ್ರಸಕ್ತ ವರ್ಷ ರಾಜ್ಯದಲ್ಲಿ ಅಂದಾಜು 55 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಬೆಳೆದಿದ್ದು, ಈ ಖರೀದಿ ಪ್ರಕ್ರಿಯೆಯನ್ನು ಹೇಗೆ ಮಾಡಬೇಕೆಂಬುದು ಸರ್ಕಾರಕ್ಕೆ ಒಂದು ದೊಡ್ಡ ಸವಾಲಾಗಿತ್ತು. ಹೇಗಾದರೂ ಮಾಡಿ ರೈತರಿಗೆ ಸ್ಪಂದಿಸಬೇಕು ಎಂಬ ಉದ್ದೇಶದಿಂದ ಸರ್ಕಾರ ಪ್ರತಿ ರೈತನಿಂದ ಕನಿಷ್ಠ 12 ಕ್ವಿಂಟಲ್; ಗರಿಷ್ಠ 20 ಕ್ವಿಂಟಲ್ ಮೆಕ್ಕೆಜೋಳ ಖರೀದಿ ಮಾಡಲಿದೆ’ ಎಂದರು.
ಕಣವಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ರೀಡಾ ಮೈದಾನ ಹಾಗೂ ಹೈಮಾಸ್ಟ್ ವಿದ್ಯುತ್ ದೀಪ ಉದ್ಘಾಟಿಸಲಾಯಿತು. ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು. ಅಂದಾಜು ₹16 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಗ್ರಾಮ ಪಂಚಾಯಿತಿ ಉಪ ಕಾರ್ಯಾಲಯವನ್ನು ಸಚಿವ ಉದ್ಘಾಟಿಸಿದರು.
ಗ್ರಾಮದ ಪ್ರೌಢಶಾಲೆ ಮೈದಾನದಲ್ಲಿ ₹41 ಲಕ್ಷ ವೆಚ್ಚದಲ್ಲಿ ಮೂರು ಕೊಠಡಿಗಳನ್ನು ಉದ್ಘಾಟಿಸಲಾಯಿತು. ಅಂದಾಜು ₹18 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಅಂಬೇಡ್ಕರ್ ಭವನ ಉದ್ಘಾಟಿಸಲಾಯಿತು.
ಅಂದಾಜು ₹33 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಹಳ್ಳಿ ಗ್ರಾಮೀಣ ಸಂತೆ ಕಟ್ಟಡದ ಉದ್ಘಾಟನೆ ನೆರವೇರಿತು. ರಂಗ ಮಂದಿರ ಹಾಗೂ ನಾಟಕ ಮನೆಯನ್ನು ಇದೇ ಸಂದರ್ಭದಲ್ಲಿ ಉದ್ಘಾಟಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಅವರ ಅನುದಾನದಲ್ಲಿ ನಿರ್ಮಾಣವಾದ ಶುದ್ಧ ಕುಡಿಯುವ ನೀರು ಘಟಕವನ್ನು ಇದೇ ಸಂದರ್ಭದಲ್ಲಿ ಉದ್ಘಾಟಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹಾಲವ್ವ ಕುರಿ, ಉಪಾಧ್ಯಕ್ಷೆ ರೇಣವ್ವ ತಳವಾರ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿದ್ದು ಪಾಟೀಲ, ಗದಗ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶರಣ ಬಸನಗೌಡ ಪಾಟೀಲ, ಬಾಬುಸಾಬ ಕಿಲ್ಲೆದಾರ, ಬಸವರಾಜ ಬಂದಕ್ಕನವರ ಸೇರಿದಂತೆ ಹಲವರು ಇದ್ದರು.
ಹೈಮಾಸ್ಟ್ ವಿದ್ಯುತ್ ದೀಪ ಉದ್ಘಾಟನೆ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿವಿತರಣೆ ಅಂಬೇಡ್ಕರ್ ಭವನ ಉದ್ಘಾಟನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.