ADVERTISEMENT

ಲಕ್ಷ್ಮೇಶ್ವರ | ಮೆಕ್ಕೆಜೋಳ ಖರೀದಿ ಗೊಂದಲ: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 5:50 IST
Last Updated 22 ಡಿಸೆಂಬರ್ 2025, 5:50 IST
ಮೆಕ್ಕೆಜೋಳ ಮಾರಾಟಕ್ಕೆ ಲಕ್ಷ್ಮೇಶ್ವರದ ಬೆಂಬಲ ಬೆಲೆ ಖರೀದಿ ಕೇಂದ್ರದ ಎದುರು ಕಾಯುತ್ತಿರುವ ರೈತರು
ಮೆಕ್ಕೆಜೋಳ ಮಾರಾಟಕ್ಕೆ ಲಕ್ಷ್ಮೇಶ್ವರದ ಬೆಂಬಲ ಬೆಲೆ ಖರೀದಿ ಕೇಂದ್ರದ ಎದುರು ಕಾಯುತ್ತಿರುವ ರೈತರು   

ಲಕ್ಷ್ಮೇಶ್ವರ: ಪಟ್ಟಣದ ಮೆಕ್ಕೆಜೋಳ ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿ ತಾರತಮ್ಯ ನೀತಿ ಅನುಸರಿಸದೆ ಪ್ರತಿ ರೈತರ ಬೆಳೆ ಖರೀದಿಸಬೇಕು ಎಂದು ತಾಲ್ಲೂಕಿನ ರೈತರು ಭಾನುವಾರ ಒತ್ತಾಯಿಸಿದರು.

ಕಳೆದ ನಾಲ್ಕು ದಿನಗಳಿಂದ ಮೆಕ್ಕೆಜೋಳ ಮಾರಾಟಕ್ಕೆ ಟ್ರ್ಯಾಕ್ಟರ್‌ ತುಂಬಿಕೊಂಡು ಕೇಂದ್ರದ ಎದುರು ರೈತರು ಬೀಡು ಬಿಟ್ಟಿದ್ದಾರೆ. ಕಳೆದ ಒಂದು ವಾರದಿಂದ ಖರೀದಿ ಆರಂಭಿಸಿದ ಮುಂಡರಗಿ ತಾಲ್ಲೂಕು ಗಂಗಾಪುರದ ಎಥೆನಾಲ್ ಕಂಪನಿ ಭಾನುವಾರ ಏಕಾಏಕಿ ಖರೀದಿ ಸ್ಥಗಿತಗೊಳಿಸಿತು. ಇದರಿಂದ ಆಕ್ರೋಶಗೊಂಡ ರೈತರು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.      

ಮೆಕ್ಕೆಜೋಳ ಮಾರಾಟಕ್ಕೆ ನೋಂದಣಿ ಮಾಡಿಸಿದ ರೈತರ ಬೆಳೆಯನ್ನು ಮೊದಲು ಖರೀದಿ ಮಾಡಬೇಕು. ನಂತರ ನೋದಣಿ ಮಾಡಿಸದಿರುವ ರೈತರ ಬೆಳೆ ಖರೀದಿಸಬೇಕು ಎಂದು ರೈತರು ಒತ್ತಾಯಿಸಿದರು.

ADVERTISEMENT

ಕಳೆದ ಮೂರು ದಿನಗಳಿಂದ ಮೆಕ್ಕೆಜೋಳ ಟ್ರ್ಯಾಕ್ಟರ್‌ಗಳಲ್ಲಿ ತುಂಬಿಕೊಂಡು ಮೈ ಕೊರೆಯುವ ಚಳಿ ನಡುವೆಯೂ ಕೆಲಸ ಕಾರ್ಯ ಬಿಟ್ಟು ಕಾಲ ಕಳೆಯುತ್ತಿದ್ದೇವೆ. ಕೇಂದ್ರದವರು ನಮ್ಮ ಬೆಳೆಯನ್ನು ಇನ್ನೂ ತೆಗೆದುಕೊಳ್ಳುತ್ತಿಲ್ಲ’ ಎಂದು ತಾಲ್ಲೂಕಿನ ಪುಟಗಾಂವ್‍ಬಡ್ನಿ ಗ್ರಾಮದ ರೈತರಾದ ಸುನಿಲ ಸಾಲ್ಮನಿ, ರಾಜು ಸಾಲ್ಮನಿ, ಬಸವರಾಜ ಕೊರಕನವರ, ರವಿ ಗೊರ್ಜಿ ಅವಲತ್ತುಕೊಂಡರು.

ಸ್ಥಳಕ್ಕೆ ಆಗಮಿಸಿದ ಟಿಎಪಿಸಿಎಂಎಸ್ ಅಧ್ಯಕ್ಷ ಸೋಮೆಶ ಉಪನಾಳ, ‘ನೋಂದಣಿ ಮಾಡಿಸಿದ ಎಲ್ಲ ರೈತರಿಂದ ಮೆಕ್ಕೆಜೋಳ ಖರೀದಿಸುತ್ತೇವೆ. ರೈತರು ವದಂತಿಗಳಿಗೆ ಕಿವಿಗೊಡಬಾರದು’ ಎಂದು ಹೇಳಿದರು.

ನಂತರ ಮತ್ತೆ ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ಆರಂಭವಾಯಿತು.

Quote - ಧಾರವಾಡ ಕೆಎಂಎಫ್‍ ಕೂಡ ಪಟ್ಟಣದಲ್ಲಿಯೇ ಮೆಕ್ಕೆಜೋಳ ಖರೀದಿಸುವಂತೆ ನಿರ್ದೇಶನ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಸೋಮೆಶ ಉಪನಾಳ ಟಿಎಪಿಸಿಎಂಎಸ್ ಅಧ್ಯಕ್ಷ